ಕ್ರಿಕೆಟ್ (Cricket) ಜಗತ್ತಿನಲ್ಲಿ ಅಚ್ಚರಿ ಎಂಬಂತೆ ಗುರುವಾರ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಭಾರತ ಟಿ-20 ಕ್ರಿಕೆಟ್ನಿಂದ ಟಿ-20 ವಿಶ್ವಕಪ್ (ICC T20 World Cup 2021) ಬಳಿಕ ನಾಯಕತ್ವ ತ್ಯಜಿಸುವುದಾಗಿ ಘೋಷಣೆ ಮಾಡಿದರು. ನಾಯಕತ್ವ ಬಿಟ್ಟುಕೊಟ್ಟು ಬ್ಯಾಟ್ಸ್ಮನ್ ಆಗಿ ಮುಂದುವರೆಯುವುದಾಗಿ ಹೇಳಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ (Team India) ನಾಯಕನಾಗಿ ನನ್ನ ಪಯಣದಲ್ಲಿ ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದು ಕೊಹ್ಲಿ ಹೇಳಿದರು. ಕೊಹ್ಲಿ ಟಿ-20 ನಾಯಕತ್ವದಿಂದ ಕೆಳಗಿಳಿಯುವ ಸುದ್ದಿ ಹೊರಬಿದ್ದ ಬಿನ್ನಲ್ಲೇ ಚುಟುಕು ಕ್ರಿಕೆಟ್ಗೆ ಟೀಮ್ ಇಂಡಿಯಾದ ಮುಂದಿನ ನಾಯಕ ಯಾರು? (Captain), ಉಪ ನಾಯಕ ಯಾರು (Vice Captain) ಎಂಬ ಪ್ರಶ್ನೆ ಎದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಂತು ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದೆ.
ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಕೊಹ್ಲಿಯ ನಂತರ ಭಾರತ ಟಿ-20 ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಲಿದ್ದಾರೆ. ಸದ್ಯ ವೈಟ್ ಬಾಲ್ ಕ್ರಿಕೆಟ್ನ ಉಪ ನಾಯಕನಾಗಿರುವ ಹಿಟ್ಮ್ಯಾನ್ ನಾಯಕತ್ವದ ಜವಾಬ್ದಾರಿ ಹೊರಲಿದ್ದಾರೆ. ಬಿಸಿಸಿಐ ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಲಿದೆ.
?? ❤️ pic.twitter.com/Ds7okjhj9J
— Virat Kohli (@imVkohli) September 16, 2021
ರೋಹಿತ್ ನಾಯಕನಾದರೆ ಉಪ ನಾಯಕನ ಪಟ್ಟ ಯಾರಿಗೆ ಎಂಬೂದು ಕುತೂಹಲ. ಮೂಲಗಳ ಪ್ರಕಾರ ಭಾರತ ಟಿ-20 ತಂಡದ ಉಪ ನಾಯಕನ ಸ್ಥಾನಕ್ಕೆ ಮೂವರು ಸ್ಟಾರ್ ಆಟಗಾರರ ಹೆಸರನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆಯಂತೆ.
ಕೆ. ಎಲ್ ರಾಹುಲ್: ರಾಹುಲ್ಗೆ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವವಿದೆ. ಅಲ್ಲದೆ ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಒಂದು ಟಿ-20 ಪಂದ್ಯದಲ್ಲಿ ಇವರು ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ್ದರು. ಈ ಸಂದರ್ಭ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿದ್ದರೆ, ರೋಹಿತ್ ಶರ್ಮಾ ಇಂಜುರಿಗೆ ತುತ್ತಾಗಿದ್ದರು. ಅಲ್ಲದೆ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕ್ಯಾಪ್ಟನ್ ಆಗಿದ್ದಾರೆ.
ರಾಹುಲ್ ಪರ ಸುನಿಲ್ ಗವಾಸ್ಕರ್ ಕೂಡ ಮಾತನಾಡಿದ್ದು, ಭಾರತೀಯ ಕ್ರಿಕೆಟ್ ತಂಡದ ಭವಿಷ್ಯದ ನಾಯಕನನ್ನಾಗಿ ರೂಪುಗೊಳಿಸಲು ಬಿಸಿಸಿಐ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಉಪನಾಯಕನಾಗಿ ಕೆಎಲ್ ರಾಹುಲ್‌ರನ್ನು ನೇಮಿಸಬೇಕು. ಈ ಮೂಲಕ ಭವಿಷ್ಯದ ನಾಯಕನನ್ನಾಗಿ ಬೆಳೆಸಬೇಕಿದೆ ಎಂದು ಸುನಿಲ್ ಗವಾಸ್ಕರ್ ಸಲಹೆಯನ್ನು ನೀಡಿದ್ದಾರೆ.
ರಿಷಭ್ ಪಂತ್: ಪಂತ್ಗೆ ಕೂಡ ನಾಯಕತ್ವದ ಜವಾಬ್ದಾರಿಯ ಅರಿವಿದೆ. ದೇಶೀಯ ಕ್ರಿಕೆಟ್ನಲ್ಲಿ ಡೆಲ್ಲಿ ತಂಡವನ್ನು ಮುನ್ನಡೆಸಿದರೆ, ಈ ಬಾರಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇವರ ನಾಯಕತ್ವದಡಿಯಲ್ಲಿ ಅಮೋಘ ಪ್ರದರ್ಶನ ನೀಡಿ ಪಾಯಿಂಟ್ ಟೇಬಲ್ನಲ್ಲಿ ಮೊದಲ ಸ್ಥಾನದಲ್ಲಿದೆ. ಉಪ ನಾಯಕನ ಪಟ್ಟಕ್ಕೆ ಇವರು ಮೊದಲ ಆಯ್ಕೆ ಎನ್ನಲಾಗಿದೆ.
ಜಸ್ಪ್ರೀತ್ ಬುಮ್ರಾ: ಬುಮ್ರಾ ಅವರಿಗೆ ನಾಯಕನಾಗಿ ಯಾವುದೇ ಮಾದರಿಯಲ್ಲೂ ಅನುಭವವಿಲ್ಲ. ಆದರೆ, ಭಾರತ ಮತ್ತು ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಅಲ್ಲದೆ ಲೀಡರ್ಶಿಪ್ ಗ್ರೂಪ್ನಲ್ಲಿ ಇವರು ಕೆಲಸ ಮಾಡಿದ್ದಾರೆ. ಹೀಗಾಗಿ ಇವರ ಹೆಸರು ಕೂಡ ಉಪ ನಾಯಕನ ರೇಸ್ನಲ್ಲಿ ಕಾಣಿಸಿಕೊಂಡಿದೆ.
ಐಸಿಸಿ ಟಿ-20 ವಿಶ್ವಕಪ್ ನಂತರ 20 ಓವರ್ಗಳ ತಂಡದ ನಾಯಕತ್ವ ತೊರೆಯುವುದಾಗಿ ನಾಯಕ ವಿರಾಟ್ ಕೊಹ್ಲಿ ಗುರುವಾರ ತಮ್ಮ ಇನ್ಸ್ಟಾಗ್ರಾಮ್, ಟ್ವಿಟ್ಟರ್ ಮತ್ತು ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದರು.
ಈ ಬಗ್ಗೆ ಸುದೀರ್ಘವಾದ ಪತ್ರ ಬರೆದಿರುವ ಕೊಹ್ಲಿ, ಟಿ-20 ನಾಯಕತ್ವವನ್ನು ತೊರೆದು ಬೇರೆಯವರಿಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೆ ಅಕ್ಟೋಬರ್- ನವೆಂಬರ್ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ನಂತರ ಏಕದಿನ ಹಾಗೂ ಟಿ-20 ಪಂದ್ಯಗಳಿಗೆ ಟೀಮ್ ಇಂಡಿಯಾ ನಾಯಕತ್ವವನ್ನು ಕೊಹ್ಲಿ ತೊರೆಯಲಿದ್ದಾರೆ ಎಂಬ ವರದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಸದ್ಯ ಕೊಹ್ಲಿ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
Virat Kohli: ವಿರಾಟ್ ಕೊಹ್ಲಿ ಟಿ-20 ನಾಯಕತ್ವಕ್ಕೆ ವಿದಾಯ ಹೇಳಿದ ಬೆನ್ನಲ್ಲೇ ಸೌರವ್ ಗಂಗೂಲಿ ಏನಂದ್ರು?
(KL Rahul Rishabh Pant and Jasprit Bumrah are in the race to become India T20I Vice Captain)