
ಜಿಟಿ vs ಆರ್ಸಿಬಿ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಹಿಡಿದ ರಜತ್ ಪಟಿದಾರ್ ಅವರ ಕ್ಯಾಚ್ ಈಗ ಚರ್ಚೆಗೆ ಕಾರಣ ಆಗಿದೆ. ರಜತ್ ಅವರು ಸಿಕ್ಸ್ ಬಾರಿಸುವ ಪ್ರಯತ್ನದಲ್ಲಿ ಇದ್ದರು. ಈ ವೇಳೆ ಚೆಂಡು ಹೋಲ್ಡರ್ ಕೈ ಸೇರಿತು. ಆ ಬಳಿಕ ಅವರು ಬಾಲ್ ಅನ್ನು ನೆಲಕ್ಕೆ ಉಜ್ಜಿಕೊಂಡು ಹೋದರು. ಈ ಕ್ಯಾಚ್ ಬಗ್ಗೆ ಚರ್ಚೆ ಶರುವಾಗಿದೆ. ಹಾಗಾದರೆ ನಿಯಮದ ಪ್ರಕಾರ ನೋಡೋದಾದರೆ ಈ ಕ್ಯಾಚ್ ಔಟೋ ಅಥವಾ ಇಲ್ಲವೋ? ಆ ಬಗ್ಗೆ ಇಲ್ಲಿದೆ ವಿವರ.
ಜೇಸನ್ ಹೋಲ್ಡರ್ ಹಿಡಿದ ಕ್ಯಾಚ್ ಬಗ್ಗೆ ವಿವಾದ ಆಗಿದೆ. ಜೇಸನ್ ಹೋಲ್ಡರ್ ಅವರು ಬಾಲ್ ಅನ್ನೇ ನೋಡುತ್ತಾ ಬಂದು, ಅದನ್ನು ಕೈಗೆ ತೆಗೆದುಕೊಂಡರು. ನಂತರ ನೆಲಕ್ಕೆ ಬಿದ್ದರು. ಬಾಲ್ ಅವರ ಕೈಯಲ್ಲೇ ಇದ್ದರೂ ಅದು ನೆಲಕ್ಕೆ ಉಜ್ಜುತ್ತಾ ಹೋಯಿತು. ನಂತರ ಅವರು ಬಾಲ್ ಹಿಡಿದ ಕೈಯನ್ನೇ ಊರಿ ಮೇಲಕ್ಕೆ ಎದ್ದರು. ಎಲ್ಲರೂ ಇದನ್ನು ನಾಟೌಟ್ ಕೊಡುತ್ತಾರೆ ಎಂದು ಭಾವಿಸಿದ್ದರು. ಆದರೆ, ಔಟ್ ಕೊಡಲಾಯಿತು. ಇದು ನಾಟೌಟ್ ಎಂದು ಭಾರತ ತಂಡ ಮಾಜಿ ಬೌಲರ್ ಹಾಗೂ ಕಮೆಂಟೇಟರ್ ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ.
ಅಂಪೈರ್ಗಳು ಔಟ್ ಕೊಟ್ಟಿದ್ದು ನಿಯಮಗಳನ್ನು ಆಧರಿಸಿಯೇ. ಮೆರಿಲಿಬೋನ್ ಕ್ರಿಕೆಟ್ ಕ್ಲಬ್ ರಚಸಿದ ನಿಯಮ 33.2.1ರ ಪ್ರಕಾರ ಅಂಪೈರ್ ಔಟ್ ಕೊಟ್ಟಿದ್ದಾರೆ. ಓರ್ವ ಫೀಲ್ಡರ್ ಕ್ಯಾಚ್ ಹಿಡಿದ ನಂತರ ಆತ ತನ್ನ ಶರೀರದ ಚಲನೆ ಮತ್ತು ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರಬೇಕು. ಆನಂತರ ಚೆಂಡು ನೆಲಕ್ಕೆ ತಗುಲಿದರೂ ಅದನ್ನು ‘ಔಟ್’ ಎಂದೇ ಪರಿಗಣಿಸಲಾಗುತ್ತದೆ.
ಜೇಸನ್ ಕ್ಯಾಚ್ ಹಿಡಿದಾಗ ದೇಹದ ಚಲನೆ ಹಾಗೂ ಬೌಲ್ ಮೇಲೆ ಅವರಿಗೆ ಸಂಪೂರ್ಣ ನಿಯಂತ್ರ ಇದೆ ಎಂದೇ ಥರ್ಡ್ ಅಂಪೈರ್ ಪರಿಗಣಿಸಿರಬಹುದು. ಹೀಗಾಗಿ, ಇದನ್ನು ಔಟ್ ಎಂದು ಕೊಟ್ಟಿದ್ದಾರೆ. ಫೀಲ್ಡರ್ ಚೆಂಡನ್ನು ಸುರಕ್ಷಿತವಾಗಿ ಕೈಯಲ್ಲಿ ಹಿಡಿದು, ತಾವು ಸಮತೋಲನ ಕಳೆದುಕೊಳ್ಳದೆ ನಿಯಂತ್ರಣದಲ್ಲಿದ್ದಾರೆ ಎಂದು ಖಚಿತವಾದ ಮೇಲೆ ಚೆಂಡು ನೆಲಕ್ಕೆ ತಗುಲಿದೆ ಎಂಬುದು ಥರ್ಡ್ ಅಂಪೈರ್ ವಾದ. ಆದರೆ, ಹೋಲ್ಡರ್ ನಿಯಂತ್ರಣದಲ್ಲಿ ಇರಲಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿತ್ತು.
ಇದನ್ನೂ ಓದಿ: ಇದೇ ಮಾದರಿಯ ಕ್ಯಾಚ್ ಅಂದು ನಾಟ್ ಔಟ್, ಇಂದು ಔಟ್; ಇದೆಂತಹ ನ್ಯಾಯ?
1787ರಲ್ಲಿ ಸ್ಥಾಪನೆಯಾದ ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (MCC), ವಿಶ್ವದ ಅತ್ಯಂತ ಸಕ್ರಿಯ ಕ್ರಿಕೆಟ್ ಕ್ಲಬ್. ಇದು ಲಂಡನ್ನಲ್ಲಿರುವ ಲಾರ್ಡ್ಸ್ ಕ್ರಿಕೆಟ್ ಮೈದಾನದ ಮಾಲೀಕರು ಆಗಿದ್ದಾರೆ. ಪ್ರಪಂಚದಾದ್ಯಂತ ಬಳಸಲಾಗುವ ಎಲ್ಲಾ ಕ್ರಿಕೆಟ್ ನಿಯಮಗಳನ್ನು ಇವರು ರಚಿಸುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:18 am, Fri, 1 May 26