Jay Shah: ಸತತ ಮೂರನೇ ಬಾರಿ ಎಸಿಸಿ ಅಧ್ಯಕ್ಷರಾಗಿ ಜಯ್​ ಶಾ ಆಯ್ಕೆ

| Updated By: ಝಾಹಿರ್ ಯೂಸುಫ್

Updated on: Jan 31, 2024 | 2:53 PM

Asian Cricket Council (ACC): ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಜಯ್ ಶಾ ಆಯ್ಕೆಯಾಗುತ್ತಿರುವುದು ಇದು ಮೂರನೇ ಬಾರಿ. 2021 ರಿಂದ ಅಧ್ಯಕ್ಷ ಸ್ಥಾನದಲ್ಲಿರುವ ಅವರನ್ನು ಈ ಬಾರಿ ಕೂಡ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಹೀಗಾಗಿ ಮುಂದಿನ ಒಂದು ವರ್ಷಗಳ ಕಾಲ ಎಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವರು ಕಾಣಿಸಿಕೊಳ್ಳಲಿದ್ದಾರೆ.

Jay Shah: ಸತತ ಮೂರನೇ ಬಾರಿ ಎಸಿಸಿ ಅಧ್ಯಕ್ಷರಾಗಿ ಜಯ್​ ಶಾ ಆಯ್ಕೆ
Jay Shah
Follow us on

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ( ಎಸಿಸಿ) ಅಧ್ಯಕ್ಷರಾಗಿ ಜಯ್ ಶಾ (Jay Shah) ಸತತ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಇಂಡೋನೇಷ್ಯಾದ ಬಾಲಿಯಲ್ಲಿ ಬುಧವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಮೂಲಕ ಅವರ ಅಧಿಕಾರಾವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಈ ಸಭೆಯಲ್ಲಿ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಅಧ್ಯಕ್ಷ ಶಮ್ಮಿ ಸಿಲ್ವಾ ಅವರು ಜಯ್ ಶಾ ಅವರ ಅಧಿಕಾರಾವಧಿಯನ್ನು ವಿಸ್ತರಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು.

ಈ ನಾಮನಿರ್ದೇಶನವನ್ನು ಎಸಿಸಿಯ ಎಲ್ಲಾ ಸದಸ್ಯರು ಸರ್ವಾನುಮತದಿಂದ ಬೆಂಬಲಿಸಿದ್ದಾರೆ. ಇದರೊಂದಿಗೆ ಜಯ್ ಶಾ ಮೂರನೇ ಬಾರಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಆಯ್ಕೆಯಾದಂತಾಗಿದೆ. ಜನವರಿ 2021 ರಲ್ಲಿ ಜಯ್ ಶಾ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ನಜ್ಮುಲ್ ಹಸನ್ ಅವರಿಂದ ಎಸಿಸಿಯ ಆಡಳಿತವನ್ನು ವಹಿಸಿಕೊಂಡಿದ್ದರು. ಇದಾದ ಬಳಿಕ ಅವರನ್ನು 2 ಬಾರಿ ಮರು ನೇಮಕ ಮಾಡಲಾಗಿದೆ.

ಜಯ್ ಶಾ ಅವರ ಮುಂದಾಳತ್ವದಲ್ಲಿ ACC 2022 ರಲ್ಲಿ ಟಿ20 ಮತ್ತು 2023 ರಲ್ಲಿ ಏಕದಿನ ಏಷ್ಯಾ ಕಪ್ ಅನ್ನು ಯಶಸ್ವಿಯಾಗಿ ಆಯೋಜಿಸಿದೆ. ಸಂದಿಗ್ಧ ಸ್ಥಿತಿಯಲ್ಲೂ ಏಷ್ಯಾಕಪ್ ಆಯೋಜಿಸಲು ಯಶಸ್ವಿಯಾಗಿರುವ ಶಾ ಅವರನ್ನೇ ಅಧ್ಯಕ್ಷರಾಗಿ ಮುಂದುವರೆಸಲು ಇತರೆ ಕ್ರಿಕೆಟ್ ಮಂಡಳಿಗಳು ನಿರ್ಧರಿಸಿದೆ. ಹೀಗಾಗಿ ಜಯ್ ಶಾ ಅವರು ಸತತ ಮೂರನೇ ಅವಧಿಗೆ ಎಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಏಷ್ಯನ್ ಪ್ರದೇಶದಾದ್ಯಂತ ಕ್ರಿಕೆಟ್ ಅನ್ನು ಉತ್ತೇಜಿಸುವಲ್ಲಿ ಮತ್ತು ಅಭಿವೃದ್ಧಿಪಡಿಸುವಲ್ಲಿ ಮತ್ತು ಗಮನಾರ್ಹ ಪ್ರಗತಿಯತ್ತ ಮುನ್ನಡೆಸುವಲ್ಲಿ ಜಯ್ ಶಾ ಪ್ರಮುಖ ಪಾತ್ರವಹಿಸಿದ್ದಾರೆ. ಹೀಗಾಗಿ ಅಧ್ಯಕ್ಷ ಹುದ್ದೆಯಲ್ಲಿ ಅವರೇ ಮುಂದುವರೆಯಬೇಕೆಂಬುದು ನಮ್ಮೆಲ್ಲರ ಆಶಯವಾಗಿತ್ತು. ಅದರಂತೆ ಇದೀಗ ಸರ್ವಾನುಮತದಿಂದ ಅವರನ್ನು ಮೂರನೇ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಮ್ಮಿ ಸಿಲ್ವಾ ತಿಳಿಸಿದ್ದಾರೆ.

ಟಿ20 ಏಷ್ಯಾಕಪ್​:

2025ರ ಏಷ್ಯಾಕಪ್ ಟಿ20 ಸ್ವರೂಪದಲ್ಲೇ ನಡೆಯಲಿದೆ. 2026ರಲ್ಲಿ ಟಿ20 ವಿಶ್ವಕಪ್​ ಜರುಗಲಿದ್ದು, ಹೀಗಾಗಿ ಏಷ್ಯಾಕಪ್ ಟೂರ್ನಿಯನ್ನು (Asia Cup 2025) ಚುಟುಕು ಸ್ವರೂಪದಲ್ಲಿ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ನಿರ್ಧರಿಸಿದೆ. ವಿಶೇಷ ಎಂದರೆ 2023ರ ಏಷ್ಯಾಕಪ್​ ಅನ್ನು ಏಕದಿನ ಮಾದರಿಯಲ್ಲಿ ಆಯೋಜಿಸಲಾಗಿತ್ತು.

ಅಂದರೆ ಇಲ್ಲಿ ಆಯಾ ಏಷ್ಯಾಕಪ್​ನ ನಂತರ ಐಸಿಸಿ ಟೂರ್ನಿ ಜರುಗುತ್ತಿದ್ದರೆ ಅದೇ ಸ್ವರೂಪದಲ್ಲಿ ಟೂರ್ನಿಯನ್ನು ಆಯೋಜಿಸಲಾಗುತ್ತದೆ. 2022ರಲ್ಲಿ ಟಿ20 ವಿಶ್ವಕಪ್ ನಡೆದಿದ್ದರಿಂದ ಅದಕ್ಕೂ ಮುಂಚಿತವಾಗಿ ಏಷ್ಯಾಕಪ್ ಅನ್ನು ಕೂಡ ಟಿ20 ಮಾದರಿಯಲ್ಲಿ ಆಯೋಜಿಸಲಾಗಿತ್ತು.

ಇದನ್ನೂ ಓದಿ: IPL 2024: RCB ಗೆ ವಿಂಡೀಸ್ ವೇಗಿ?

ಹಾಗೆಯೇ 2023 ರ ಏಕದಿನ ವಿಶ್ವಕಪ್​ಗೂ ಮುನ್ನ ಏಷ್ಯಾಕಪ್ ಅನ್ನು​ 50 ಓವರ್​ಗಳಲ್ಲಿ ನಡೆಸಲಾಗಿತ್ತು. ಇದೀಗ 2025 ರ ಏಷ್ಯಾಕಪ್​ ಅನ್ನು ಟಿ20 ವಿಶ್ವಕಪ್​ ಹಿನ್ನಲೆಯಲ್ಲಿ ಟಿ20 ಸ್ವರೂಪದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

Published On - 2:48 pm, Wed, 31 January 24