IND vs ENG: ತಂಡ ಸಂಕಷ್ಟದಲ್ಲಿದ್ದಾಗಲೂ ಕೈ ಹಿಡಿಯದ ಕರುಣ್ ವಿರುದ್ಧ ಭುಗಿಲೆದ್ದ ಆಕ್ರೋಶ

Karun Nair's England Struggle: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕರುಣ್ ನಾಯರ್ ನಿರಾಶಾದಾಯಕ ಪ್ರದರ್ಶನ ನೀಡುತ್ತಿದ್ದಾರೆ. ಅವರ ನಿರಂತರ ವೈಫಲ್ಯದಿಂದಾಗಿ ಅಭಿಮಾನಿಗಳು ಮತ್ತು ಮಾಜಿ ಆಟಗಾರರು ಅಸಮಾಧಾನಗೊಂಡಿದ್ದಾರೆ. ಶ್ರೇಯಸ್ ಅಯ್ಯರ್‌ಗೆ ಅವಕಾಶ ನೀಡಬೇಕೆಂದು ಅನೇಕರು ಒತ್ತಾಯಿಸುತ್ತಿದ್ದಾರೆ. ಕರುಣ್ ನಾಯರ್ ಒತ್ತಡದಲ್ಲಿ ಆಡುತ್ತಿದ್ದಾರೆ ಮತ್ತು ಅವರ ಆಟದಲ್ಲಿ ಸ್ಥಿರತೆ ಕಾಣೆಯಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

IND vs ENG: ತಂಡ ಸಂಕಷ್ಟದಲ್ಲಿದ್ದಾಗಲೂ ಕೈ ಹಿಡಿಯದ ಕರುಣ್ ವಿರುದ್ಧ ಭುಗಿಲೆದ್ದ ಆಕ್ರೋಶ
Karun Nair

Updated on: Jul 14, 2025 | 5:10 PM

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಆಯ್ಕೆಯಾಗಿದ್ದ ಕನ್ನಡಿಗ ಕರುಣ್ (Karun Nair) ನಾಯರ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿದ್ದವು. ಆ ನಿರೀಕ್ಷೆ ತಕ್ಕಂತೆ ಕರುಣ್ ಕೂಡ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಕೂಡ ಸಿಡಿಸಿದ್ದರು. ಆದರೆ ಇಂಗ್ಲೆಂಡ್‌ ತಂಡದ ವಿರುದ್ಧ ಆರಂಭವಾದ ಟೆಸ್ಟ್ ಸರಣಿಯಲ್ಲಿ ಇದುವರೆಗೆ 6 ಇನ್ನಿಂಗ್ಸ್​ಗಳಲ್ಲಿ ಬ್ಯಾಟಿಂಗ್‌ ಮಾಡಿರುವ ಕರುಣ್ ನಾಯರ್​ಗೆ ಇದುವರೆಗೆ ಒಂದೇ ಒಂದು ಅರ್ಧಶತಕವನ್ನೂ ಬಾರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕರುಣ್ ನಾಯರ್ ಅವರ ಮೇಲೆ ಅಭಿಮಾನಿಗಳು ತಮ್ಮ ಕೋಪವನ್ನು ಹೊರಹಾಕುತ್ತಿದ್ದಾರೆ. ಕರುಣ್ ನಾಯರ್ ಬದಲಿಗೆ ಶ್ರೇಯಸ್ ಅಯ್ಯರ್‌ಗೆ ಅವಕಾಶ ಸಿಗಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ಪ್ರವಾಸದಲ್ಲಿ ಕರುಣ್ ಫೇಲ್

ಅಭಿಮಾನಿಗಳು ಮಾತ್ರವಲ್ಲದೆ, ಮಾಜಿ ಆಟಗಾರರು ಕೂಡ ಸಹ ಕರುಣ್ ನಾಯರ್ ಅವರ ಬ್ಯಾಟಿಂಗ್‌ನಿಂದ ಆಶ್ಚರ್ಯಚಕಿತರಾಗಿದ್ದಾರೆ. ದಿನೇಶ್ ಕಾರ್ತಿಕ್, ಆರ್ ಅಶ್ವಿನ್, ಇಂಗ್ಲೆಂಡ್‌ನ ಮಾಜಿ ನಾಯಕ ಮೈಕ್ ಅಥರ್ಟನ್ ಅವರು ಕರುಣ್ ನಾಯರ್ ಒತ್ತಡದಲ್ಲಿದ್ದು, ಇದರಿಂದ ಅವರು ವಿಚಿತ್ರ ರೀತಿಯಲ್ಲಿ ಔಟ್ ಆಗುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕರುಣ್ ನಾಯರ್ ಕುರಿತು, ಆರ್ ಅಶ್ವಿನ್ ತಮ್ಮ ಯೂಟ್ಯೂಬ್ ಲೈವ್‌ನಲ್ಲಿ, ‘ಕರುಣ್ ನಾಯರ್ ಉತ್ತಮವಾಗಿ ಪ್ರದರ್ಶನ ನೀಡುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ ಆದರೆ ಅವರು ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲಿಲ್ಲ’ ಎಂದಿದ್ದಾರೆ.

ದಿನೇಶ್ ಕಾರ್ತಿಕ್ ಕೂಡ, ‘ಅವರು ಏನು ಯೋಚಿಸುತ್ತಿದ್ದರು ಎಂದು ನನಗೆ ತಿಳಿದಿಲ್ಲ. ಕರುಣ್ ನಾಯರ್ ಚೆಂಡು ಹೊರಗೆ ಸ್ವಿಂಗ್ ಆಗುತ್ತದೆ ಎಂದು ಭಾವಿಸಿದ್ದರು ಆದರೆ ಅದು ನೇರವಾಗಿ ಬಂದಿತು. ಬ್ರೈಡನ್ ಕಾರ್ಸೆ ಈ ವಿಕೆಟ್ ಪಡೆದಾಗ ತುಂಬಾ ಸಂತೋಷಪಟ್ಟಿರಬೇಕು.’ ಎಂದಿದ್ದಾರೆ.

ಅಭಿಮಾನಿಗಳ ಆಕ್ರೋಶ

ಕರುಣ್ ವಾಪಸ್ಸಾತಿ ಫಲ ಕೊಡಲಿಲ್ಲ

ಕರುಣ್ ನಾಯರ್ 8 ವರ್ಷಗಳ ನಂತರ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದಿದ್ದರು. ಇದೇ ಇಂಗ್ಲೆಂಡ್‌ ವಿರುದ್ಧ 303 ರನ್ ಬಾರಿಸಿ ದಾಖಲೆ ಕೂಡ ನಿರ್ಮಿಸಿದ್ದರು. ಆದರೆ ಈಗ ಈ ಟೆಸ್ಟ್ ಸರಣಿಯಲ್ಲಿ, ಅವರ ಬ್ಯಾಟ್‌ ಮೌನಕ್ಕೆ ಶರಣಾಗಿದೆ. ಲೀಡ್ಸ್ ಟೆಸ್ಟ್‌ನಲ್ಲಿ, ಅವರು 0 ಮತ್ತು 20 ರನ್‌ ಬಾರಿಸಿ ಔಟಾದರೆ, ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಕ್ರಮವಾಗಿ 31 ಮತ್ತು 26 ರನ್‌ ಕಲೆಹಾಕಿದ್ದರು. ಈಗ ಲಾರ್ಡ್ಸ್ ಟೆಸ್ಟ್‌ನಲ್ಲಿ 40 ರನ್‌ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 14 ರನ್‌ಗಳಿಗೆ ಸುಸ್ತಾದರು. ಹೀಗಾಗಿ ಗೌತಮ್ ಗಂಭೀರ್ ಮತ್ತು ಶುಭ್​ಮನ್ ಗಿಲ್ ಮುಂಬರುವ ಪಂದ್ಯಗಳಲ್ಲಿ ಕರುಣ್ ನಾಯರ್‌ಗೆ ಅವಕಾಶ ನೀಡುವುದು ಅನುಮಾನವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Mon, 14 July 25