MS Dhoni: ಪಂದ್ಯ ಮುಗಿದ ಬಳಿಕ ದೀರ್ಘ ಸಮಯ ಮಾತಾಡಿದ ಎಂಎಸ್ ಧೋನಿ: ಏನು ಹೇಳಿದ್ರು ಕೇಳಿ

SRH vs CSK, IPL 2022: ಧೋನಿಯ ಚುರುಕಿನ ನಾಯಕತ್ವ ಚೆನ್ನೈಗೆ ಗೆಲುವಿನ ಸಿಹಿ ನೀಡಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಸಿಎಸ್​ಕೆ ಕ್ಯಾಪ್ಟನ್ ಎಂಎಸ್ ಧೋನಿ (MS Dhoni) ವಿಶೇಷ ಮಾಹಿತಿ ಹಂಚಿಕೊಂಡಿದ್ದು, ಏನು ಹೇಳಿದರು ಎಂಬುದನ್ನು ನೋಡಿ.

MS Dhoni: ಪಂದ್ಯ ಮುಗಿದ ಬಳಿಕ ದೀರ್ಘ ಸಮಯ ಮಾತಾಡಿದ ಎಂಎಸ್ ಧೋನಿ: ಏನು ಹೇಳಿದ್ರು ಕೇಳಿ
ms dhoni post match presentation SRH vs CSK
Follow us
TV9 Web
| Updated By: Vinay Bhat

Updated on: May 02, 2022 | 9:02 AM

ರವೀಂದ್ರ ಜಡೇಜಾ (Ravindra Jadeja) ಅವರು ನಾಯಕತ್ವವನ್ನು ಎಂಎಸ್ ಧೋನಿ ಅವರಿಗೆ ಪುನಃ ನೀಡಿದ್ದು ಚೆನ್ನೈ ಸೂಪರ್ ಕಿಂಗ್ಸ್​ ಅದೃಷ್ಟ ಬದಲಾದಂತಿದೆ. ಭಾನುವಾರ ಬಲಿಷ್ಠ ಸನ್​ರೈಸರ್ಸ್​ ಹೈದರಾಬಾದ್ (SRH vs CSK) ವಿರುದ್ಧ 13 ರನ್​ಗಳ ರೋಚಕ ಜಯ ಸಾಧಿಸುವ ಮೂಲಕ ಸಿಎಸ್​​ಕೆ ಗೆಲುವಿನ ಲಯಕ್ಕೆ ಮರಳಿದೆ. ಆರಂಭಿಕ ರುತುರಾಜ್ ಗಾಯಕ್ವಾಡ್ ಶತಕವಂಚಿತ ಬ್ಯಾಟಿಂಗ್ ಹಾಗೂ ಡೆವೊನ್ ಕಾನ್‌ವೇ ನೀಡಿದ ಸಮರ್ಥ ಬೆಂಬಲದಿಂದ ಚೆನ್ನೈ 20 ಓವರ್​​ಗೆ 2 ವಿಕೆಟ್‌ ನಷ್ಟಕ್ಕೆ 202 ರನ್ ಕಲೆಹಾಕಿತು. ಪ್ರತಿಯಾಗಿ ಮುಕೇಶ್ ಚೌಧರಿ ದಾಳಿಗೆ ನಲುಗಿದ ಸನ್‌ರೈಸರ್ಸ್‌ 6 ವಿಕೆಟ್‌ಗೆ 189 ರನ್‌ಗಳಿಸಲಷ್ಟೇ ಶಕ್ತವಾಯಿತು. ನಿಕೋಲಸ್ ಪೂರನ್ ಏಕಾಂಗಿ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಧೋನಿಯ ಚುರುಕಿನ ನಾಯಕತ್ವ ಚೆನ್ನೈಗೆ ಗೆಲುವಿನ ಸಿಹಿ ನೀಡಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಸಿಎಸ್​ಕೆ ಕ್ಯಾಪ್ಟನ್ ಎಂಎಸ್ ಧೋನಿ (MS Dhoni) ವಿಶೇಷ ಮಾಹಿತಿ ಹಂಚಿಕೊಂಡಿದ್ದು, ಏನು ಹೇಳಿದರು ಎಂಬುದನ್ನು ನೋಡಿ.

“ನಾವು ಈ ಸ್ಕೋರ್ ಮೂಲಕ ಗೆಲುವು ಸಾಧಿಸಬಹುದು ಎಂದು ನಂಬಿದ್ದೆವು. ಚೆಂಡು ಬ್ಯಾಟ್​ಗೆ ಚೆನ್ನಾಗಿ ಬರುತ್ತಿತ್ತು, ಇದರಿಂದ ಉತ್ತಮ ಆರಂಭ ಪಡೆದುಕೊಂಡೆವು. ಬೌಲರ್​ಗಳಿಗೆ ಕೂಡ ಈ ಪಿಚ್ ನೆರವಾಯಿತು. ಪ್ರಮುಖವಾಗಿ 6 ಓವರ್​ಗಳ ಬಳಿಕ ಸ್ಪಿನ್ನರ್​​ಗೆ ಬೌಲಿಂಗ್ ನೀಡಿದ್ದು ಚೆನ್ನಾಗಿ ಕೆಲಸ ಮಾಡಿತು. ನಾವಿಂದು ಕೆಲ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದೇವೆ. ನಾವುಕೂಡ ಕೆಲ ಓವರ್​ನಲ್ಲಿ 25-26 ರನ್​ಗಳನ್ನು ನೀಡಿದೆವು. 200 ರನ್ ಸ್ಕೋರ್ ಮಾಡಿದಾಗ ಸಾಮಾನ್ಯವಾಗಿ ಪಂದ್ಯದ 19ನೇ ಓವರ್​​ನಲ್ಲಿ 175-180 ರನ್​ಗೆ ಬಂದಿರುತ್ತದೆ. ಈ ಸಂದರ್ಭ ಬೌಲರ್​ಗಳು ಏನಾದರು ಹೊಸತನ ಪ್ರಯತ್ನ ಮಾಡುವುದು ಮುಖ್ಯ,” ಎಂದು ಹೇಳಿದ್ದಾರೆ.

Ruturaj Gaikwad: ಐಪಿಎಲ್​ನಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ರುತುರಾಜ್ ಗಾಯಕ್ವಾಡ್

“ನಾನು ನನ್ನ ಬೌಲರ್​ಗಳಿಗೆ ಯಾವಾಗಲು ಒಂದು ವಿಚಾರವನ್ನು ಹೇಳುತ್ತಿರುತ್ತೇನೆ. ಈರೀತಿಯ ಹೈ ಸ್ಕೋರ್ ಪಂದ್ಯದ ವೇಳೆ ನಿಮ್ಮ ಓವರ್​ನ 4 ಎಸೆತದಲ್ಲಿ ಸಿಕ್ಸ್ ಬರಬಹುದು, ಆದರೆ ಉಳಿದಿರುವ ಎರಡು ಎಸೆತವನ್ನು ನೀವು ಚೆನ್ನಾಗಿ ಮಾಡಬೇಕು. ಆ ಎರಡು ಎಸೆತ ಪಂದ್ಯದ ಗೆಲುವಿಗೆ ಕಾರಣವಾಗಬಹುದು. ಯಾಕೆಂದರೆ ಹೆಚ್ಚಿನ ಬೌಲರ್​ಗಳು ಒಂದು ಓವರ್​ನಲ್ಲಿ 3-4 ಸಿಕ್ಸ್ ಕೊಟ್ಟಾಗ ಕುಗ್ಗಿಹೋಗುತ್ತಾರೆ. ಒಂದು ಸಿಕ್ಸ್, ಒಂದು ಫೋರ್ ನೀಡುವ ಬದಲು ಎರಡು ಫೋರ್ ನೀಡಿದರೆ ಅದು ಪಂದ್ಯದ ಜಯಕ್ಕೆ ಸಹಕಾರಿ ಆಗುತ್ತದೆ. ಬೌಲರ್​ಗಳು ಇದನ್ನು ನಂಬುತ್ತಾರೊ ಗೊತ್ತಿಲ್ಲ. ಆದರೆ, ಈ ನೀತಿ ನಿಜಕ್ಕೂ ಕೆಲಸ ಮಾಡುತ್ತದೆ.”

“ಈ ವರ್ಷ ಸಿಎಸ್​ಕೆ ತಂಡದ ನಾಯಕನ ಜವಬ್ದಾರಿ ರವೀಂದ್ರ ಜಡೇಜಾ ಅವರಿಗೆ ಎಂದು ಕಳೆದ ಸೀಸನ್​ನಲ್ಲಿಯೇ ತೀರ್ಮಾನವಾಗಿತ್ತು. ಇದಕ್ಕಾಗಿ ಅವರು ಸಾಕಷ್ಟು ಸಮಯದಿಂದ ಸಜ್ಜಾಗುತ್ತಿದ್ದರು. ನನ್ನ ಆಶಯ ಕೂಡ ಅದೇ ಆಗಿತ್ತು. ಮೊದಲ ಎರಡು ಪಂದ್ಯಗಳಲ್ಲಿ ನಾವಿಬ್ಬರು ಮಾಹಿತಿ ಹಂಚಿಕೊಳ್ಳುತ್ತಿದ್ದೆವು. ನಂತರ ಬೌಲಿಂಗ್, ಫೀಲ್ಡಿಂಗ್ ಆಯ್ಕೆ ಎಲ್ಲವನ್ನು ಅವರಿಗೆ ಬಿಟ್ಟುಕೊಟ್ಟೆ. ಯಾಕೆಂದರೆ ನಾಯಕತ್ವ ಅವನು ಮಾಡಿದ, ನಾನು ಕೇವಲ ಟಾಸ್​ಗೆ ಹೋಗಲು ಮಾತ್ರ ಎಂಬ ಭಾವನೆ ಕೊನೆಯಲ್ಲಿ ಅವರಿಗೆ ಮೂಡಬಾರದು. ಮೈದಾನದಲ್ಲಿ ನಾಯಕ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮತ್ತು ಆ ನಿರ್ಧಾರಕ್ಕೆ ಆತನೇ ಜವಾಬ್ದಾರಿ ಆಗಿರಬೇಕು,” ಎಂಬುದು ಎಂಎಸ್​ಡಿ ಮಾತು.

ಇನ್ನು ಸೋತ ತಂಡದ ನಾಯಕ ಕೇನ್ ವಿಲಿಯಮ್ಸನ್ ಮಾತನಾಡಿ, “ಯಾವುದೇ ತಂಡ 200+ ರನ್ ಹೊಡೆದರೆ ಗುರಿ ಬೆನ್ನಟ್ಟುವ ತಂಡಕ್ಕೆ ಅದು ಸುಲಭವಲ್ಲ. ನಾವು ಸಾಕಷ್ಟು ಪ್ರಯತ್ನ ಪಟ್ಟೆವು. ಆದರೆ, ಪಿಚ್ ನಿಧಾನವಾಗಿತ್ತು. ವಾಷಿಂಗ್ಟನ್ ಸುಂದರ್ ಬೌಲಿಂಗ್ ಮಾಡಲು ಅಸಾಧ್ಯವಾಗಿದ್ದು ನಮಗೆ ದೊಡ್ಡ ಮೈನಸ್ ಪಾಯಿಂಟ್. ಆದರೂ ನಮ್ಮ ತಂಡ ಪಾಸಿಟಿವ್ ಆಗಿದೆ. ಇದರಿಂದ ಹಿಂದೆ ಸರಿಯುವುದಿಲ್ಲ. ಮೊದಲಾರ್ಧದಲ್ಲಿ ಚೆನ್ನಾಗಿ ಆಡಿದ್ದೇವೆ. ಮುಂದಿನ ಪಂದ್ಯದಲ್ಲಿ ಕಮ್​ಬ್ಯಾಕ್ ಮಾಡುತ್ತೇವೆ,” ಎಂದು ಹೇಳಿದ್ದಾರೆ.

ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ