Ruturaj Gaikwad: ಐಪಿಎಲ್​ನಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ರುತುರಾಜ್ ಗಾಯಕ್ವಾಡ್

SRH vs CSK, IPL 2022: ಸನ್​ರೈಸರ್ಸ್​ ವಿರುದ್ಧದ ಪಂದ್ಯದಲ್ಲಿ ಸಿಎಸ್​​ಕೆ ಪರ ಮಿಂಚಿದ್ದು ರುತುರಾಜ್ ಗಾಯಕ್ವಾಡ್. ಕೇವಲ 57 ಎಸೆತಗಳಲ್ಲಿ ತಲಾ 6 ಬೌಂಡರಿ-ಸಿಕ್ಸರ್​​ನೊಂದಿಗೆ 99 ರನ್ ಗಳಿಸಿ ಶತಕ ವಂಚಿತರಾಗಿ ನಿರ್ಗಮಿಸಿದರು. ಇದರ ನಡುವೆ ಐಪಿಎಲ್​ನಲ್ಲಿ ಗಾಯಕ್ವಾಡ್ ಅವರು ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿ ವಿಶೇಷ ಸಾಧನೆ ಮಾಡಿದರು.

Ruturaj Gaikwad: ಐಪಿಎಲ್​ನಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ರುತುರಾಜ್ ಗಾಯಕ್ವಾಡ್
Ruturaj gaikwad SRH vs CSK IPL 2022
Follow us
| Updated By: Vinay Bhat

Updated on:May 02, 2022 | 2:07 PM

ಐಪಿಎಲ್ 2022 (IPL 2022) ಇದೀಗ ರೋಚಕ ಘಟ್ಟದತ್ತ ತಲುಪುತ್ತಿದೆ. ಭಾನುವಾರ ನಡೆದ 46ನೇ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಪುನಃ ಗೆಲುವಿನ ಹಳಿಗೆ ಮರಳಿದೆ. ಸನ್​​ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಸಿಎಸ್​​ಕೆ (SRH vs CSK) ಭರ್ಜರಿ ಬ್ಯಾಟಿಂಗ್ ನಡೆಸಿ 200 ರನ್​​ಗಳ ಗಡಿ ದಾಟಿದರೆ ಕೇನ್ ಪಡೆ ಈ ದೊಡ್ಡ ಮೊತ್ತವನ್ನು ಬೆನ್ನಟ್ಟಲು ವಿಫಲವಾಯಿತು. ಚೆನ್ನೈ ಪರ ಮಿಂಚಿದ್ದು ರುತುರಾಜ್ ಗಾಯಕ್ವಾಡ್ (Ruturaj Gaikwad). ಕೇವಲ 57 ಎಸೆತಗಳಲ್ಲಿ ತಲಾ 6 ಬೌಂಡರಿ-ಸಿಕ್ಸರ್​​ನೊಂದಿಗೆ 99 ರನ್ ಗಳಿಸಿ ಶತಕ ವಂಚಿತರಾಗಿ ನಿರ್ಗಮಿಸಿದರು. ಇದರ ನಡುವೆ ಐಪಿಎಲ್​ನಲ್ಲಿ ಗಾಯಕ್ವಾಡ್ ಅವರು ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿ ವಿಶೇಷ ಸಾಧನೆ ಮಾಡಿದರು. ಗಾಯಕ್ವಾಡ್ ಐಪಿಎಲ್​ನಲ್ಲಿ ಕೇವಲ 31 ಇನ್ನಿಂಗ್ಸ್​ನಲ್ಲಿ 1,000 ರನ್ ಗಳಿಸುವ ಮೂಲಕ ಅತಿ ವೇಗವಾಗಿ ಈ ಸಾಧನೆ ಮಾಡಿದ್ದಾರೆ. ಸಚಿನ್ ಕೂಡ ತಮ್ಮ 31ನೇ ಇನ್ನಿಂಗ್ಸ್​ನಲ್ಲಿ ಒಂದು ಸಾವಿರ ರನ್ ಗಳಿಸಿದ್ದರು.

ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ಐಪಿಎಲ್ ಇತಿಹಾಸದಲ್ಲಿ ಹಿಂದೆದೂ ಕಾಣದ ಆರಂಭಿಕ ಜೊತೆಯಾಟವನ್ನ ಕಂಡಿತು. ರುತುರಾಜ್ ಗಾಯಕ್ವಾಡ್ ಮತ್ತು ಡೆವೊನ್ ಕಾನ್ವೆ ಅಬ್ಬರದ ಆಟಕ್ಕೆ ಸನ್‌ರೈಸರ್ಸ್‌ನ ಬಲಿಷ್ಠ ಬೌಲಿಂಗ್ ತಬ್ಬಿಬ್ಬಾಯಿತು. ಆರಂಭಿಕ ವಿಕೆಟ್‌ಗೆ 182ರನ್‌ಗಳ ಅಮೋಘ ಜೊತೆಯಾಟವಾಡಿದ ಈ ಜೋಡಿ ಸಿಎಸ್‌ಕೆ ಪರ ಸಾರ್ವಕಾಲಿಕ ಶ್ರೇಷ್ಠ ಆರಂಭಿಕ ಜೊತೆಯಾಟವಾಡಿತು. ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ರನ್‌ಗಳಿಸಲು ಪರದಾಡಿದ ರುತುರಾಜ್ ಗಾಯಕ್ವಾಡ್ 57 ಎಸೆತಗಳಲ್ಲಿ 99 ರನ್ ಸಿಡಿಸುವ ಮೂಲಕ ಕೇವಲ ಒಂದು ರನ್‌ಗಳಲ್ಲಿ ಶತಕವಂಚಿತರಾದರು.

IPL Records: ಐಪಿಎಲ್​ನಲ್ಲಿ 99 ರನ್​ಗೆ ಔಟಾದ 5 ಬ್ಯಾಟರ್​ಗಳು ಇವರೇ..!

ಇನ್ನು ಗಾಯಕ್ವಾಡ್‌ಗೆ ಉತ್ತಮ ಸಾಥ್ ಕೊಟ್ಟ ಡಿವೊನ್ ಕಾನ್ವೆ 55 ಎಸೆತಗಳಲ್ಲಿ ಅಜೇಯ 85 ರನ್ ಕಲೆಹಾಕುವ ಮೂಲಕ ತನ್ನ ಕಂಬ್ಯಾಕ್ ಮ್ಯಾಚ್‌ನಲ್ಲೇ ಮಿಂಚಿದರು. 8 ಬೌಂಡರಿ ಮತ್ತು 4 ಸಿಕ್ಸರ್‌ಗಳ ಮೂಲಕ ಅಬ್ಬರದ ಆಟವಾಡಿದರು. ಮೂರನೇ ಕ್ರಮಾಂಕದಲ್ಲಿ ಬಂದ ನಾಯಕ ಎಂಎಸ್ ಧೋನಿ 8 ರನ್‌ ಸಿಡಿಸಿ ನಟರಾಜನ್ ಬೌಲಿಂಗ್‌ನಲ್ಲೇ ವಿಕೆಟ್ ಒಪ್ಪಿಸಿದರು. ರವೀಂದ್ರ ಜಡೇಜಾ ಅಜೇಯ ಒಂದು ರನ್ ಸಿಡಿಸಿದರು. ಸೂಪರ್ ಕಿಂಗ್ಸ್ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 202 ರನ್ ಬಾರಿಸಿತು.

ಕಠಿಣ ಟಾರ್ಗೆಟ್ ಬೆನ್ನಟ್ಟಿದ ಸನ್‌ರೈಸರ್ಸ್ ತಂಡಕ್ಕೆ ನಾಯಕ ಕೇನ್ ವಿಲಿಯಮ್ಸನ್ ಹಾಗೂ ಅಭಿಷೇಕ್ ಶರ್ಮಾ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 35 ಎಸೆತಗಳಲ್ಲಿ 58 ರನ್ ಪೇರಿಸಿದರು. 6ನೇ ಓವರ್‌ನಲ್ಲಿ ಚೆನ್ನೈ ವೇಗಿ ಮುಕೇಶ್ ಚೌಧರಿ ಡಬಲ್ ಆಘಾತ ನೀಡಿದರು. ಅಭಿಷೇಕ್ (39 ರನ್, 24 ಎಸೆತ) ಜೊತೆಗೆ ರಾಹುಲ್ ತ್ರಿಪಾಠಿ ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಏಡನ್ ಮಾರ್ಕರಮ್ (17) ಎರಡು ಸಿಕ್ಸರ್ ಸಿಡಿಸಿದರೂ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಇನ್ನೊಂದೆಡೆ ನಾಯಕನ ಆಟವಾಡಿದ ವಿಲಿಯಮ್ಸನ್ ತಂಡವನ್ನು ಮುನ್ನಡೆಸಿದರು. ಅವರಿಗೆ ನಿಕೋಲಸ್ ಪೂರನ್ ಅವರಿಂದ ಉತ್ತಮ ಬೆಂಬಲ ದೊರಕಿತು.

ಆದರೆ ಅರ್ಧಶತಕದ ಅಂಚಿನಲ್ಲಿ ವಿಲಿಯಮ್ಸನ್ ಎಡವಿದರು. 37 ಎಸೆತಗಳಲ್ಲಿ 47 ರನ್ (2 ಬೌಂಡರಿ, 2 ಸಿಕ್ಸರ್) ಗಳಿಸಿ ಔಟಾದರು. ಅಂತಿಮ 30 ಎಸೆತಗಳಲ್ಲಿ ಹೈದರಾಬಾದ್ ಗೆಲುವಿಗೆ 72 ರನ್ ಬೇಕಾಗಿತ್ತು. ಆದರೆ 29 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಪೂರನ್ ದಿಟ್ಟ ಹೋರಾಟ ನೀಡಿದರೂ ಧೋನಿ ನಾಯಕತ್ವದ ಮುಂದೆ ಹೈದರಾಬಾದ್​​ಗೆ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ. 20 ಓವರ್​ನಲ್ಲಿ ಆರು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಪೂರನ್ 33 ಬಾಲ್​ನಲ್ಲಿ 3 ಫೋರ್, 6 ಭರ್ಜರಿ ಸಿಕ್ಸರ್​​ನೊಂದಿಗೆ ಅಜೇಯ 64 ರನ್ ಗಳಿಸಿದರು. ಸಿಎಸ್​ಕೆ 13 ರನ್​ಗಳ ಜಯ ತನ್ನದಾಗಿಸಿತು.

ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:40 am, Mon, 2 May 22