South Africa vs India: ವಾವ್ ವಾಂಡರರ್ಸ್ ಪಿಚ್: ಮತ್ತಷ್ಟು ರೋಚಕತೆ ಪಡೆಯಲಿದೆ ಇಂದಿನ ಎರಡನೇ ದಿನದಾಟ

| Updated By: Vinay Bhat

Updated on: Jan 04, 2022 | 7:21 AM

ಮೊದಲ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 1 ವಿಕೆಟ್ ನಷ್ಟಕ್ಕೆ 35 ರನ್ ಬಾರಿಸಿದೆ. 167 ರನ್​ಗಳ ಹಿನ್ನಡೆಯಲ್ಲಿದೆ. ವಾಂಡರರ್ಸ್ ಪಿಚ್ ಇಂದಿನ ಎರಡನೇ ದಿನ ವೇಗಿಗಳಿಗೆ ಮತ್ತಷ್ಟು ಸಹಕಾರ ನೀಡಲಿದೆ. ಹೀಗಾಗಿ ಇಂದುಕೂಡ ರೋಚಕ ಫೈಟ್ ನಿರೀಕ್ಷಿಸಲಾಗಿದೆ.

South Africa vs India: ವಾವ್ ವಾಂಡರರ್ಸ್ ಪಿಚ್: ಮತ್ತಷ್ಟು ರೋಚಕತೆ ಪಡೆಯಲಿದೆ ಇಂದಿನ ಎರಡನೇ ದಿನದಾಟ
India Vs South Africa
Follow us on

ಜೊಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂ ಆರಂಭವಾಗಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ (South Africa vs India) ನಡುವಣ ಎರಡನೇ ಟೆಸ್ಟ್ ಪಂದ್ಯ (2nd Test) ಮೊದಲ ದಿನವೇ ಸಾಕಷ್ಟು ವಿಚಾರಗಳಿಗೆ ಕುತೂಹಲ ಕೆರಳಿಸಿತು. ಖಾಯಂ ನಾಯಕ ವಿರಾಟ್ ಕೊಹ್ಲಿ (Virat Kohli) ಇಂಜುರಿಯಿಂದ ಹೊರಗುಳಿದ ಪರಿಣಾಮ ಕೆಎಲ್ ರಾಹುಲ್ (KL Rahul) ಕ್ಯಾಪ್ಟನ್ ಜವಾಬ್ದಾರಿ ಹೊರಬೇಕಾಯಿತು. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ (Team India) ಪರ ನಾಯಯಕನ ಹೊರತಾಗಿ ಉಳಿದ ಬ್ಯಾಟರ್​ಗಳು ನಿರೀಕ್ಷೆಗೆ ತಕ್ಕಂತೆ ಬ್ಯಾಟ ಮಾಡಲಿಲ್ಲ. ಆರ್. ಅಶ್ವಿನ್ (R Ashwin) ಕೊಂಚ ಬ್ಯಾಟ್ ಬೀಸಿದ ಪರಿಣಾಮ ತಂಡದ ಮೊತ್ತ 200ರ ಗಡಿ ದಾಟಿತು ಎನ್ನಬಹುದು. ಅಂತಿಮವಾಗಿ 202 ರನ್​​ಗೆ ಭಾರತ ಸರ್ವಪತನ ಕಂಡಿತು. ಮೊದಲ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 1 ವಿಕೆಟ್ ನಷ್ಟಕ್ಕೆ 35 ರನ್ ಬಾರಿಸಿದೆ. 167 ರನ್​ಗಳ ಹಿನ್ನಡೆಯಲ್ಲಿದೆ. ವಾಂಡರರ್ಸ್ ಪಿಚ್ ಇಂದಿನ ಎರಡನೇ ದಿನ ವೇಗಿಗಳಿಗೆ ಮತ್ತಷ್ಟು ಸಹಕಾರ ನೀಡಲಿದೆ. ಹೀಗಾಗಿ ಇಂದುಕೂಡ ರೋಚಕ ಫೈಟ್ ನಿರೀಕ್ಷಿಸಲಾಗಿದೆ.

ಮೊದಲು ಬ್ಯಾಟ್ ಮಾಡಿದ ಭಾರತ:

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಳ್ಳುವ ನಿರ್ಧಾರ ಅಷ್ಟೇನೂ ಯಶಸ್ಸು ಕಾಣಲಿಲ್ಲ. ದಕ್ಷಿಣ ಆಫ್ರಿಕಾ ವೇಗಿಗಳು ಘಾತಕವಾಗಿ ಎರಗಿದರು. ಭಾರತದ ಬ್ಯಾಟ್ಸ್‌ಮನ್‌ಗಳು ರನ್ನಿಗಾಗಿ ಪರದಾಡಿದರು. ನಿರಂತರವಾಗಿ ವಿಕೆಟ್‌ ಉರುಳುತ್ತ ಹೋದವು. ಕನ್ನಡಿಗ ಜೋಡಿ ಕೆ.ಎಲ್‌.ರಾಹುಲ್ ಮತ್ತು ಮಯಂಕ್ ಅಗರವಾಲ್ ಮೊದಲ ವಿಕೆಟ್‌ಗೆ 36 ರನ್ ಸೇರಿಸಿ ಭರವಸೆ ಮೂಡಿಸಿದರು. ಆದರೆ ಮಯಂಕ್ ಔಟಾದ ನಂತರ ತಂಡ ಪತನದತ್ತ ಸಾಗಿತು. ಚೇತೇಶ್ವರ ಪೂಜಾರ 33 ಎಸೆತಗಳಲ್ಲಿ ಮೂರು ರನ್ ಗಳಿಸಿ ಔಟಾದರೆ ಅಜಿಂಕ್ಯ ರಹಾನೆ ಖಾತೆ ತೆರೆಯದೆ ವಾಪಸಾದರು.

ಹನುಮ ವಿಹಾರಿ ಮತ್ತು ರಿಷಭ್‌ ಪಂತ್ ಅವರಿಗೂ ಮಿಂಚಲು ಆಗಲಿಲ್ಲ. ಭಾರತದ ಸರದಿಯಲ್ಲಿ ಮಿಂಚಿದ ಇಬ್ಬರು ಆಟಗಾರರೆಂದರೆ ಕೆಎಲ್‌. ರಾಹುಲ್‌ ಮತ್ತು ಆರ್‌. ಅಶ್ವಿ‌ನ್‌. ದಿಢೀರ್‌ ನಾಯಕತ್ವದ ಒತ್ತಡದ ನಡುವೆಯೂ ಗಟ್ಟಿಯಾಗಿ ನಿಂತ ರಾಹುಲ್‌ 133 ಎಸೆತಗಳನ್ನು ನಿಭಾಯಿಸಿ ಭರ್ತಿ 50 ರನ್‌ ಹೊಡೆದರು. ಸಿಡಿಸಿದ್ದು 9 ಬೌಂಡರಿ. ಇದು ಭಾರತದ ಸರದಿಯ ಏಕೈಕ ಅರ್ಧ ಶತಕವಾಗಿತ್ತು. ರಾಹುಲ್‌ 46ನೇ ಓವರ್‌ನಲ್ಲಿ 5ನೇ ವಿಕೆಟ್‌ ರೂಪದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಅಗ್ರ ಕ್ರಮಾಂಕದ ಆಟಗಾರರ ವೈಫಲ್ಯದ ಬಳಿಕ ತಂಡವನ್ನು ಆಧರಿಸಿ ನಿಂತ ಆರ್‌. ಅಶ್ವಿ‌ನ್‌ 50 ಎಸೆತ ಎದುರಿಸಿ ಬಹುಮೂಲ್ಯ 46 ರನ್‌ ಹೊಡೆದರು. ಇದರಲ್ಲಿ 6 ಬೌಂಡರಿ ಸೇರಿತ್ತು.

ಉಪನಾಯಕ ಬುಮ್ರಾ ಭಾರತದ ಸರದಿಯ ಏಕೈಕ ಸಿಕ್ಸರ್‌ ಹೊಡೆದರು. ಜತೆಗೆ 2 ಬೌಂಡರಿಯೂ ಸೇರಿತ್ತು. 11 ಎಸೆತ ಎದುರಿಸಿದ ಅವರ ಗಳಿಕೆ ಅಜೇಯ 14 ರನ್‌. 4 ವಿಕೆಟ್‌ ಉಡಾಯಿಸಿದ ಯುವ ವೇಗಿ ಮಾರ್ಕೊ ಜಾನ್ಸೆನ್‌ ದಕ್ಷಿಣ ಆಫ್ರಿಕಾದ ಯಶಸ್ವಿ ಬೌಲರ್‌. ರಬಾಡ ಮತ್ತು ಒಲಿವರ್‌ ತಲಾ 3 ವಿಕೆಟ್‌ ಕೆಡವಿದರು. ಎನ್‌ಗಿಡಿ ಮತ್ತು ಮಹಾರಾಜ್‌ಗೆ ಯಾವುದೇ ವಿಕೆಟ್‌ ಲಭಿಸಲಿಲ್ಲ.

ಆಫ್ರಿಕಾ 35ಕ್ಕೆ 1:

ಭಾರತವನ್ನು ಆಲೌಟ್ ಮಾಡಿ ಬ್ಯಾಟಿಂಗ್ ಶುರು ಮಾಡಿರುವ ಆಫ್ರಿಕಾ ಮೊಹಮದ್ ಶಮಿ (15ಕ್ಕೆ 1) ದಾಳಿಗೆ ಆರಂಭಿಕ ಆಘಾತ ಎದುರಿಸಿತು. ಅಂತಿಮವಾಗಿ ತಂಡ ಮೊದಲ ದಿನದಂತ್ಯಕ್ಕೆ 1 ವಿಕೆಟ್‌ಗೆ 35 ರನ್‌ಗಳಿಸಿದ್ದು, ಇನ್ನೂ 167 ರನ್ ಹಿನ್ನಡೆಯಲ್ಲಿದೆ. ನಾಯಕ ಡೇನ್ ಎಲ್ಗರ್ (11*) ಮತ್ತು ಕೀಗನ್ ಪೀಟರ್ಸನ್ (14*) ಕ್ರೀಸ್​ನಲ್ಲಿದ್ದಾರೆ. ದ್ವಿತೀಯ ದಿನದಾಟದಲ್ಲಿ ಭಾರತದ ಬೌಲರ್ ತಿರುಗಿ ಬಿದ್ದು, ಆತಿಥೇಯರನ್ನೂ ಸಣ್ಣ ಮೊತ್ತಕ್ಕೆ ನಿಯಂತ್ರಿಸಬೇಕಾದ ಅಗತ್ಯವಿದೆ. ಆಗಷ್ಟೇ ಟೀಮ್‌ ಇಂಡಿಯಾಕ್ಕೆ ಮೇಲುಗೈ ಅವಕಾಶ ಒದಗಿ ಬರಲಿದೆ.