AUS vs ENG: ಆಸೀಸ್ ದಿಗ್ಗಜ ಮ್ಯಾಥ್ಯೂ ಹೇಡನ್ ಬೆತ್ತಲಾಗುವುದನ್ನು ತಪ್ಪಿಸಿದ ಜೋ ರೂಟ್

Joe Root Century: ಜೋ ರೂಟ್ ಆಸ್ಟ್ರೇಲಿಯಾದಲ್ಲಿ ತಮ್ಮ ಮೊದಲ ಟೆಸ್ಟ್ ಶತಕ ಸಿಡಿಸಿ ಇತಿಹಾಸ ನಿರ್ಮಿಸಿದ್ದಾರೆ. ಗಬ್ಬಾದಲ್ಲಿ ನಡೆದ ಆಶಸ್ ಎರಡನೇ ಟೆಸ್ಟ್‌ನಲ್ಲಿ ಅವರ ಅಜೇಯ 100+ ರನ್ ಸಾಧನೆಯು, ಮ್ಯಾಥ್ಯೂ ಹೇಡನ್ ತಮ್ಮ 'ಬೆತ್ತಲೆ ಓಟ'ದ ಪಣದಿಂದ ಪಾರಾಗಲು ನೆರವಾಯಿತು. 30ನೇ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಬಂದ ಈ ಶತಕ, ರೂಟ್ ಅವರ ಆಸ್ಟ್ರೇಲಿಯಾ ಶತಕದ ಬರವನ್ನೇ ನೀಗಿಸಿತು.

AUS vs ENG: ಆಸೀಸ್ ದಿಗ್ಗಜ ಮ್ಯಾಥ್ಯೂ ಹೇಡನ್ ಬೆತ್ತಲಾಗುವುದನ್ನು ತಪ್ಪಿಸಿದ ಜೋ ರೂಟ್
Root, Hayden

Updated on: Dec 04, 2025 | 7:44 PM

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ (England vs Australia) ನಡುವಿನ ಆಶಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯವು ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆಯುತ್ತಿದೆ. ಈ ಹಗಲು-ರಾತ್ರಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್‌ ತಂಡ ದಿನದಾಟದಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 325 ರನ್ ಗಳಿಸಿದೆ. ಇಂಗ್ಲೆಂಡ್ ಪರ ಜೋ ರೂಟ್ (Joe Root) ಅಜೇಯ ಶತಕ ಬಾರಿಸಿದ್ದಾರೆ. ವಾಸ್ತವವಾಗಿ ಜೋ ರೂಟ್ ಆಸ್ಟ್ರೇಲಿಯಾದಲ್ಲಿ 16 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದೀಗ ತಮ್ಮ 30 ನೇ ಟೆಸ್ಟ್ ಇನ್ನಿಂಗ್ಸ್​ನಲ್ಲಿ ರೂಟ್ ಶತಕ ಸಿಡಿಸಿದ್ದಾರೆ. ರೂಟ್ ಈ ಹಿಂದೆ ಆಸ್ಟ್ರೇಲಿಯಾದಲ್ಲಿ 9 ಟೆಸ್ಟ್ ಅರ್ಧಶತಕಗಳನ್ನು ಬಾರಿಸಿದ್ದರು. ಆದರೆ ಒಮ್ಮೆಯೂ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಿರಲಿಲ್ಲ. ಆದರೆ ಈ ಬಾರಿ ಅವರು ಶತಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಶತಕದೊಂದಿಗೆ ಜೋ ರೂಟ್, ಆಸ್ಟ್ರೇಲಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ (Matthew Hayden) ಬೆತ್ತಲಾಗುವುದನ್ನು ಸಹ ತಪ್ಪಿಸಿದ್ದಾರೆ.

ಬೆತ್ತಲೆಯಾಗಿ ಓಡುತ್ತೇನೆ- ಹೇಡನ್

ವಾಸ್ತವವಾಗಿ ಮೇಲೆ ಹೇಳಿದಂತೆ ಟೆಸ್ಟ್ ಕ್ರಿಕೆಟ್​ನಲ್ಲಿ 40 ಶತಕಗಳನ್ನು ಬಾರಿಸಿರುವ ಜೋ ರೂಟ್, ಆಸ್ಟ್ರೇಲಿಯಾದಲ್ಲಿ ಮಾತ್ರ ಇದುವರೆಗೆ ಟೆಸ್ಟ್ ಶತಕ ಬಾರಿಸಿರಲಿಲ್ಲ. ಹೀಗಾಗಿ ರೂಟ್, ಈ ಪ್ರವಾಸದಲ್ಲಾದರೂ ತಮ್ಮ ಶತಕದ ಬರವನ್ನು ನೀಗಿಸುತ್ತಾರಾ ಎಂದು ಎಲ್ಲರೂ ಕಾದು ಕುಳಿತಿದ್ದರು. ಇದಕ್ಕೆ ಪೂರಕವಾಗಿ ಆಶಸ್ ಸರಣಿ ಆರಂಭಕ್ಕೂ ಮುನ್ನವೇ ಈ ಬಗ್ಗೆ ಮಾತನಾಡಿದ್ದ ಹೇಡನ್, ‘ಜೋ ರೂಟ್ ಈ ಆಶಸ್ ಟೆಸ್ಟ್ ಸರಣಿಯಲ್ಲಿ ಒಂದೇ ಒಂದು ಶತಕ ಗಳಿಸದಿದ್ದರೆ, ನಾನು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಬೆತ್ತಲೆಯಾಗಿ ಓಡುತ್ತೇನೆ ಎಂದು ಹೇಳಿದ್ದರು.

ಆದರೆ ಪರ್ತ್‌ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್‌ನಲ್ಲಿ ಜೋ ರೂಟ್​ಗೆ ಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ ಶೂನ್ಯಕ್ಕೆ ಔಟಾಗಿದ್ದ ರೂಟ್, ಎರಡನೇ ಇನ್ನಿಂಗ್ಸ್​ನಲ್ಲಿ 8 ರನ್‌ಗಳಿಸಿ ಔಟಾಗಿದ್ದರು. ಮೊದಲ ಪಂದ್ಯದಲ್ಲಿ ರೂಟ್ ಅವರ ಪ್ರದರ್ಶನ ನೋಡಿದ್ದ ಹೇಡನ್ ಅವರಿಗೆ, ತಾನು ಬೆತ್ತಲೆಯಾಗಿ ಓಡಬೇಕಾಗಬಹುದು ಎಂಬ ಆತಂಕ ಮನದಲ್ಲಿ ಮೂಡಿರುವುದಂತೂ ಖಚಿತ. ಆದರೆ ಗಬ್ಬಾ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿಯೇ ಶತಕ ಬಾರಿಸಿರುವ ರೂಟ್, ಸಾರ್ವಜನಿಕವಾಗಿ ಹೋಗುತ್ತಿದ್ದ ಹೇಡನ್ ಅವರ ಮಾನವನ್ನು ಉಳಿಸಿದ್ದಾರೆ ಎನ್ನಬಹುದು.

ಇನ್ನು ರೂಟ್ ಶತಕ ಬಾರಿಸುತ್ತಿದ್ದಂತೆ ವಿಡಿಯೋವೊಂದನ್ನು ಹರಿಬಿಟ್ಟಿರುವ ಹೇಡನ್, ‘ಹಲೋ ಜೋ, ಆಸ್ಟ್ರೇಲಿಯಾದಲ್ಲಿ ಶತಕ ಗಳಿಸಿದ್ದಕ್ಕಾಗಿ ಅಭಿನಂದನೆಗಳು. ಶತಕ ಬಾರಿಸಲು ಸ್ವಲ್ಪ ಸಮಯ ತೆಗೆದುಕೊಂಡಿತು. ನೀವು ಶತಕ ಗಳಿಸುವಿರಿ ಎಂದು ನನಗೆ ವಿಶ್ವಾಸವಿತ್ತು. ಅಭಿನಂದನೆಗಳು ಗೆಳೆಯ. 10 ಅರ್ಧಶತಕಗಳ ಬಳಿಕ ಅಂತಿಮವಾಗಿ ಶತಕ ಬಂದಿದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ