
2025-26 ರ ರಣಜಿ ಟ್ರೋಫಿಯಲ್ಲಿ (Ranji Trophy) ಕನ್ನಡಿಗ ಕರುಣ್ ನಾಯರ್ (Karun Nair) ಅದ್ಭುತ ಫಾರ್ಮ್ನಲ್ಲಿದ್ದಾರೆ. ಗೋವಾ ವಿರುದ್ಧದ ರಣಜಿ ಪಂದ್ಯದಲ್ಲಿ ದ್ವಿಶತಕ ಬಾರಿಸುವಲ್ಲಿ ವಿಫಲರಾಗಿದ್ದ ಕರುಣ್, ಇದೀಗ ಕೇರಳ ತಂಡದ ವಿರುದ್ಧ ತಮ್ಮ ಶತಕವನ್ನು ದ್ವಿಶತಕವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಭಯ ತಂಡಗಳ ನಡುವಿನ ಪಂದ್ಯದ ಮೊದಲ ದಿನದಂದು ಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ಕರುಣ್, ಇದೀಗ ಎರಡನೇ ದಿನದಾಟದಂದು ಅಮೋಘ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಮತ್ತೆ ಭಾರತ ಟೆಸ್ಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವ ಇರಾದೆಯಲಿದ್ದಾರೆ.
ರಣಜಿ ಟ್ರೋಫಿಯ ಮೂರನೇ ಸುತ್ತಿನ ಪಂದ್ಯಗಳು ಅಕ್ಟೋಬರ್ 1 ರಿಂದ ಆರಂಭವಾಗಿವೆ. ಅದರಂತೆ ಕರ್ನಾಟಕ ಮತ್ತು ಕೇರಳ ತಂಡಗಳು ಮಂಗಳಪುರಂನಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಕರ್ನಾಟಕದ ಅನುಭವಿ ಬ್ಯಾಟ್ಸ್‌ಮನ್ ಕರುಣ್ ನಾಯರ್ ಸ್ಮರಣೀಯ ಇನ್ನಿಂಗ್ಸ್ ಆಡಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ್ದಾರೆ.
ವಾಸ್ತವವಾಗಿ ಕರುಣ್ ಬ್ಯಾಟಿಂಗ್‌ಗೆ ಇಳಿದಾಗ ತಂಡವು ಕೇವಲ 13 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ನಿದಾನವಾಗಿ ಇನ್ನಿಂಗ್ಸ್ ಕಟ್ಟಿದ ಕರುಣ್ ನಾಯರ್ 358 ಎಸೆತಗಳನ್ನು ಎದುರಿಸಿ 21 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 200 ರನ್‌ಗಳ ಗಡಿಯನ್ನು ತಲುಪಿದರು. ಗಮನಾರ್ಹವಾಗಿ, ಅವರು ಗೋವಾ ವಿರುದ್ಧದ ಹಿಂದಿನ ಪಂದ್ಯದಲ್ಲಿ ಅಜೇಯ 174 ರನ್ ಬಾರಿಸಿದ್ದರು. ಹಾಗೆಯೇ ಸುತ್ತಿನ ಮೊದಲ ಪಂದ್ಯದಲ್ಲಿಯೂ 73 ರನ್‌ಗಳ ಕಾಣಿಕೆ ನೀಡಿದ್ದರು.
ಕಳೆದ ರಣಜಿ ಸೀಸನ್ನಲ್ಲೂ ಇದೇ ರೀತಿಯಾಗಿ ಶತಕಗಳ ಮೇಲೆ ಶತಕ ಬಾರಿಸಿದ್ದ ಕರುಣ್ ಅವರನ್ನು ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್ ಸರಣಿಗಾಗಿ ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಲಾಗಿತ್ತು. ಸುಮಾರು ಎಂಟು ವರ್ಷಗಳ ನಂತರ ಭಾರತ ತಂಡದಲ್ಲಿ ಆಡುವ ಅವಕಾಶ ಪಡೆದ ಕರುಣ್ ಅವರಿಗೆ ಹಲವಾರು ಅವಕಾಶಗಳನ್ನು ನೀಡಲಾಯಿತು, ಆದರೆ ಅವರು ಅವುಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಆಡಿದ ಎಂಟು ಇನ್ನಿಂಗ್ಸ್‌ಗಳಲ್ಲಿ ಕೇವಲ ಒಂದು ಇನ್ನಿಂಗ್ಸ್‌ನಲ್ಲಿ 50 ರನ್‌ಗಳ ಗಡಿಯನ್ನು ದಾಟಿದರು. ಅವರ ಈ ಕಳಪೆ ಪ್ರದರ್ಶನದಿಂದಾಗಿ ಆಯ್ಕೆದಾರರು ಅವರನ್ನು ತಂಡದಿಂದ ಕೈಬಿಟ್ಟರು.
Prithvi Shaw: ರಣಜಿ ಟ್ರೋಫಿಯಲ್ಲಿ ಅತ್ಯಂತ ವೇಗದ ದ್ವಿಶತಕ ಬಾರಿಸಿದ ಪೃಥ್ವಿ ಶಾ
ಇನ್ನು ಕೇರಳ ವಿರುದ್ಧದ ಪಂದ್ಯದಲ್ಲಿ ಕರುಣ್ 389 ಎಸೆತಗಳನ್ನು ಎದುರಿಸಿ 25 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 233 ರನ್ ಬಾರಿಸಿದರು. ಇದರ ಜೊತೆಗೆ ಸ್ಮರಣ್ ರವಿಚಂದ್ರನ್ ಅವರೊಂದಿಗೆ ದಾಖಲೆಯ 338 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಈ ಪಂದ್ಯದಲ್ಲಿ ಕರುಣ್ ಅವರೊಂದಿಗೆ ಸ್ಮರಣ್ ಕೂಡ ಶತಕ ಬಾರಿಸಿದ್ದು, ಇದೀಗ ದ್ವಿಶತಕದ ಹೊಸ್ತಿಲಿನಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:49 pm, Sun, 2 November 25