2021 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಾಣಿಸಿಕೊಂಡಿದ್ದ ಶ್ರೀಕರ್ ಭರತ್ ಅವರು ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದಾರೆ. ಯಾವುದೇ ತಂಡ ಖರೀದಿಸದಿರುವ ಕಾರಣ ಇದೀಗ ಕೆಎಸ್ ಭರತ್ ವಿದೇಶಿ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿಯಲು ಮುಂದಾಗಿದ್ದಾರೆ.
ಇಂಗ್ಲೆಂಡ್‌ನ ಪ್ರತಿಷ್ಠಿತ ಸರ್ರೆ ಚಾಂಪಿಯನ್‌ಶಿಪ್‌ನಲ್ಲಿ ಡಲ್ವಿಚ್ ಕ್ರಿಕೆಟ್ ಕ್ಲಬ್ ಪರ ಆಡಲು ಕೆಎಸ್ ಭರತ್ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಏಪ್ರಿಲ್ನಲ್ಲಿ ನಡೆಯಲಿರುವ ಈ ಟೂರ್ನಿಗಾಗಿ ಅವರು ತೆರಳಲಿದ್ದಾರೆ.
ಸರ್ರೆ ಚಾಂಪಿಯನ್‌ಶಿಪ್ ಎಂಬುದು ಸ್ಪರ್ಧಾತ್ಮಕ ಕ್ರಿಕೆಟ್. ಇಲ್ಲಿನ ಕ್ರಿಕೆಟ್ ಮೈದಾನಗಳ ಪರಿಸ್ಥಿತಿಗಳು ಭಾರತೀಯ ಪಿಚ್‌ಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿವೆ. ಅಂತಹ ಪರಿಸ್ಥಿತಿಯಲ್ಲಿ, ಭರತ್ ತನ್ನ ತಂತ್ರವನ್ನು ಬದಲಾಯಿಸಲು ಮತ್ತು ಹೊಸ ಅನುಭವಗಳನ್ನು ಪಡೆಯಲು ಅವಕಾಶವನ್ನು ಪಡೆಯಲಿದ್ದಾರೆ. ಈ ಮೂಲಕ ಮತ್ತೊಮ್ಮೆ ಟೀಮ್ ಇಂಡಿಯಾದ ಕದ ತಟ್ಟುವ ಇರಾದೆಯಲ್ಲಿದ್ದಾರೆ.
ಏಕೆಂದರೆ ಐಪಿಎಲ್ ಬಳಿಕ ಭಾರತ ತಂಡವು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಡಲಿದೆ. ಅದಕ್ಕೂ ಮುನ್ನ ಸರ್ರೆ ಚಾಂಪಿಯನ್‌ಶಿಪ್‌ನಲ್ಲಿ ಮಿಂಚುವ ಮೂಲಕ ಆಯ್ಕೆಗಾರರ ಗಮನ ಸೆಳೆಯುವ ಇರಾದೆಯಲ್ಲಿದ್ದಾರೆ.
ಈ ಮೂಲಕ ಮತ್ತೆ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ. ಇದಕ್ಕೂ ಮುನ್ನ ಅವರು ಟೀಮ್ ಇಂಡಿಯಾ ಪರ 7 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಈ ವೇಳೆ 12 ಇನಿಂಗ್ಸ್ ಆಡಿದ್ದ ಭರತ್ ಕಲೆಹಾಕಿದ್ದು ಕೇವಲ 221 ರನ್ಗಳು ಮಾತ್ರ. ಹೀಗಾಗಿ ಅವರನ್ನು ಕೈ ಬಿಟ್ಟು ಯುವ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ಗೆ ತಂಡದಲ್ಲಿ ಸ್ಥಾನ ನೀಡಲಾಗಿತ್ತು.
ಇದನ್ನೂ ಓದಿ: IPL 2025: RCB ಸ್ಟೆಡಿನಾ? ಕಂಬ್ಯಾಕ್ಗೆ ಜಸ್ಪ್ರೀತ್ ಬುಮ್ರಾ ರೆಡಿ
ಇದೀಗ ಕೆಎಸ್ ಭರತ್ ಭಾರತ ತಂಡದಿಂದ ಹೊರಬಿದ್ದು 1 ವರ್ಷ ಕಳೆದಿದೆ. ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲೂ ಅವಕಾಶ ವಂಚಿತರಾಗಿದ್ದಾರೆ. ಹೀಗಾಗಿ ವಿದೇಶಿ ಕ್ಲಬ್ ಪರ ಕಣಕ್ಕಿಳಿಯುವ ಮೂಲಕ ಕಂಬ್ಯಾಕ್ ಮಾಡುವ ಇರಾದೆಯಲ್ಲಿದ್ದಾರೆ ಕೆಎಸ್ ಭರತ್.
ಕೆಎಸ್ ಭರತ್ ಆರ್ಸಿಬಿ ಪರ 8 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಒಂದು ಅರ್ಧಶತಕ ಸೇರಿದಂತೆ ಒಟ್ಟು 191 ರನ್ ಕಲೆಹಾಕಿದ್ದಾರೆ. ಇನ್ನು 2022 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 2 ಪಂದ್ಯಗಳನ್ನಾಡಿದ್ದ ಭರತ್ ಕೇವಲ 8 ರನ್ ಮಾತ್ರ ಗಳಿಸಿದ್ದರು. ಇದಾಗ್ಯೂ 2023 ರಲ್ಲಿ ಗುಜರಾತ್ ಟೈಟಾನ್ಸ್ ತಂಡವು ಅವರನ್ನು ಖರೀದಿಸಿತ್ತು. ಆದರೆ ಜಿಟಿ ಪರ ಕಣಕ್ಕಿಳಿಯಲು ಅವಕಾಶ ಸಿಕ್ಕಿರಲಿಲ್ಲ. ಇನ್ನು ಈ ಬಾರಿಯ ಐಪಿಎಲ್ನ ಮೆಗಾ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದಾರೆ.