
ಆ್ಯಶಸ್ ಸರಣಿಯ 5ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಜೋ ರೂಟ್ ಭರ್ಜರಿ ಶತಕ ಸಿಡಿಸಿದ್ದಾರೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 57 ರನ್ ಗಳಿಸುವಷ್ಟರಲ್ಲಿ ಅಗ್ರ ಕ್ರಮಾಂಕದ ಮೂವರು ಬ್ಯಾಟರ್ ಗಳು ಪೆವಿಲಿಯನ್ ಗೆ ಮರಳಿದ್ದರು.
ಈ ಹಂತದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋ ರೂಟ್, ಹ್ಯಾರಿ ಬ್ರೂಕ್ ಜೊತೆಗೂಡಿ ಇನಿಂಗ್ಸ್ ಕಟ್ಟಿದರು. ಪರಿಣಾಮ 5ನೇ ವಿಕೆಟ್‌ಗೆ 169 ರನ್ ಗಳ ಜೊತೆಯಾಟ ಮೂಡಿಬಂತು.
ಇದರ ನಡುವೆ 97 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್ ಗಳೊಂದಿಗೆ 84 ರನ್ ಬಾರಿಸಿದ ಹ್ಯಾರಿ ಬ್ರೂಕ್ ಔಟಾದರು. ಇದಾಗ್ಯೂ ಮತ್ತೊಂದೆಡೆ ಜವಾಬ್ದಾರಿಯುತ ಇನಿಂಗ್ಸ್ ಕಟ್ಟಿದ ಜೋ ರೂಟ್ ಆಕರ್ಷಕ ಶತಕ ಪೂರೈಸಿದರು.
ಈ ಶತಕದೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಸೆಂಚುರಿ ಸಿಡಿಸಿದ ವಿಶ್ವದ ಮೂರನೇ ಬ್ಯಾಟರ್ ಎನಿಸಿಕೊಂಡರು. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್.
ಇನ್ನು ಈ ಪಂದ್ಯದಲ್ಲಿ 242 ಎಸೆತಗಳನ್ನು ಎದುರಿಸಿದ ಜೋ ರೂಟ್ 15 ಫೋರ್ ಗಳೊಂದಿಗೆ ಒಟ್ಟು 160 ರನ್ ಕಲೆಹಾಕಿದರು. 160 ರನ್ ಗಳೊಂದಿಗೆ ಟೆಸ್ಟ್ ಕ್ರಿಕೆಟ್ ನ ರನ್ ಸಂಖ್ಯೆಯನ್ನು 13937 ಕ್ಕೇರಿಸಿದ್ದಾರೆ.
ಇದನ್ನೂ ಓದಿ: ಟಿ೨೦ ಕ್ರಿಕೆಟ್‌ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ನಿರ್ಮಿಸಿದ ಸ್ಪೇನ್
ಜೋ ರೂಟ್ ಇನ್ನು 1984 ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್. ಸಚಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 15921 ರನ್ ಗಳಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು ಜೋ ರೂಟ್ ಅವರ ಶತಕದ ನೆರವಿನೊಂದಿಗೆ ಒಟ್ಟು 384 ರನ್ ಗಳಿಸಿ ಆಲೌಟ್ ಆಗಿದೆ. ಆಸ್ಟ್ರೇಲಿಯಾ ಪರ ಮೈಕೆಲ್ ನೇಸರ್ 4 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ ಹಾಗೂ ಸ್ಕಾಟ್ ಬೋಲ್ಯಾಂಡ್ ತಲಾ 2 ವಿಕೆಟ್ ಕಬಳಿಸಿದ್ದಾರೆ.
Published On - 11:26 am, Mon, 5 January 26