
ಢಾಕಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಬಾಂಗ್ಲಾದೇಶ್ ತಂಡವು 1 ರನ್ಗಳಿಂದ ರೋಚಕ ಜಯ ಸಾಧಿಸಿದೆ. ಭಾರತದ ಈ ಸೋಲಿಗೆ ಮುಖ್ಯ ಕಾರಣ ಕಳಪೆ ಫೀಲ್ಡಿಂಗ್ ಎಂದರೆ ತಪ್ಪಾಗಲಾರದು. ಒಂದೆಡೆ ವಿರಾಟ್ ಕೊಹ್ಲಿ ಅತ್ಯಾದ್ಭುತ ಕ್ಯಾಚ್ ಹಿಡಿದು ಮಿಂಚಿದರೆ, ಅಂತಹದ್ದೇ ಫೀಲ್ಡಿಂಗ್ ಪ್ರದರ್ಶನ ಉಳಿದ ಆಟಗಾರರಿಂದ ಮೂಡಿಬಂದಿರಲಿಲ್ಲ. ಮೊದಲ ಕಡಿಮೆ ಮೊತ್ತ ದಾಖಲಿಸಿದ್ದ ಟೀಮ್ ಇಂಡಿಯಾ ಅತ್ಯುತ್ತಮ ಕ್ಷೇತ್ರರಕ್ಷಣೆಯ ಮೂಲಕ ಬಾಂಗ್ಲಾ ತಂಡವನ್ನು ಕಟ್ಟಿಹಾಕುವಲ್ಲಿ ಎಡವಿತು ಎಂದರೆ ತಪ್ಪಾಗಲಾರದು.
ಏಕೆಂದರೆ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳು ವಿಫಲರಾದರು. ರೋಹಿತ್ ಶರ್ಮಾ (27), ಶಿಖರ್ ಧವನ್ (7), ವಿರಾಟ್ ಕೊಹ್ಲಿ (9) ಬೇಗನೆ ನಿರ್ಗಮಿಸಿದರೆ, ಆ ಬಳಿಕ ಬಂದ ಶ್ರೇಯಸ್ ಅಯ್ಯರ್ 24 ರನ್ಗಳಿಸಲಷ್ಟೇ ಶಕ್ತರಾದರು.
ಇದಾಗ್ಯೂ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೆಎಲ್ ರಾಹುಲ್ ಸ್ಮರಣೀಯ ಇನಿಂಗ್ಸ್ ಆಡಿದರು. ಬಾಂಗ್ಲಾದೇಶ್ ಬೌಲರ್ಗಳ ಬೆಂಡೆತ್ತಿದ ಕೆಎಲ್ಆರ್ 4 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳನ್ನು ಬಾರಿಸಿದರು. ಈ ಮೂಲಕ 70 ಎಸೆತಗಳಲ್ಲಿ 73 ರನ್ ಚಚ್ಚಿದರು.
ಕೆಎಲ್ ರಾಹುಲ್ ಅವರ ಈ ಆಕರ್ಷಕ ಅರ್ಧಶತಕದ ನೆರವಿನಿಂದಾಗಿ ಟೀಮ್ ಇಂಡಿಯಾ ಮೊತ್ತ 150 ರ ಗಡಿದಾಟುವಂತಾಯಿತು. ಒಂದಾರ್ಥದಲ್ಲಿ ಬಾಂಗ್ಲಾ ಬೌಲರ್ಗಳ ಮುಂದೆ ಉತ್ತಮ ಪ್ರದರ್ಶನ ನೀಡುವ ಮೂಲಕ ರಾಹುಲ್ ಟೀಮ್ ಇಂಡಿಯಾದ ಮಾನ ಕಾಪಾಡಿದರು. ಇದಾಗ್ಯೂ 41.2 ಓವರ್ಗಳಲ್ಲಿ ಟೀಮ್ ಇಂಡಿಯಾ 186 ರನ್ಗಳಿಸಿ ಆಲೌಟ್ ಆಯಿತು.
187 ರನ್ಗಳ ಗುರಿ ಪಡೆದ ಬಾಂಗ್ಲಾದೇಶ್ ತಂಡಕ್ಕೂ ಉತ್ತಮ ಆರಂಭ ದಕ್ಕಿರಲಿಲ್ಲ. ಮೊದಲ ಓವರ್ನ ಮೊದಲ ಎಸೆತದಲ್ಲೇ ನಜ್ಮುಲ್ (0) ವಿಕೆಟ್ ಪಡೆಯುವ ಮೂಲಕ ದೀಪಕ್ ಚಹರ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಅನಾಮುಲ್ ಹಕ್ (14) ಕೂಡ ಸಿರಾಜ್ ಎಸೆತದಲ್ಲಿ ಔಟಾದರು.
ಈ ಹಂತದಲ್ಲಿ ಜೊತೆಗೂಡಿದ ಲಿಟನ್ ದಾಸ್ ಹಾಗೂ ಶಕೀಬ್ ಅಲ್ ಹಸನ್ ಅತ್ಯುತ್ತಮ ಜೊತೆಯಾಟವಾಡಿದರು. 3ನೇ ವಿಕೆಟ್ಗೆ 48 ರನ್ಗಳ ಜೊತೆಯಾಟವಾಡುವ ಮೂಲಕ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಈ ವೇಳೆ 41 ರನ್ಗಳಿಸಿದ್ದ ಲಿಟನ್ ದಾಸ್ ವಾಷಿಂಗ್ಟನ್ ಸುಂದರ್ ಎಸೆತದಲ್ಲಿ ಕ್ಯಾಚ್ ನೀಡಿದರು. ಇದಾಗ್ಯೂ ಮತ್ತೊಂದೆಡೆ ಶಕೀಬ್ ಅಲ್ ಹಸನ್ ಅಪಾಯಕಾರಿಯಾಗುವ ಸೂಚನೆ ನೀಡಿದ್ದರು.
ವಾಷಿಂಗ್ಟನ್ ಸುಂದರ್ ಎಸೆದ 24ನೇ ಓವರ್ನ 3ನೇ ಎಸೆತವನ್ನು ಶಕೀಬ್ ಡೀಪ್ ಕವರ್ನತ್ತ ಭರ್ಜರಿಯಾಗಿ ಬಾರಿಸಿದ್ದರು. ಚೆಂಡು ಗಾಳಿಯಲ್ಲಿ ಹಾರುತ್ತಿದ್ದಂತೆ ಇತ್ತ ಫ್ರಂಟ್ ಫೀಲ್ಡಿಂಗ್ನಲ್ಲಿದ್ದ ವಿರಾಟ್ ಕೊಹ್ಲಿ ಬಲಭಾಗದತ್ತ ಜಿಗಿದು ಅತ್ಯಾದ್ಭುತವಾಗಿ ಕ್ಯಾಚ್ ಹಿಡಿದರು.
ಈ ಯಶಸ್ಸಿನೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಉತ್ತಮ ದಾಳಿ ಸಂಘಟಿಸಿದರು. 10 ಓವರ್ಗಳಲ್ಲಿ ಕೇವಲ 32 ರನ್ ನೀಡಿ ಸಿರಾಜ್ 3 ವಿಕೆಟ್ ಕಬಳಿಸಿದರು. ಸಿರಾಜ್ಗೆ ಉತ್ತಮ ಸಾಥ್ ನೀಡಿದ ಕುಲ್ದೀಪ್ ಸೇನ್ ಕೂಡ 2 ವಿಕೆಟ್ ಪಡೆದರು. ಪರಿಣಾಮ ಬಾಂಗ್ಲಾದೇಶ್ ತಂಡವು 136 ರನ್ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.
ಇತ್ತ ಭಾರತದ ಗೆಲುವಿಗೆ ಒಂದು ವಿಕೆಟ್ನ ಅವಶ್ಯಕತೆಯಿದ್ದಾಗ ಮೆಹದಿ ಹಸನ್ ಮಿರಾಝ್ ಭರ್ಜರಿ ಹೊಡೆತಕ್ಕೆ ಮುಂದಾದರು. ಚೆಂಡು ವಿಕೆಟ್ ಹಿಂಬದಿಯಲ್ಲಿ ಆಕಾಶದತ್ತ ಚಿಮ್ಮಿತ್ತು. ಕ್ಯಾಚ್ ಹಿಡಿಯಲು ಹಿಮ್ಮುಖವಾಗಿ ಓಡಿದ ಕೆಎಲ್ ರಾಹುಲ್ ಸರಿಯಾಗಿ ಚೆಂಡನ್ನು ಗುರುತಿಸಿದರು. ಇನ್ನೇನು ಚೆಂಡು ಹಿಡಿದರು ಅನ್ನುಷ್ಟರಲ್ಲಿ ಕೆಎಲ್ ರಾಹುಲ್ ಅವರು ಕ್ಯಾಚ್ ಕೈಚೆಲ್ಲಿದರು.
ಈ ವೇಳೆ ಮೆಹದಿ ಹಸನ್ ಕಲೆಹಾಕಿದ್ದು ಕೇವಲ 15 ರನ್ ಮಾತ್ರ. ಹಾಗೆಯೇ ಬಾಂಗ್ಲಾದೇಶ್ ತಂಡದ ಸ್ಕೋರ್ 155/9. ಈ ವೇಳೆ ಆ ಕ್ಯಾಚ್ ಕೆಎಲ್ ರಾಹುಲ್ ಹಿಡಿದಿದ್ದರೆ ಟೀಮ್ ಇಂಡಿಯಾ 31 ರನ್ಗಳ ಭರ್ಜರಿ ಜಯ ಸಾಧಿಸುತ್ತಿತ್ತು.
ಆದರೆ ಸಿಕ್ಕ ಜೀವದಾನವನ್ನು ಬಳಸಿಕೊಂಡ ಮೆಹದಿ ಹಸನ್ ಕೊನೆಯ ವಿಕೆಟ್ನಲ್ಲಿ ಮುಸ್ತಫಿಜುರ್ ರೆಹಮಾನ್ (10) ಜೊತೆಗೂಡಿ ಕೊನೆಯ ವಿಕೆಟ್ನಲ್ಲಿ ಅರ್ಧಶತಕದ ಜೊತೆಯಾಟವಾಡಿದರು. ಅಲ್ಲದೆ 38 ರನ್ ಬಾರಿಸುವ ಮೂಲಕ ಮೆಹದಿ ಬಾಂಗ್ಲಾ ತಂಡಕ್ಕೆ 1 ರನ್ಗಳ ರೋಚಕ ಜಯ ತಂದುಕೊಟ್ಟರು.
ಒಂದೆಡೆ ಮೊದಲ ಇನಿಂಗ್ಸ್ನಲ್ಲಿ ಬ್ಯಾಟಿಂಗ್ನಲ್ಲಿ ಆಕರ್ಷಕ 73 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಪಾಲಿಗೆ ಹೀರೋ ಆಗಿದ್ದ ಕೆಎಲ್ ರಾಹುಲ್, 2ನೇ ಇನಿಂಗ್ಸ್ ವೇಳೆ ಕ್ಯಾಚ್ ಕೈಚೆಲ್ಲುವ ಮೂಲಕ ವಿಲನ್ ಆದರು. ಈ ಸೋಲಿನ ಹೊರತಾಗಿಯೂ 2 ಎರಡು ಪಂದ್ಯಗಳಿದ್ದು, ಈ ಪಂದ್ಯಗಳಲ್ಲಿ ಜಯ ಸಾಧಿಸುವ ಮೂಲಕ ಸರಣಿ ವಶಪಡಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾ ಮುಂದಿದೆ.