ಶ್ರೇಷ್ಠ ಬೌಲರ್; ಜಸ್ಪ್ರೀತ್ ಬುಮ್ರಾರನ್ನು ಹಾಡಿ ಹೊಗಳಿದ ವಾಸಿಂ ಅಕ್ರಂ

Akram on Bumrah: ವಾಸಿಂ ಅಕ್ರಂ ಅವರು ಜಸ್ಪ್ರೀತ್ ಬುಮ್ರಾ ಅವರನ್ನು ಅತ್ಯುತ್ತಮ ಬೌಲರ್ ಎಂದು ಹೊಗಳಿದ್ದಾರೆ. ಆದರೆ ಇಬ್ಬರ ನಡುವಿನ ಹೋಲಿಕೆಯನ್ನು ತಿರಸ್ಕರಿಸಿದ್ದಾರೆ. ಅಕ್ರಂ ಅವರು ತಮ್ಮ ಯುಗ ಮತ್ತು ಬುಮ್ರಾ ಅವರ ಯುಗವನ್ನು ಹೋಲಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ ಸಾಮಾಜಿಕ ಮಾಧ್ಯಮದಲ್ಲಿನ ಅನಗತ್ಯ ಹೋಲಿಕೆಗಳ ಬಗ್ಗೆಯೂ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶ್ರೇಷ್ಠ ಬೌಲರ್; ಜಸ್ಪ್ರೀತ್ ಬುಮ್ರಾರನ್ನು ಹಾಡಿ ಹೊಗಳಿದ ವಾಸಿಂ ಅಕ್ರಂ
Bumrah, Akram

Updated on: Sep 01, 2025 | 10:02 PM

ಟೀಂ ಇಂಡಿಯಾದ ಅನುಭವಿ ಬೌಲರ್ ಜಸ್ಪ್ರೀತ್ ಬುಮ್ರಾ (Jasprit bumrah) ಪ್ರಸ್ತುತ ಏಷ್ಯಾಕಪ್​ಗಾಗಿ ತಂಡದೊಂದಿಗೆ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆದಾಗ್ಯೂ ಅವರ ಹೆಸರು ಕ್ರಿಕೆಟ್​ ಲೋಕದಲ್ಲಿ ಸಾಕಷ್ಟು ಚರ್ಚೆಯಲ್ಲಿದೆ. ಜಸ್ಪ್ರೀತ್ ಬುಮ್ರಾರನ್ನು ಪಾಕಿಸ್ತಾನದ ಮಾಜಿ ನಾಯಕ ಹಾಗೂ ಬೌಲರ್ ವಾಸಿಂ ಅಕ್ರಂ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಕೆಲವರು ಬುಮ್ರಾ ಪರ ಬ್ಯಾಟ್ ಬೀಸಿದರೆ, ಇನ್ನು ಕೆಲವರು ವಾಸಿಂ ಅಕ್ರಂ (Wasim Akram) ಪರ ಮಾತನಾಡಿದ್ದಾರೆ. ಇದೀಗ ಈ ವಿಚಾರದ ಬಗ್ಗೆ ಸ್ವತಃ ವಾಸಿಂ ಅಕ್ರಂ ಅವರೇ ಮೌನ ಮುರಿದಿದ್ದು, ಇಬ್ಬರ ನಡುವಿನ ಹೋಲಿಕೆಯೇ ತಪ್ಪು ಎಂದಿದ್ದಾರೆ.

ಒಬ್ಬ ಅದ್ಭುತ ಬೌಲರ್

ವಾಸ್ತವವಾಗಿ ಪಾಕಿಸ್ತಾನಿ ಸುದ್ದಿ ವಾಹಿನಿಯ ಚರ್ಚೆಯಲ್ಲಿ ಭಾಗಿಯಾಗಿದ್ದ ವಾಸಿಂ ಅಕ್ರಂ, ಬುಮ್ರಾ ಅವರನ್ನು ಹೊಗಳಿ ಇಬ್ಬರನ್ನೂ ಹೋಲಿಸುವುದು ತಪ್ಪು ಎಂದು ಹೇಳಿದರು. ಅಲ್ಲದೆ ಬುಮ್ರಾ ಅವರನ್ನು ಈ ಯುಗದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು ಎಂದು ಬಣ್ಣಿಸಿದ ಅವರು, ‘ಜಸ್ಪ್ರೀತ್ ಬುಮ್ರಾ ಒಬ್ಬ ಅದ್ಭುತ ಬೌಲರ್. ಅವರ ಆಕ್ಷನ್ ಸ್ವಲ್ಪ ವಿಭಿನ್ನವಾಗಿದೆ, ಅವರ ವೇಗ ವಿಭಿನ್ನವಾಗಿದೆ ಮತ್ತು ಭಾರತೀಯ ಕ್ರಿಕೆಟ್ ಮಂಡಳಿಯು ಅವರ ಕೆಲಸದ ಹೊರೆಯನಬ್ನು ನಿರ್ವಹಿಸಿದ ರೀತಿ ಪ್ರಶಂಸೆಗೆ ಅರ್ಹವಾಗಿದೆ. ಆದರೆ 90 ರ ದಶಕದ ಬೌಲರ್‌ಗಳನ್ನು ಇಂದಿನ ಬೌಲರ್‌ಗಳೊಂದಿಗೆ ಹೋಲಿಸುವುದು ತಪ್ಪು. ಬುಮ್ರಾ ಬಲಗೈ ಬೌಲರ್ ಮತ್ತು ನಾನು ಎಡಗೈ ಬೌಲರ್ ಆಗಿದ್ದೆ ಎಂದಿದ್ದಾರೆ.

ಇನ್ನು ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ನಡೆಯುತ್ತಿರುವ ಚರ್ಚೆಯ ಬಗ್ಗೆ ಮಾತನಾಡಿದ ಅಕ್ರಂ, ಈ ಚರ್ಚೆಗಳು ನನಗಾಗಲಿ ಅಥವಾ ಬುಮ್ರಾಗಾಗಲಿ ಮುಖ್ಯವಲ್ಲ. ಆದರೆ ಈ ಮಾಜಿ ಕ್ರಿಕೆಟಿಗರು ಮಾತ್ರ ಯಾವುದೇ ಕಾರಣವಿಲ್ಲದೆ ತಮ್ಮ ತಮ್ಮ ನಡುವೆ ಜಗಳವಾಡುತ್ತಿದ್ದಾರೆ. ಬುಮ್ರಾ ಆಧುನಿಕ ಕ್ರಿಕೆಟ್​ನ ಶ್ರೇಷ್ಠ ಬೌಲರ್. ನಾನು ನನ್ನ ಕಾಲದಲ್ಲಿ ಕೊಡುಗೆ ನೀಡಿದ್ದೇನೆ ಎಂದರು

ಹರ್ಷಿತ್ ರಾಣಾ ಪ್ರಕಾರ ಜಸ್ಪ್ರೀತ್ ಬುಮ್ರಾ ನಂ.1 ಬೌಲರ್ ಅಲ್ಲ..! ವೈರಲ್ ವಿಡಿಯೋ ನೋಡಿ

ಬುಮ್ರಾ ಮತ್ತು ಅಕ್ರಂ ಅಂಕಿಅಂಶಗಳು ಏನು ಹೇಳುತ್ತವೆ?

ಪಾಕ್ ಮಾಜಿ ನಾಯಕ ವಾಸಿಂ ಅಕ್ರಂ, ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಸಮಾನವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಪಾಕಿಸ್ತಾನ ಪರ 104 ಟೆಸ್ಟ್ ಪಂದ್ಯಗಳಲ್ಲಿ 414 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಏಕದಿನ ಮಾದರಿಯಲ್ಲಿ, ಅವರು ಆಡಿದ 356 ಪಂದ್ಯಗಳಲ್ಲಿ 502 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಏಕದಿನ ಮಾದರಿಯಲ್ಲಿ 500 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಅವರು ಮತ್ತು ದೀರ್ಘಕಾಲದವರೆಗೆ ಅತ್ಯಂತ ಯಶಸ್ವಿ ಬೌಲರ್ ಆಗಿದ್ದಾರೆ. ಮತ್ತೊಂದೆಡೆ, ಬುಮ್ರಾ ಸುಮಾರು 9 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಮೂರು ಸ್ವರೂಪಗಳಲ್ಲಿ ತಮ್ಮ ಶಕ್ತಿಯನ್ನು ತೋರಿಸಿದ್ದಾರೆ. ಬುಮ್ರಾ ಕೇವಲ 48 ಟೆಸ್ಟ್‌ಗಳಲ್ಲಿ 219 ವಿಕೆಟ್‌ಗಳನ್ನು ಕಬಳಿಸಿದ್ದು, 89 ಏಕದಿನ ಪಂದ್ಯಗಳಲ್ಲಿ 149 ವಿಕೆಟ್‌ಗಳನ್ನು ಮತ್ತು 70 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 89 ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ