
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಜಸ್ಪ್ರೀತ್ ಬುಮ್ರಾ 12 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಅದರಲ್ಲೂ ಗುಜರಾತ್ ಟೈಟಾನ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲೂ ಬುಮ್ರಾ ಕಾಣಿಸಿಕೊಂಡಿದ್ದರು. ಆದರೆ ಐಪಿಎಲ್ ಮುಕ್ತಾಯದ ಬೆನ್ನಲ್ಲೇ ಶುರುವಾದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ವೇಳೆ ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಪಡೆದಿದ್ದರು. ಹೀಗೆ ವಿಶ್ರಾಂತಿ ಪಡೆಯಲು ಮುಖ್ಯ ಕಾರಣ ಕಾರ್ಯಭಾರ. ಅಂದರೆ ವರ್ಕ್ಲೌಡ್ ಕಾರಣ ಇಂಗ್ಲೆಂಡ್ ವಿರುದ್ಧದ 2ನೇ ಮತ್ತು 5ನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿದಿರಲಿಲ್ಲ. ಇದೀಗ ಬುಮ್ರಾ ಅವರ ಕಾರ್ಯಭಾರದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಆಟಗಾರ ದಿಲೀಪ್ ವೆಂಗ್‌ಸರ್ಕಾರ್ ಪ್ರಶ್ನೆಗಳೆನ್ನೆತ್ತಿದ್ದಾರೆ.
ಜಸ್ಪ್ರೀತ್ ಬುಮ್ರಾಗೆ ಹೆಚ್ಚಿನ ವಿಶ್ರಾಂತಿ ನೀಡಬೇಕಿದಿದ್ದರೆ ಐಪಿಎಲ್ ವೇಳೆಯೇ ನೀಡಬೇಕಿತ್ತು. ಬಿಸಿಸಿಐ ಮತ್ತು ಆಯ್ಕೆದಾರರು ಮುಂಬೈ ಇಂಡಿಯನ್ಸ್ ಮಾಲೀಕ ಮುಖೇಶ್ ಅಂಬಾನಿ ಅವರಿಗೆ ಈ ಕುರಿತು ಮನವರಿಕೆ ಮಾಡಿಕೊಡಬೇಕಿತ್ತು. ಈ ಮೂಲಕ ಐಪಿಎಲ್ ವೇಳೆಯೇ ಅವರಿಗೆ ವಿಶ್ರಾಂತಿ ಒದಗಿಸಬೇಕಿತ್ತು ಎಂದು ದಿಲೀಪ್ ವೆಂಗ್‌ಸರ್ಕಾರ್ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್‌ನಲ್ಲಿ ಮೊಹಮ್ಮದ್ ಸಿರಾಜ್, ಶುಭ್ಮನ್ ಗಿಲ್, ಕೆಎಲ್ ರಾಹುಲ್, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್ ಮತ್ತು ಯಶಸ್ವಿ ಜೈಸ್ವಾಲ್ ಅವರ ಪ್ರದರ್ಶನ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಆದರೆ ಐಪಿಎಲ್‌ನಲ್ಲಿ ಗಳಿಸಿದ ರನ್‌ಗಳು ಮತ್ತು ವಿಕೆಟ್‌ಗಳನ್ನು ಯಾರೂ ನೆನಪಿಸಿಕೊಳ್ಳುವುದಿಲ್ಲ. ಹೀಗಾಗಿ ಪ್ರಮುಖ ಸರಣಿಗಳ ವೇಳೆ ವಿಶ್ರಾಂತಿ ಪಡೆಯುವ ಬದಲು ಐಪಿಎಲ್ ವೇಳೆ ವಿಶ್ರಾಂತಿ ತೆಗೆದುಕೊಳ್ಳಿ ಎಂದು ದಿಲೀಪ್ ವೆಂಗ್‌ಸರ್ಕಾರ್ ಹೇಳಿದ್ದಾರೆ.
ಇಲ್ಲಿ ಐಪಿಎಲ್ ಆಡಿದ ಬುಮ್ರಾಗೆ ಟೀಮ್ ಇಂಡಿಯಾ ಸರಣಿ ವೇಳೆ ವಿಶ್ರಾಂತಿ ನೀಡಿರುವುದು ಸರಿಯಲ್ಲ. ಅವರ ಬೆನ್ನು ನೋವನ್ನು ಪರಿಗಣಿಸಿ ವಿಶ್ರಾಂತಿ ನೀಡಲು ಬಿಸಿಸಿಐ ಬಯಸಿದ್ದರೆ, ಐಪಿಎಲ್ ವೇಳೆಯೇ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮಾತನಾಡಿ ಆ ಕ್ರಮ ತೆಗೆದುಕೊಳ್ಳಬೇಕಿತ್ತು. ಇಲ್ಲ ಬುಮ್ರಾ ಅವರಿಗೆ ಐಪಿಎಲ್ನಿಂದ ಹೊರಗುಳಿಯಲು ಸೂಚಿಸಬೇಕಿತ್ತು.
ಏಕೆಂದರೆ ಐತಿಹಾಸಿಕ ಸರಣಿಗೆ ನಾವು ಸಂಪೂರ್ಣವಾಗಿ ಫಿಟ್ ಮತ್ತು ರಿಫ್ರೆಶ್ ಆಗಿರುವ ಬುಮ್ರಾ ಅವರನ್ನು ಹೊಂದಿರುವುದು ಬಹಳ ಮುಖ್ಯವಾಗಿತ್ತು. ನಾನು ಭಾರತದ ಮುಖ್ಯ ಆಯ್ಕೆದಾರನಾಗಿದ್ದರೆ, ಇಂಗ್ಲೆಂಡ್ ಸರಣಿಗೂ ಮುನ್ನ ಬುಮ್ರಾಗೆ ಐಪಿಎಲ್ನಿಂದ ಹೊರಗುಳಿಯಲು ಸೂಚಿಸುತ್ತಿದ್ದೆ. ಅಥವಾ ಐಪಿಎಲ್‌ನಲ್ಲಿ ಕಡಿಮೆ ಸಂಖ್ಯೆಯ ಪಂದ್ಯಗಳನ್ನು ಆಡುವುದು ಮುಖ್ಯ ಎಂದು ಮುಖೇಶ್ ಅಂಬಾನಿ ಮತ್ತು ಬುಮ್ರಾ ಅವರಿಗೆ ಮನವರಿಕೆ ಮಾಡಿಕೊಡುತ್ತಿದ್ದೆ ಎಂದು ವೆಂಗ್‌ಸರ್ಕಾರ್ ಹೇಳಿದ್ದಾರೆ.
ಇದನ್ನೂ ಓದಿ: ಮೊಹಮ್ಮದ್ ಸಿರಾಜ್ಗೆ ಬರೋಬ್ಬರಿ 80 ಲಕ್ಷ ರೂ..!
ಭಾರತದ ಪ್ರಮುಖ ಸರಣಿಗಳು ಬರುವುದೇ ನಾಲ್ಕು ವರ್ಷಗಳಿಗೊಮ್ಮೆ. ಭಾರತವು ಜನವರಿ 2027 ರವರೆಗೆ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲ್ಲ ಎಂಬುದು ನನ್ನ ಅನಿಸಿಕೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿ ಮುಖ್ಯವಾಗಿತ್ತು. ಇಂತಹ ಪ್ರಮುಖ ಸರಣಿಯಲ್ಲಿ ಬುಮ್ರಾ ಬಹುತೇಕ ಎಲ್ಲಾ ಪಂದ್ಯಗಳಿಗೂ ಲಭ್ಯರಿರಬೇಕೆಂದು ನಾನು ಬಯಸುತ್ತೇನೆ ಎಂದು ದಿಲೀಪ್ ವೆಂಗ್‌ಸರ್ಕಾರ್ ಹೇಳಿದ್ದಾರೆ.