ಇಂಗ್ಲೆಂಡ್ ತಂಡದ ಸರ್ವಶ್ರೇಷ್ಠ ಬೌಲರ್ ಜೇಮ್ಸ್ ಅ್ಯಂಡರ್ಸನ್ (James Anderson) ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅ್ಯಂಡರ್ಸನ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಈ ನಿವೃತ್ತಿಯ ಬೆನ್ನಲ್ಲೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಜೇಮ್ಸ್ ಅ್ಯಂಡರ್ಸನ್ ಅವರನ್ನು ಬೌಲಿಂಗ್ ಮೆಂಟರ್ ಆಗಿ ನೇಮಿಸಿದೆ.
ಅದರಂತೆ ಮುಂಬರುವ ದಿನಗಳಲ್ಲಿ ಇಂಗ್ಲೆಂಡ್ ತಂಡದ ಬೌಲಿಂಗ್ ಮೆಂಟರ್ ಆಗಿ ಜೇಮ್ಸ್ ಅ್ಯಂಡರ್ಸನ್ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಎಂದರೆ ಮೆಂಟರ್ ಹುದ್ದೆಯ ಜೊತೆಗೆ ಜಿಮ್ಮಿ ಇಂಗ್ಲೆಂಡ್ ಬ್ಯಾಟರ್ಗಳಿಗೆ ಬೌಲಿಂಗ್ ಮಾಡಲಿದ್ದಾರೆ.
ಮುಂಬರುವ ಸರಣಿಗಳ ಸವಾಲುಗಳನ್ನು ಎದುರಿಸಲು ಇಂಗ್ಲೆಂಡ್ ಬ್ಯಾಟರ್ಗಳಿಗೆ ನೆಟ್ಸ್‌ನಲ್ಲಿ ಜೇಮ್ಸ್ ಅ್ಯಂಡರ್ಸನ್ ಬೌಲಿಂಗ್ ಮಾಡಲಿದ್ದಾರೆ ಎಂದು ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಝಾಕ್ ಕ್ರಾಲಿ ಬಹಿರಂಗಪಡಿಸಿದ್ದಾರೆ.
ಜಿಮ್ಮಿ ಇಂಗ್ಲೆಂಡ್ ತಂಡದ ಬೌಲಿಂಗ್ ಮೆಂಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ನಮಗೆ ನೆಟ್ಸ್‌ನಲ್ಲಿ ಬೌಲ್ ಮಾಡಲಿದ್ದಾರೆ. ನಾನಂತು ಅವರ ಸೀಮ್ ಅಪ್ ಬಾಲ್ಗಳನ್ನು ಎದುರಿಸಿದ್ದೇನೆ. ಮುಂಬರುವ ದಿನಗಳಲ್ಲಿ ನೆಟ್ಸ್‌ನಲ್ಲಿ ಮತ್ತೆ ಜಿಮ್ಮಿಯನ್ನು ಎದುರಿಸಲಿದ್ದೇನೆ ಎಂದು ಝಾಕ್ ಕ್ರಾಲಿ ಹೇಳಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಬಳಿಕ ಜೇಮ್ಸ್ ಅ್ಯಂಡರ್ಸನ್ ನಿವೃತ್ತಿ ಘೋಷಿಸಿರುವ ಕಾರಣ, ದ್ವಿತೀಯ ಟೆಸ್ಟ್ನಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಜಿಮ್ಮಿ ಬದಲಿಗೆ ಮತ್ತೋರ್ವ ವೇಗದ ಬೌಲರ್ ಮಾರ್ಕ್ ವುಡ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅಲ್ಲದೆ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಪ್ಲೇಯಿಂಗ್ ಇಲೆವೆನ್ನಲ್ಲೂ ಸ್ಥಾನ ಪಡೆದಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್ಗೆ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್: ಝಾಕ್ ಕ್ರಾಲಿ, ಬೆನ್ ಡಕೆಟ್, ಒಲೀ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಮಾರ್ಕ್ ವುಡ್, ಶೋಯೆಬ್ ಬಶೀರ್.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?
ಇಂಗ್ಲೆಂಡ್ ಪರ 188 ಟೆಸ್ಟ್ ಪಂದ್ಯಗಳನ್ನಾಡಿರುವ ಜೇಮ್ಸ್ ಅ್ಯಂಡರ್ಸನ್ ಒಟ್ಟು 704 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ 194 ಏಕದಿನ ಪಂದ್ಯಗಳಿಂದ 269 ವಿಕೆಟ್ ಪಡೆದಿದ್ದಾರೆ. ಇನ್ನು 19 ಟಿ20 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದ 19 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಪಡೆದ ವೇಗದ ಬೌಲರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.