ಐಪಿಎಲ್ನಲ್ಲಿಂದು ಮಹತ್ವದ ಪಂದ್ಯ ನಡೆಯಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ (KKR vs RR) ತಂಡವನ್ನು ಎದುರಿಸಲಿದೆ. ಸತತ ಐದು ಸೋಲುಗಳಿಂದ ಕಂಗೆಟ್ಟಿರುವ ಕೆಕೆಆರ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆದ್ದರಷ್ಟೆ ಉಳಿಗಾಲ ಎನ್ನಬಹುದು. ಆಡಿರುವ ಒಂಬತ್ತು ಪಂದ್ಯಗಳ ಪೈಕಿ ಕೇವಲ ಮೂರರಲ್ಲಿ ಗೆಲುವು ಆರರಲ್ಲಿ ಸೋಲು ಕಂಡು ಕೋಲ್ಕತ್ತಾ ಪಾಯಿಂಟ್ ಟೇಬಲ್ನಲ್ಲಿ (Point Table) ಎಂಟನೇ ಸ್ಥಾನದಲ್ಲಿದೆ. ಇತ್ತ ಆರ್ ಆರ್ ತಂಡ ಇದಕ್ಕೆ ವಿರುದ್ಧವಾಗಿದ್ದು ಆರರಲ್ಲಿ ಗೆಲುವು ಮೂರರಲ್ಲಿ ಸೋತು ಮೂರನೇ ಸ್ಥಾನದಲ್ಲಿದೆ. ರಾಜಸ್ಥಾನ್ ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಪ್ಲೇ ಆಫ್ಗೆ ಇನ್ನಷ್ಟು ಹತ್ತಿರವಾಗುವ ಯೋಜನೆಯಲ್ಲಿದ್ದರೆ ಇತ್ತ ಕೆಕೆಆರ್ ತಂಡದಲ್ಲಿ ಕೆಲ ಬದಲಾವಣೆ ಮಾಡಿ ಗೆಲುವಿನ ಲಯಕ್ಕೆ ಮರಳಲು ಕಾತುರದಲ್ಲಿದೆ.
ಕೆಕೆಆರ್ ಸತತವಾಗಿ ಸೋಲುಂಡು ಈಗ ಗೆಲುವಿನ ಹುಡುಕಾಟದಲ್ಲಿದೆ. ಆರಂಭದಲ್ಲಿ ಇದ್ದ ಉತ್ಸಾಹ, ಬ್ಯಾಟಿಗರಲ್ಲಿ ಫಾರ್ಮ್ ಈಗ ಕಾಣುತ್ತಿಲ್ಲ. ಇದರಿಂದಾಗಿಯೇ ತಂಡ ಸೋಲು ಕಾಣುತ್ತಿದೆ. ಐಪಿಎಲ್ ಅರ್ಧ ಮುಗಿದರೂ ಕೆಕೆಆರ್‌ನ ಸ್ಟಾರ್ ಆಟಗಾರರೆಲ್ಲ ಇನ್ನೂ ಫಾರ್ಮ್ ಕಂಡುಕೊಳ್ಳದಿರುವುದು ಪ್ರಮುಖ ಹಿನ್ನಡೆ. ನಾಯಕ ಶ್ರೇಯಸ್ ಅಯ್ಯರ್ (290 ರನ್), ನಿತೀಶ್ ರಾಣಾ; ಬೌಲಿಂಗ್‌ನಲ್ಲಿ ಉಮೇಶ್ ಯಾದವ್ ಹೊರತುಪಡಿಸಿ ಉಳಿದವರೆಲ್ಲರದೂ ಶೋಚನೀಯ ವೈಫಲ್ಯ. ವೆಂಕಟೇಶ್ ಅಯ್ಯರ್, ವರುಣ್ ಚಕ್ರವರ್ತಿ, ಸುನಿಲ್ ನರೈನ್, ಆ್ಯರೋನ್ ಫಿಂಚ್, ಪ್ಯಾಟ್ ಕಮಿನ್ಸ್, ಆಂಡ್ರೆ ರಸೆಲ್, ಸ್ಯಾಮ್ ಬಿಲ್ಲಿಂಗ್ಸ್ ಎಲ್ಲರೂ ಟಿ20 ಸ್ಪೆಷಲಿಸ್ಟ್‌ಗಳೇ. ಆದರೆ ಯಾರೂ ತಂಡದ ನೆರವಿಗೆ ನಿಲ್ಲುತ್ತಿಲ್ಲ.
MS Dhoni: ಪಂದ್ಯ ಮುಗಿದ ಬಳಿಕ ದೀರ್ಘ ಸಮಯ ಮಾತಾಡಿದ ಎಂಎಸ್ ಧೋನಿ: ಏನು ಹೇಳಿದ್ರು ಕೇಳಿ
ರಾಜಸ್ಥಾನವೂ ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಸೋಲು ಅನುಭವಿಸಿದ್ದು, ಮತ್ತೆ ಗೆಲುವು ಕಂಡುಕೊಳ್ಳುವ ವಿಶ್ವಾಸದಲ್ಲಿದೆ. ಜೋಸ್ ಬಟ್ಲರ್ ಮೇಲೆ ರಾಜಸ್ಥಾನ್ ಬ್ಯಾಟಿಂಗ್ ಅವಲಂಬಿತವಾಗಿದೆ. ಯುಜ್ವೇಂದ್ರ ಚಹಲ್, ಆರ್.ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ರಸಿದ್ಧ್ ಕೃಷ್ಣ ಒಳಗೊಂಡ ಬೌಲಿಂಗ್ ಪಡೆಗೆ ಬ್ಯಾಟರ್‌ಗಳಿಂದ ಮತ್ತಷ್ಟು ಬೆಂಬಲ ಅಗತ್ಯವಿದೆ. ಸೋಲಿನ ಹೊರತಾಗಿಯೂ ಬಹುತೇಕ ಹಿಂದಿನ ಪಂದ್ಯದಲ್ಲಿ ಆಡಿದ ತಂಡವೇ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಇನ್ನು ವಾಂಖೆಡೆ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ಸ್ವರ್ಗ ಎನಿಸಿಕೊಂಡಿದೆ. ಕೆಕೆಆರ್ ಹಾಗೂ ಆರ್‌ಆರ್ ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿರುವ ಕಾರಣ ದೊಡ್ಡ ಮೊತ್ತವನ್ನು ಇಲ್ಲಿ ನಿರೀಕ್ಷಿಸಲಾಗುತ್ತಿದೆ. ಇನ್ನಿಂಗ್ಸ್‌ನ ಆರಂಭದಲ್ಲಿ ವೇಗಿಗಳಿಗೆ ಸ್ವಲ್ಪ ನೆರವು ಸಿಗಬಹುದು. ಇನ್ನು ಇಬ್ಬನಿ ಈ ಪಂದ್ಯದಲ್ಲಿಯೂ ಹೆಚ್ಚಿನ ಪರಿಣಾಮವನ್ನು ಬೀರಬಹುದು.
ಸಂಭಾವ್ಯ ಪ್ಲೇಯಿಂಗ್ XI:
ಕೆಕೆಆರ್: ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್, ರಿಂಕು ಸಿಂಗ್, ಆಂಡ್ರೆ ರಸೆಲ್, ಟಿಮ್ ಸೌಥಿ, ಶಿವ್ ಮಾವಿ, ಅನುಕುಲ್ ರಾಯ್.
ರಾಜಸ್ಥಾನ್ ರಾಯಲ್ಸ್: ಸಂಜು ಸ್ಯಾಮ್ಸನ್ (ನಾಯಕ), ದೇವದತ್ ಪಡಿಕ್ಕಲ್, ಜೋಸ್ ಬಟ್ಲರ್, ಶಿಮ್ರೋನ್ ಹೆಟ್ಮೆಯರ್, ರಿಯಾನ್ ಪರಾಗ್, ಕರುಣ್ ನಾಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಓಬೇದ್ ಮೆಕಾಯ್, ಯುಜ್ವೇಂದ್ರ ಚಾಹಲ್, ಪ್ರಸಿದ್ದ್ ಕೃಷ್ಣ.
ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ