ಸಿರಾಜ್​ಗೆ ಕ್ರೆಡಿಟ್ ನೀಡದ ಬುಮ್ರಾ: ಹೊಟ್ಟೆ ಉರಿ ಎಂದ ಫ್ಯಾನ್ಸ್​

India vs England Test: ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 9 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿರುವ ಮೊಹಮ್ಮದ್ ಸಿರಾಜ್ ಒಟ್ಟು 185.3 ಓವರ್​ಗಳನ್ನು ಎಸೆದಿದ್ದಾರೆ. ಈ ವೇಳೆ 1113 ಎಸೆತಗಳಲ್ಲಿ 23 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅ್ಯಂಡರ್ಸನ್-ತೆಂಡೂಲ್ಕರ್ ಸರಣಿಯಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿ ಬೌಲರ್ ಎನಿಸಿಕೊಂಡಿದ್ದಾರೆ. ಇದಾಗ್ಯೂ ಸಿರಾಜ್ ಅವರ ಪ್ರದರ್ಶನದ ಬಗ್ಗೆ ಬುಮ್ರಾ ಒಂದೇ ಒಂದು ಪೋಸ್ಟ್ ಹಂಚಿಕೊಂಡಿಲ್ಲ.

ಸಿರಾಜ್​ಗೆ ಕ್ರೆಡಿಟ್ ನೀಡದ ಬುಮ್ರಾ: ಹೊಟ್ಟೆ ಉರಿ ಎಂದ ಫ್ಯಾನ್ಸ್​
Siraj - Bumrah

Updated on: Aug 06, 2025 | 10:54 AM

ಇಂಗ್ಲೆಂಡ್​ ವಿರುದ್ಧದ ಟೆಸ್ಟ್ ಸರಣಿಯನ್ನು ಡ್ರಾನಲ್ಲಿ ಅಂತ್ಯಗೊಳಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಐದು ಪಂದ್ಯಗಳ ಈ ಸರಣಿಯ ಮೊದಲ ಮ್ಯಾಚ್​ನಲ್ಲಿ ಇಂಗ್ಲೆಂಡ್ ತಂಡ 5 ವಿಕೆಟ್​ಗಳ ಜಯ ಸಾಧಿಸಿತ್ತು. ಇನ್ನು ದ್ವಿತೀಯ ಪಂದ್ಯವನ್ನು ಟೀಮ್ ಇಂಡಿಯಾ 336 ರನ್​ಗಳಿಂದ ಗೆದ್ದುಕೊಂಡಿದ್ದರು. ಮೂರನೇ ಮ್ಯಾಚ್​ನಲ್ಲಿ ಆಂಗ್ಲರು 22 ರನ್​ಗಳ ರೋಚಕ ಜಯ ಸಾಧಿಸಿದ್ದರು. ನಾಲ್ಕನೇ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿತ್ತು. ಅದರಂತೆ ಸರಣಿ ನಿರ್ಣಾಯಕವಾಗಿ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ 6 ರನ್​ಗಳ ರೋಚಕ ಗೆಲುವು ದಾಖಲಿಸಿ ಸರಣಿಯನ್ನು 2-2 ಅಂತರದಿಂದ ಸಮಗೊಳಿಸಿತು.

ಹೀಗೆ ಸರಣಿ ಸಮಬಲಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಮೊಹಮ್ಮದ್ ಸಿರಾಜ್. ಐದನೇ ಟೆಸ್ಟ್ ಪಂದ್ಯದ ಕೊನೆಯ ದಿನದಾಟದಂದು ಇಂಗ್ಲೆಂಡ್​ಗೆ ಕೇವಲ 35 ರನ್​ ಬೇಕಿದ್ದರೆ, ಟೀಮ್ ಇಂಡಿಯಾಗೆ 4 ವಿಕೆಟ್​ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಮಿಂಚಿನ ದಾಳಿ ಸಂಘಟಿಸಿದ ಸಿರಾಜ್ 3 ವಿಕೆಟ್ ಉರುಳಿಸಿ ಭಾರತ ತಂಡಕ್ಕೆ 6 ರನ್​ಗಳ ರೋಚಕ ಜಯ ತಂದುಕೊಟ್ಟಿದ್ದರು.

ಈ ಗೆಲುವಿನ ಬಳಿಕ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದರು. ಅದು ಸಹ ಗೆಲುವಿನ ಸಂಭ್ರಮದಲ್ಲಿರುವ ಟೀಮ್ ಇಂಡಿಯಾದ ಫೋಟೋ. 5 ಫೋಟೋಗಳನ್ನು ಒಳಗೊಂಡಿರುವ ಈ ಪೋಸ್ಟ್​ನಲ್ಲಿ ಎಲ್ಲೂ ಸಹ ಸಿರಾಜ್ ಅವರ ಚಿತ್ರವಿಲ್ಲ ಎಂಬುದು ಅಚ್ಚರಿ.

‘ನಾವು ತುಂಬಾ ಸ್ಪರ್ಧಾತ್ಮಕ ಮತ್ತು ರೋಮಾಂಚಕಾರಿ ಟೆಸ್ಟ್ ಸರಣಿಯಿಂದ ಉತ್ತಮ ನೆನಪುಗಳನ್ನು ಮರಳಿ ತಂದಿದ್ದೇವೆ! ಮುಂದೆ ಏನಾಗುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದೇನೆ‘ ಎಂದು ಜಸ್​ಪ್ರೀತ್ ಬುಮ್ರಾ 5 ಫೋಟೋಗಳನ್ನು ಹಂಚಿಕೊಂಡು ಗೆಲುವನ್ನು ಸಂಭ್ರಮಿಸಿದ್ದರು. ಆದರೆ ಈ 5 ಫೋಟೋಗಳಲ್ಲಿ ಬುಮ್ರಾ ತನ್ನದೇ 3 ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 

ಇದಾಗ್ಯೂ ಸರಣಿಯುದ್ದಕ್ಕೂ ಕೆಚ್ಚೆದೆಯ ಪ್ರದರ್ಶನ ನೀಡಿದ ಹಾಗೂ ಅಂತಿಮ ಪಂದ್ಯದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ ಮೊಹಮ್ಮದ್ ಸಿರಾಜ್ ಅವರ ಒಂದೇ ಒಂದು ಫೋಟೋ ಹಂಚಿಕೊಂಡಿಲ್ಲ. ಅಲ್ಲದೆ ಅವರ ಪ್ರದರ್ಶನಕ್ಕೆ ಮೆಚ್ಚುಗೆಗಳನ್ನು ಸಹ ಸೂಚಿಸಿಲ್ಲ. ಬುಮ್ರಾ ಅವರ ಈ ನಡೆಗೆ ಇದೀಗ ಟೀಮ್ ಇಂಡಿಯಾ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಟ್ರೋಲಾದ ಬುಮ್ರಾ:

ಈ ಬಾರಿಯ 5 ಪಂದ್ಯಗಳ ಸರಣಿಯ 2 ಮ್ಯಾಚ್​ಗಳಲ್ಲಿ ಜಸ್​ಪ್ರೀತ್ ಬುಮ್ರಾ ವಿಶ್ರಾಂತಿ ಪಡೆದಿದ್ದರು. ಅದರಲ್ಲೂ ಮೊದಲ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಸೋತಿದ್ದರೂ ಬುಮ್ರಾ ದ್ವಿತೀಯ ಪಂದ್ಯಕ್ಕೆ ಅಲಭ್ಯರಾಗಿದ್ದರು. ಆದರೆ ಆ ಪಂದ್ಯದಲ್ಲಿ 9 ವಿಕೆಟ್ ಕಬಳಿಸುವ ಮೂಲಕ ಸಿರಾಜ್ ಭಾರತ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದರು.

ಇನ್ನು ಮೂರನೇ ಹಾಗೂ ನಾಲ್ಕನೇ ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ಕಣಕ್ಕಿಳಿದರೂ ಭಾರತ ತಂಡಕ್ಕೆ ಗೆಲುವು ದಕ್ಕಿರಲಿಲ್ಲ. ಇತ್ತ ಬುಮ್ರಾ ಹೊರಗುಳಿದ ಐದನೇ ಟೆಸ್ಟ್ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸಿದ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾಗೆ 2ನೇ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

ಇತ್ತ ಸಹ ಆಟಗಾರ ಅದ್ಭುತ ಪ್ರದರ್ಶನ ನೀಡಿದರೂ ಜಸ್​ಪ್ರೀತ್ ಬುಮ್ರಾ ಸಿರಾಜ್  ಅವರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಅಭಿನಂದನೆ ಸಲ್ಲಿಸಿಲ್ಲ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದರಲ್ಲೂ ಕೊನೆಯ ಪಂದ್ಯದಲ್ಲಿ ಸಿರಾಜ್ ನೀಡಿದ ಪ್ರದರ್ಶನಕ್ಕಾದರೂ ಬುಮ್ರಾ ಮೆಚ್ಚುಗೆಗಳನ್ನು ವ್ಯಕ್ತಪಡಿಸಬೇಕಿತ್ತು ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇನ್ನು ಕೆಲವರು ಬುಮ್ರಾ ಅವರ ಅಲಭ್ಯತೆಯ ನಡುವೆ ಟೀಮ್ ಇಂಡಿಯಾ ವೇಗಿಗಳು ಭರ್ಜರಿ ಪ್ರದರ್ಶನ ನೀಡಿದ್ದು, ಅವರ ಹೊಟ್ಟೆ ಉರಿಗೆ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಮೊಹಮ್ಮದ್ ಸಿರಾಜ್​ಗೆ ಬರೋಬ್ಬರಿ 80 ಲಕ್ಷ ರೂ..!

ಒಟ್ಟಿನಲ್ಲಿ ಜಸ್​ಪ್ರೀತ್ ಬುಮ್ರಾ ಟೀಮ್ ಇಂಡಿಯಾಗೆ ಅನಿವಾರ್ಯವಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತಾಗಿದೆ. ಇದಕ್ಕೂ ಮುನ್ನ ಬುಮ್ರಾ ಇಲ್ಲದೆ ಭಾರತ ತಂಡ 2025ರ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು. ಇದೀಗ ಜಸ್​ಪ್ರೀತ್ ಬುಮ್ರಾ ಅವರ ಅಲಭ್ಯತೆಯ ನಡುವೆ ಟೀಮ್ ಇಂಡಿಯಾ ಆಂಗ್ಲರ ನಾಡಿನಲ್ಲಿ 2 ಪಂದ್ಯಗಳನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತ ತಂಡಕ್ಕೆ ಯಾರು ಸಹ ಅನಿವಾರ್ಯವಲ್ಲ ಎಂಬುದನ್ನು ನಿರೂಪಿಸಿದ್ದಾರೆ.