Asia Cup 2023: ಜಯ್ ಶಾ ಹೇಳಿಕೆಗೆ ಶಾಹಿದ್ ಅಫ್ರಿದಿ ತಿರುಗೇಟು
Asia Cup 2023: ಎಲ್ಲಾ ಪೂರ್ಣ ಸದಸ್ಯ ರಾಷ್ಟ್ರಗಳು ಮತ್ತು ಮಾಧ್ಯಮ ಹಕ್ಕುದಾರರು ಆರಂಭದಲ್ಲಿ ಸಂಪೂರ್ಣ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಲು ಹಿಂಜರಿಯುತ್ತಿದ್ದರು. ಈ ಹಿಂಜರಿಕೆಗೆ ಮುಖ್ಯ ಕಾರಣ ಪಾಕಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿ. ಪಾಕ್ನಲ್ಲಿನ ಭದ್ರತೆ ಮತ್ತು ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಕಳವಳಗಳಿಂದ ಉದ್ಭವಿಸಿದ್ದರಿಂದ ಟೂರ್ನಿಯನ್ನು ಎರಡು ದೇಶಗಳಲ್ಲಿ ಆಯೋಜಿಸಲಾಗಿದೆ.
ಈ ಬಾರಿಯ ಏಷ್ಯಾಕಪ್ (Asia Cup 2023) ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಮುಖ್ಯ ಕಾರಣ ಪಾಕಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಗೆ ಇದೀಗ ಅಂಕಿ ಅಂಶಗಳೊಂದಿಗೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ (Shahid Afridi) ತಿರುಗೇಟು ನೀಡಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಕಠಿಣ ನಿಲುವಿನಿಂದಾಗಿ ಈ ಬಾರಿಯ ಏಷ್ಯಾಕಪ್ ಅನ್ನು ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ಆಯೋಜಿಸಬೇಕಾಗಿ ಬಂದಿದೆ. ಇದೀಗ ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತಿರುವ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಿದೆ. ಅದರಲ್ಲೂ ಭಾರತ-ಪಾಕಿಸ್ತಾನ್ ನಡುವಣ ಮೊದಲ ಪಂದ್ಯ ಮಳೆಗೆ ಅಹುತಿಯಾಗಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ಜಯ್ ಶಾ ಎಂದು ಏಷ್ಯಾಕಪ್ ಆಯೋಜನೆಯ ಹಕ್ಕನ್ನು ಹೊಂದಿರುವ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆರೋಪಿಸಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಜಯ್ ಶಾ, ಎಲ್ಲಾ ಪೂರ್ಣ ಸದಸ್ಯ ರಾಷ್ಟ್ರಗಳು ಮತ್ತು ಮಾಧ್ಯಮ ಹಕ್ಕುದಾರರು ಆರಂಭದಲ್ಲಿ ಸಂಪೂರ್ಣ ಪಂದ್ಯಾವಳಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಲು ಹಿಂಜರಿಯುತ್ತಿದ್ದರು. ಈ ಹಿಂಜರಿಕೆಗೆ ಮುಖ್ಯ ಕಾರಣ ಪಾಕಿಸ್ತಾನದಲ್ಲಿನ ಭದ್ರತಾ ಪರಿಸ್ಥಿತಿ. ಪಾಕ್ನಲ್ಲಿನ ಭದ್ರತೆ ಮತ್ತು ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಕಳವಳಗಳಿಂದ ಉದ್ಭವಿಸಿದ್ದರಿಂದ ಟೂರ್ನಿಯನ್ನು ಎರಡು ದೇಶಗಳಲ್ಲಿ ಆಯೋಜಿಸಲಾಗಿದೆ ಎಂದು ಜಯ್ ಶಾ ಇತ್ತೀಚೆಗೆ ಹೇಳಿದ್ದರು.
ಇದೀಗ ಈ ಹೇಳಿಕೆಗೆ ತಿರುಗೇಟು ನೀಡಿರುವ ಶಾಹಿದ್ ಅಫ್ರಿದಿ, ಪಾಕಿಸ್ತಾನದ ಭದ್ರತಾ ಪರಿಸ್ಥಿತಿಯ ಬಗ್ಗೆ ಜಯ್ ಶಾ ಅವರ ಹೇಳಿಕೆಯನ್ನು ನಾನು ನೋಡಿದೆ. ಅವರ ನೆನಪಿನ ಶಕ್ತಿಯನ್ನು ರಿಫ್ರೆಶ್ ಮಾಡಲು ಬಯಸುತ್ತೇನೆ. ಏಕೆಂದರೆ ಕಳೆದ ಆರು ವರ್ಷಗಳಲ್ಲಿ ಪಾಕಿಸ್ತಾನವು ಈ ಕೆಳಗಿನ ಸರಣಿಗಳನ್ನು/ವಿದೇಶಿ ಆಟಗಾರರು ಹೊಂದಿದ್ದ ಲೀಗ್ಗಳನ್ನು ಆಯೋಜಿಸಿದೆ. ಅವುಗಳೆಂದರೆ…
- 2017 – ಐಸಿಸಿ ವಿಶ್ವ ಇಲೆವೆನ್ ಮತ್ತು ಶ್ರೀಲಂಕಾ ವಿರುದ್ಧದ ಸರಣಿ
- 2018 – ವೆಸ್ಟ್ ಇಂಡೀಸ್ ವಿರುದ್ಧದ ಸರಣಿ
- 2019 – ವೆಸ್ಟ್ ಇಂಡೀಸ್ (ಮಹಿಳಾ ತಂಡ), ಬಾಂಗ್ಲಾದೇಶ್ (ಮಹಿಳಾ ತಂಡ) ಮತ್ತು ಶ್ರೀಲಂಕಾ ವಿರುದ್ಧದ ಸರಣಿಗಳು.
- 2020 – ಬಾಂಗ್ಲಾದೇಶ್, ಪಾಕಿಸ್ತಾನ್ ಸೂಪರ್ ಲೀಗ್, ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ ಮತ್ತು ಝಿಂಬಾಬ್ವೆ ವಿರುದ್ಧದ ಸರಣಿಗಳು.
- 2021 – ವೆಸ್ಟ್ ಇಂಡೀಸ್, ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳು ಹಾಗೂ ಪಾಕಿಸ್ತಾನ್ ಸೂಪರ್ ಲೀಗ್.
- 2022 – ಆಸ್ಟ್ರೇಲಿಯಾ, ಪಾಕಿಸ್ತಾನ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ್ U19, ಐರ್ಲೆಂಡ್ (ಮಹಿಳಾ ತಂಡ) ಮತ್ತು ಇಂಗ್ಲೆಂಡ್ (2 ಬಾರಿ) ವಿರುದ್ಧ ಸರಣಿಗಳು.
- 2023 – ನ್ಯೂಝಿಲೆಂಡ್ (2 ಬಾರಿ), ಪಾಕಿಸ್ತಾನ್ ಸೂಪರ್ ಲೀಗ್, ವುಮೆನ್ಸ್ ಎಕ್ಸಿಬಿಷನ್ ಮ್ಯಾಚಸ್, ಸೌತ್ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಸರಣಿ.
ಇದೀಗ ಏಷ್ಯಾಕಪ್ (ನೇಪಾಳ, ಶ್ರೀಲಂಕಾ, ಅಫ್ಘಾನಿಸ್ತಾನ್ ಮತ್ತು ಬಾಂಗ್ಲಾದೇಶ್) ಅನ್ನು ಕೂಡ ಆಯೋಜಿಸಿದ್ದೇವೆ. ಹಾಗಾಗಿ ಯಾವುದೇ ಸಂದೇಹ ಬೇಡ ಮಿಸ್ಟರ್ ಜಯ್ ಶಾ, 2025 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಲು ಪಾಕಿಸ್ತಾನ್ ಸಿದ್ಧವಾಗಿದೆ ಎಂದು ಶಾಹಿದ್ ಅಫ್ರಿದಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
ಈ ಮೂಲಕ ಕಳೆದ 6 ವರ್ಷಗಳಲ್ಲಿ ಹಲವು ವಿದೇಶಿ ತಂಡಗಳು ಹಾಗೂ ಈ ಬಾರಿ ಭಾರತವನ್ನು ಹೊರತುಪಡಿಸಿ ಉಳಿದ ಏಷ್ಯನ್ ತಂಡಗಳು ಪಾಕಿಸ್ತಾನದಲ್ಲಿ ಪಂದ್ಯಗಳನ್ನಾಡಿದೆ. ಇದಾಗ್ಯೂ ಭದ್ರತಾ ಕಾಳಜಿಯ ಸಲುವಾಗಿ ಏಷ್ಯಾಕಪ್ ಅನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗಿದೆ ಎಂಬ ಜಯ್ ಶಾ ಅವರ ಹೇಳಿಕೆ ಒಪ್ಪುವಂತದಲ್ಲ ಎಂದು ಶಾಹಿದ್ ಅಫ್ರಿದಿ ತಿಳಿಸಿದ್ದಾರೆ.