ಎಲ್ಲವೂ ಸರಿಯಾಗಿದ್ದಿದ್ದಲ್ಲಿ ಇಂದು ಕೊಡಗು (Kodagu) ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಸಿದ್ದವಾಗಿ ಐಪಿಎಲ್ (IPL),ಏಕದಿನ ಪಂದ್ಯ, ರಣಜಿ ಪಂದ್ಯಗಳು ಆರಂಭವಾಗಬೇಕಿತ್ತು. ಆದ್ರೆ ಕೆಲವರ ವಿರೋಧದಿಂದಾಗಿ ಏಳು ವರ್ಷಗಳಿಂದ ಸ್ಟೇಡಿಯಂ ಕಾಮಗಾರಿ ನೆನಗುದಿಗೆ ಬಿದ್ದಿತ್ತು. ಕೊನೆಗೂ ಹೈಕೋರ್ಟ್ (Karnataka high court) ಮಧ್ಯ ಪ್ರವೇಶಿಸಿ ಸ್ಟೇಡಿಯಂ ಕಾಮಗಾರಿಗೆ ಗ್ರೀನ್ ಸಿಗ್ನಲ್ ನೀಡಿದೆ. ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು 11 ಎಕರೆ ಭೂಮಿಯನ್ನು ಎರಡು ವಾರಗಳಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (KSCA) ಹಸ್ತಾಂತರಿಸುವಂತೆ ಕೊಡಗು ಆಡಳಿತ ಮಂಡಳಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾ ಮಾದರಿಯ ನೈಸರ್ಗಿಕ ಕ್ರಿಕೆಟ್ ಸ್ಟೇಡಿಯಂನಂತೆಯೇ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಮೂರ್ನಾಡು ಸಮಿಪದ ಹುದ್ದೂರು ಗ್ರಾಮದಲ್ಲೂ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಬೇಕೆಂದು 2015ರಲ್ಲೇ ಕೆಎಸ್ಸಿಎ ಯೋಜನೆ ರೂಪಿಸಿ ಕಾಮಗಾರಿಯನ್ನ ಆರಂಭಸಿತ್ತು. ಆದರೆ ಇಲ್ಲಿನ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವ 50ಕ್ಕೂ ಅಧಿಕ ಕುಟುಂಬಗಳು ಈ ಸ್ಟೇಡಿಯಂ ಇದ್ದ ಜಾಗದಲ್ಲೇ ಎರಡು ಎಕರೆಯನ್ನ ಸ್ಮಶಾನ ಮಾಡಿಕೊಂಡಿದ್ದರು. ಇದು ವಿವಾದಕ್ಕೆ ಕಾರಣವಾಗಿ ಏಳು ವರ್ಷಗಳ ಕಾಲ ಕಾಮಗಾರಿ ನೆನಗುದಿಗೆ ಬಿದ್ದಿತ್ತು. ಇದರ ವಿರುದ್ಧ ರಾಜ್ಯ ಕ್ರಿಕೆಟ್ ಸಂಸ್ಥೆಹೈಕೋರ್ಟ್ ಮೆಟ್ಟಿಲೇರಿತ್ತು.
IPL 2023: ಈ ವಿಚಾರದಲ್ಲಿ ಎಚ್ಚರವಿರಲಿ; ಐಪಿಎಲ್ ಫ್ರಾಂಚೈಸಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಬಿಸಿಸಿಐ!
ಇದೀಗ ಕರ್ನಾಟಕ ಹೈಕೋರ್ಟ್ ಕಾಮಗಾರಿಗೆ ಇದ್ದ ಎಲ್ಲಾ ಅಡೆತಡೆಗಳನ್ನ ನಿವಾರಿಸಿದೆ. ಸ್ಮಾಶನಕ್ಕೆ ಬೇಕಾದ ಒಂದು ಎಕರೆ ಜಾಗ ಬಿಟ್ಟು ಉಳಿದ 11 ಎಕರೆ 70 ಸೆಂಟ್ ಜಾಗವನ್ನ ಕ್ರಿಕೆಟ್ ಸಂಸ್ಥೆಗೆ ನೀಡುವಂತೆ ಆದೇಶಿಸಿದೆ. ಮಾತ್ರವಲ್ಲದೆ ಸ್ಟೇಡಿಯಂ ಕಾಮಗಾರಿ ನಡೆಸಲು ಬೇಕಾದ ಅಗತ್ಯ ಭದ್ರತೆ ನೀಡುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿದೆ. ಅದರಂತೆ ಪೊಳಿಸ್ ಭದ್ರತೆಯೊಂದಿಗೆ ಆಗಮಿಸಿದ ಕಂದಾಯ ಇಲಾಖೆ ಜಾಗ ಸರ್ವೆ ನಡೆಸಿ ಕಾಮಗಾರಿಗೆ ಅನುವು ಮಾಡಿಕೊಟ್ಟಿದ್ದಾರೆ.
ಮತ್ತೊಂದೆಡೆ ಸ್ಥಳಿಯ ನಿವಾಸಿಗಳು ತೀವ್ರ ಅಸಮಾಧಾನಗೊಂಡಿದ್ದು, ಜಿಲ್ಲಾಡಳಿತ ಹೈಕೋರ್ಟ್ಗೆ ತಪ್ಪು ಮಾಹಿತಿ ನೀಡಿದ್ದರಿಂದಲೇ ಈ ರೀತಿಯ ತೀರ್ಪು ಬರುವಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲಾಡಳಿತದ ವಿರುದ್ಧ ರಸ್ತೆಯಲ್ಲೇ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸಧ್ಯ ಕ್ರಿಕೆಟ್ ಸ್ಟೇಡಿಯಂ ಕಾಮಗಾರಿಯಂತೂ ಆರಂಭಗೊಂಡಿದೆ. ಮತ್ತೊಂದೆಡೆ ಸ್ಥಳೀಯ ಜನರ ಬೇಡಿಕೆ ನೆನೆಗುದಿಗೆ ಬಿದ್ದಿದೆ. ಹಾಗಾಗಿ ಜಿಲ್ಲಾಡಳಿತ ಇದೀಗ ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ. ಈ ಜನರ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸುತ್ತಾ ಕಾದುನೋಡಬೇಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Wed, 29 March 23