Asia Cup 2023: ಮಳೆಯಿಂದಾಗಿ ಸೂಪರ್-4 ಪಂದ್ಯಗಳು ರದ್ದಾದರೆ ಯಾರು ಫೈನಲ್ಗೆ?
Asia Cup 2023: ಏಷ್ಯಾಕಪ್ 2023ರ ಫೈನಲ್ ಪಂದ್ಯವು ಸೆಪ್ಟೆಂಬರ್ 17 ರಂದು ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮಳೆ ಅಡಚಣೆಯನ್ನುಂಟು ಮಾಡಿದರೆ ಮೀಸಲು ದಿನದಾಟದಲ್ಲಿ ಪಂದ್ಯವನ್ನು ಆಯೋಜಿಸಬಹುದು. ಅದಕ್ಕೂ ಅವಕಾಶ ಇಲ್ಲದಿದ್ದರೆ ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.
ಏಷ್ಯಾಕಪ್ನ ಕೊನೆಯ ಹಂತದ ಪಂದ್ಯಗಳಿಗೆ ಮಳೆ ಭೀತಿ ಎದುರಾಗಿದೆ. ಸೂಪರ್ ಫೋರ್ ಹಂತದ ನಾಲ್ಕು ಪಂದ್ಯಗಳಿಗೆ ಆತಿಥ್ಯವಹಿಸಬೇಕಿರುವ ಕೊಲಂಬೊದಲ್ಲಿ ಭಾರೀ ಮಳೆಯಾಗುತ್ತಿದ್ದು, ಹೀಗಾಗಿ ದ್ವಿತೀಯ ಸುತ್ತಿನ ಪಂದ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹವಾಮಾನ ವರದಿಗಳ ಪ್ರಕಾರ, ಮುಂದಿನ ವಾರ ಕೊಲಂಬೊ ಸುತ್ತ ಮುತ್ತ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ. ಇದೇ ಕಾರಣದಿಂದಾಗಿ ಇದೀಗ ಸೂಪರ್-4 ಹಂತದ ಪಂದ್ಯಗಳು ಮಳೆಯಿಂದಾಗಿ ರದ್ದಾಗುವ ಭೀತಿ ಎದುರಾಗಿದೆ.
ಆರ್. ಪ್ರೇಮದಾಸ ಮೈದಾನದಲ್ಲಿ 5 ಪಂದ್ಯಗಳು:
ಸೂಪರ್-4 ಹಂತದ ಮೊದಲ ಪಂದ್ಯವನ್ನು ಆಡಲಾಗಿದೆ. ಲಾಹೋರ್ನಲ್ಲಿ ನಡೆದ ಮೊದಲ ಮ್ಯಾಚ್ನಲ್ಲಿ ಬಾಂಗ್ಲಾದೇಶ್ ವಿರುದ್ಧ ಪಾಕಿಸ್ತಾನ್ ಭರ್ಜರಿ ಜಯ ಸಾಧಿಸಿದೆ. ಇನ್ನುಳಿದಿರುವ 5 ಪಂದ್ಯಗಳಿಗೆ ಶ್ರೀಲಂಕಾದ ಆರ್. ಪ್ರೇಮದಾಸ ಮೈದಾನ ಆತಿಥ್ಯವಹಿಸಲಿದೆ.
ಆದರೆ ಹವಾಮಾನ ವರದಿ ಪ್ರಕಾರ, ಸೆಪ್ಟೆಂಬರ್ 9 ರಿಂದ ಕೊಲಂಬೊದ ಸುತ್ತ ಮುತ್ತ ಹೆಚ್ಚಿನ ದಿನಗಳಲ್ಲಿ ಶೇ.80 ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಕೊಲಂಬೊದಲ್ಲಿ ಸತತ ಮಳೆಯಾದರೆ ಸೂಪರ್-4 ನ ಐದು ಪಂದ್ಯಗಳು ಕೂಡ ವಾಶ್ ಔಟ್ ಆಗಲಿದೆ.
ಪಾಕಿಸ್ತಾನಕ್ಕೆ ಪ್ಲಸ್ ಪಾಯಿಂಟ್:
ಸೂಪರ್-4 ಹಂತದ ಎಲ್ಲಾ ಪಂದ್ಯಗಳು ರದ್ದಾದರೂ ಪಾಕಿಸ್ತಾನ್ ತಂಡ ಫೈನಲ್ಗೆ ಪ್ರವೇಶಿಸುವುದು ಖಚಿತ. ಏಕೆಂದರೆ ಪಾಕ್ ತಂಡವು ದ್ವಿತೀಯ ಸುತ್ತಿನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಜಯ ಸಾಧಿಸಿದೆ. ಇದೀಗ ಅಂಕ ಪಟ್ಟಿಯಲ್ಲಿ 2 ಅಂಕಗಳೊಂದಿಗೆ ಪಾಕ್ ತಂಡವು ಅಗ್ರಸ್ಥಾನ ಅಲಂಕರಿಸಿದೆ. ಇನ್ನು ಉಳಿದ ಪಂದ್ಯಗಳು ರದ್ದಾದರೆ 2 ಅಂಕ ಸಿಗಲಿದೆ. ಅಂದರೆ ಒಟ್ಟು 4 ಪಾಯಿಂಟ್ಸ್ನೊಂದಿಗೆ ಪಾಕಿಸ್ತಾನ್ ತಂಡವು ನೇರವಾಗಿ ಫೈನಲ್ಗೆ ಅರ್ಹತೆ ಪಡೆಯಲಿದೆ.
ಫೈನಲಿಸ್ಟ್ ಯಾರು?
ಒಂದು ವೇಳೆ ಮಳೆಯಿಂದಾಗಿ ದ್ವಿತೀಯ ಸುತ್ತಿನ ಪಂದ್ಯಗಳು ರದ್ದಾಗಿ ಪಾಕಿಸ್ತಾನ್ ತಂಡ ಫೈನಲ್ಗೆ ಪ್ರವೇಶಿಸಿದರೆ ಎದುರಾಳಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ. ಏಕೆಂದರೆ ಎಲ್ಲಾ ಪಂದ್ಯಗಳು ರದ್ದಾದರೆ ಇಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳು ತಲಾ 3 ಅಂಕಗಳನ್ನು ಪಡೆಯಲಿದೆ. ಇನ್ನು ಮೊದಲ ಪಂದ್ಯ ಸೋತಿರುವ ಬಾಂಗ್ಲಾದೇಶ್ 2 ಅಂಕಗಳೊಂದಿಗೆ ಫೈನಲ್ ರೇಸ್ನಿಂದ ಹೊರಬೀಳಲಿದೆ.
ಇಲ್ಲಿ ಪಂದ್ಯಗಳು ನಡೆಯದ ಕಾರಣ ನೆಟ್ ರನ್ ರೇಟ್ ಕೂಡ ಇರುವುದಿಲ್ಲ. ಹಾಗೆಯೇ ಸಮನಾದ ಅಂಕಗಳನ್ನು ಹೊಂದಿರುವ ಭಾರತ ಮತ್ತು ಶ್ರೀಲಂಕಾ ತಂಡಗಳಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಾಗುತ್ತದೆ. ಇದಕ್ಕಾಗಿ ಟಾಸ್ ಪ್ರಕ್ರಿಯೆಯ ಮೊರೆ ಹೋಗಲಾಗುತ್ತದೆ. ಅಂದರೆ ಇಲ್ಲಿ ಟಾಸ್ ಜಯಿಸುವ ತಂಡ ಫೈನಲ್ಗೆ ಪ್ರವೇಶಿಸಲಿದೆ.
ಫೈನಲ್ ಯಾವಾಗ?
ಏಷ್ಯಾಕಪ್ 2023ರ ಫೈನಲ್ ಪಂದ್ಯವು ಸೆಪ್ಟೆಂಬರ್ 17 ರಂದು ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮಳೆ ಅಡಚಣೆಯನ್ನುಂಟು ಮಾಡಿದರೆ ಮೀಸಲು ದಿನದಾಟದಲ್ಲಿ ಪಂದ್ಯವನ್ನು ಆಯೋಜಿಸಬಹುದು. ಅದಕ್ಕೂ ಅವಕಾಶ ಇಲ್ಲದಿದ್ದರೆ ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.
ಇದನ್ನೂ ಓದಿ: ಏಷ್ಯಾಕಪ್ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1
ಏಷ್ಯಾಕಪ್ ಸೂಪರ್-4 ಹಂತದ ಉಳಿದ ಪಂದ್ಯಗಳ ವೇಳಾಪಟ್ಟಿ ಹೀಗಿದೆ:
- ಸೆಪ್ಟೆಂಬರ್ 9- ಶ್ರೀಲಂಕಾ Vs ಬಾಂಗ್ಲಾದೇಶ್ (ಕೊಲಂಬೊ)
- ಸೆಪ್ಟೆಂಬರ್ 10- ಭಾರತ Vs ಪಾಕಿಸ್ತಾನ್ (ಕೊಲಂಬೊ)
- ಸೆಪ್ಟೆಂಬರ್ 12- ಭಾರತ Vs ಶ್ರೀಲಂಕಾ (ಕೊಲಂಬೊ)
- ಸೆಪ್ಟೆಂಬರ್ 14- ಪಾಕಿಸ್ತಾನ್ Vs ಶ್ರೀಲಂಕಾ (ಕೊಲಂಬೊ)
- ಸೆಪ್ಟೆಂಬರ್ 15- ಭಾರತ Vs ಬಾಂಗ್ಲಾದೇಶ್ (ಕೊಲಂಬೊ)
- ಸೆಪ್ಟೆಂಬರ್ 17- ಫೈನಲ್ ಪಂದ್ಯ (ಕೊಲಂಬೊ)
ಲಾಹೋರ್ನಲ್ಲಿ ನಡೆದ ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ ಪಾಕಿಸ್ತಾನ್ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.