ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಸಿಡ್ನಿ ಟೆಸ್ಟ್ ಪಂದ್ಯ ರೋಚಕ ಹಂತ ತಲುಪಿದೆ. ಕೇವಲ 2 ದಿನಗಳ ಆಟ ನಡೆದಿದ್ದು, ಈಗಾಗಲೇ ಎರಡೂ ತಂಡಗಳ ಇನ್ನಿಂಗ್ಸ್ ಪೂರ್ಣಗೊಂಡಿದೆ. ಇದೀಗ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡಿರುವ ಟೀಂ ಇಂಡಿಯಾ 145 ರನ್‌ಗಳ ಮುನ್ನಡೆ ಸಾಧಿಸಿದೆ. ಆದರೆ ಈ ನಡುವೆ ಟೀಂ ಇಂಡಿಯಾಗೆ ಆಘಾತ ಎದುರಾಗಿದ್ದು ತಂಡದ ನಾಯಕ ಮತ್ತು ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಇಂಜುರಿ ಸಮಸ್ಯೆಯಿಂದ ಎರಡನೇ ದಿನದಾಟದ ಮಧ್ಯದಲ್ಲೇ ಮೈದಾನ ತೊರೆದಿದ್ದರು. ಬೆನ್ನು ನೋವಿನಿಂದ ಬಳಲುತ್ತಿದ್ದ ಬುಮ್ರಾ ಅವರನ್ನು ಸ್ಕ್ಯಾನಿಂಗ್ಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಇದು ಭಾರತ ತಂಡ ಹಾಗೂ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತ್ತು. ಇದೀಗ ಬುಮ್ರಾ ಅವರ ಬಗ್ಗೆ ಅಪ್‌ಡೇಟ್ ಹೊರಬಿದ್ದಿದ್ದು, ಅಭಿಮಾನಿಗಳು ಕೊಂಚ ನಿರಾಳರಾಗಿದ್ದಾರೆ.
ಎರಡನೇ ದಿನದಾಟದ ಅಂತ್ಯದ ನಂತರ ಬುಮ್ರಾ ಅವರ ಬಗ್ಗೆ ಲೇಟೆಸ್ಟ್ ಅಪ್‌ಡೇಟ್ ಹೊರಬಿದ್ದಿದ್ದು, ಸ್ಕ್ಯಾನಿಂಗ್ ನಂತರ ತಂಡದ ಡ್ರೆಸಿಂಗ್ ರೂಮ್‌ಗೆ ವಾಪಸ್ಸಾಗಿರುವ ಬುಮ್ರಾ ಮೂರನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡಲು ಯಾವುದೇ ಸಮಸ್ಯೆ ಇಲ್ಲ. ಆದರೆ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ ಬೌಲಿಂಗ್ ಮಾಡುತ್ತಾರೋ ಅಥವಾ ಇಲ್ಲವೋ ಎಂಬುದರ ಬಗ್ಗೆ ನಾಳೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವರದಿಯಾಗಿದೆ.
🚨 UPDATE ON JASPRIT BUMRAH. 🚨
– Bumrah should be alright to bat, but the decision on his bowling will be taken tomorrow checking upon how he feels. (Sahil Malhotra). pic.twitter.com/7FJP2DFtBs
— Mufaddal Vohra (@mufaddal_vohra) January 4, 2025
ಸಿಡ್ನಿ ಟೆಸ್ಟ್‌ನ ಎರಡನೇ ದಿನದಂದು ಕೇವಲ 10 ಓವರ್‌ಗಳನ್ನು ಮಾತ್ರ ಬೌಲ್ ಮಾಡಿದ ಬುಮ್ರಾ, ಲಬುಶೇನ್ ಅವರ ವಿಕೆಟ್ ಕೂಡ ಉರುಳಿಸಿದ್ದರು. ಆದರೆ ಎರಡನೇ ಸೆಷನ್‌ನಲ್ಲಿ ಕೆಲ ಹೊತ್ತು ಆಡಿದ ಬಳಿಕ ಬುಮ್ರಾ ಏಕಾಏಕಿ ಮೈದಾನದಿಂದ ಹೊರನಡೆದಿದ್ದರು. ಈ ದೃಶ್ಯ ನೋಡಿ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಮ್ಯಾಚ್ ಕಿಟ್ ಬದಲಿಗೆ ತರಬೇತಿ ಜರ್ಸಿಯಲ್ಲಿ ಡ್ರೆಸ್ಸಿಂಗ್ ರೂಮ್‌ನಿಂದ ಹೊರಬಂದಿದ್ದ ಬುಮ್ರಾ, ತಂಡದ ಫಿಸಿಯೋ ಜೊತೆ ಕಾರಿನಲ್ಲಿ ಕ್ರೀಡಾಂಗಣದಿಂದ ಆಸ್ಪತ್ರೆಗೆ ತೆರಳಿದ್ದರು.
🚨 BUMRAH LEAVES FOR SCANS. 🚨
– Fingers are crossed…!!! 🤞pic.twitter.com/HAdB2tudiX
— Mufaddal Vohra (@mufaddal_vohra) January 4, 2025
ದಿನದಾಟ ಮುಗಿದ ಬಳಿಕ ಈ ಬಗ್ಗೆ ಮಾಹಿತಿ ನೀಡಿದ್ದ ವೇಗಿ ಪ್ರಸಿದ್ಧ್ ಕೃಷ್ಣ, ಬುಮ್ರಾ ಅವರಿಗೆ ಬೆನ್ನು ಸೆಳೆತ ಕಾಣಿಸಿಕೊಂಡಿತು, ಇದರಿಂದಾಗಿ ಅವರನ್ನು ಸ್ಕ್ಯಾನ್‌ಗೆ ಕರೆದೊಯ್ಯಲಾಯಿತು. ಇದೀಗ ವೈದ್ಯಕೀಯ ತಂಡ ಅವರ ಮೇಲೆ ನಿಗಾ ಇರಿಸಿದೆ ಎಂದಿದ್ದರು. ಆದರೆ ಬುಮ್ರಾ ಅವರ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದು ಪ್ರಸಿದ್ಧ್ ಹೇಳಲಿಲ್ಲ. ಹೀಗಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ ಬೌಲಿಂಗ್ ಮಾಡಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಇಡೀ ಸರಣಿಯಲ್ಲಿ ಎರಡೂ ತಂಡಗಳ ಅತ್ಯಂತ ಯಶಸ್ವಿ ಬೌಲರ್ ಎಂದರೆ ಅದು ಜಸ್ಪ್ರೀತ್ ಬುಮ್ರಾ. ಅವರು ಇಡೀ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾಗೆ ಅವರ ಅವಶ್ಯಕತೆ ಬಹಳಷ್ಟಿದೆ. ಆದರೆ ಬುಮ್ರಾ ಅವರನ್ನು ಅರ್ಧ ಫಿಟ್‌ನೆಸ್‌ನೊಂದಿಗೆ ಕಣಕ್ಕಿಳಿಸಬೇಕೇ ಅಥವಾ ಬೇಡವೇ ಎಂಬುದು ಟೀಂ ಇಂಡಿಯಾ ಮುಂದಿರುವ ಸಂದಿಗ್ಧತೆ. ಈ ಸಂದಿಗ್ಧತೆ ಏನೆಂದರೆ ಟೀಂ ಇಂಡಿಯಾ ಈ ಒಂದು ಟೆಸ್ಟ್ ಪಂದ್ಯವನ್ನಷ್ಟೇ ಅಲ್ಲದೆ ಮುಂದಿನ ತಿಂಗಳು ಚಾಂಪಿಯನ್ಸ್ ಟ್ರೋಫಿಯನ್ನೂ ಸಹ ಆಡಬೇಕು. ಈ ಐಸಿಸಿ ಟೂರ್ನಿಯಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಬೇಕೆಂದರೆ ಬುಮ್ರಾ ಅವರ ಉಪಸ್ಥಿತಿ ತಂಡಕ್ಕೆ ಅತ್ಯವಶ್ಯಕವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Sat, 4 January 25