WTC Points Table: ಆಂಗ್ಲರನ್ನು ಮಣಿಸಿ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಭರ್ಜರಿ ಮುಂಬಡ್ತಿ ಪಡೆದ ಭಾರತ..!

WTC Points Table: ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 106 ರನ್​ಗಳಿಂದ ಮಣಿಸಿದ ಭಾರತ ಮತ್ತೊಮ್ಮೆ ಗೆಲುವಿನ ಲಯಕ್ಕೆ ಮರಳಿದೆ. ಅಲ್ಲದೆ ಹೈದರಾಬಾದ್​ ಟೆಸ್ಟ್​ ಸೋಲಿಗೆ ಸೇಡನ್ನು ತೀರಿಸಿಕೊಂಡಿದೆ. ಇದರೊಂದಿಗೆ ಬಹುಮುಖ್ಯವಾಗಿ ಡಬ್ಲ್ಯುಟಿಸಿ ಪಾಯಿಂಟ್​ ಪಟ್ಟಿಯಲ್ಲೂ ರೋಹಿತ್ ಪಡೆಗೆ ಭಾರಿ ಲಾಭವಾಗಿದೆ.

WTC Points Table: ಆಂಗ್ಲರನ್ನು ಮಣಿಸಿ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಭರ್ಜರಿ ಮುಂಬಡ್ತಿ ಪಡೆದ ಭಾರತ..!
ಟೀಂ ಇಂಡಿಯಾ

Updated on: Feb 05, 2024 | 3:23 PM

ವಿಶಾಖಪಟ್ಟಣಂನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 106 ರನ್​ಗಳಿಂದ ಮಣಿಸಿದ ಭಾರತ (India vs England) ಮತ್ತೊಮ್ಮೆ ಗೆಲುವಿನ ಲಯಕ್ಕೆ ಮರಳಿದೆ. ಅಲ್ಲದೆ ಹೈದರಾಬಾದ್​ ಟೆಸ್ಟ್​ ಸೋಲಿಗೆ ಸೇಡನ್ನು ತೀರಿಸಿಕೊಂಡಿದೆ. ಇದರೊಂದಿಗೆ ಬಹುಮುಖ್ಯವಾಗಿ ಡಬ್ಲ್ಯುಟಿಸಿ ಪಾಯಿಂಟ್​ ಪಟ್ಟಿಯಲ್ಲೂ (WTC Points Table) ರೋಹಿತ್ ಪಡೆಗೆ ಭಾರಿ ಲಾಭವಾಗಿದೆ. ಉಭಯ ತಂಡಗಳ ನಡುವಿನ ಸರಣಿ ಆರಂಭಕ್ಕೂ ಮುನ್ನ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ಭಾರತ, ಹೈದರಾಬಾದ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದ ಸೋಲಿನೊಂದಿಗೆ ಡಬ್ಲ್ಯುಟಿಸಿ ಪಾಯಿಂಟ್​ ಪಟ್ಟಿಯಲ್ಲೂ ಭಾರಿ ಕುಸಿತ ಅನುಭವಿಸಿತ್ತು. ಎರಡನೇ ಸ್ಥಾನದಲ್ಲಿದ್ದ ರೋಹಿತ್ (Rohit Sharma) ಪಡೆ ನೇರವಾಗಿ ಐದನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ವಿಶಾಖಪಟ್ಟಣಂ ಟೆಸ್ಟ್ ಪಂದ್ಯದಲ್ಲಿ 106 ರನ್​ಗಳ ಭಾರಿ ಜಯ ಸಾಧಿಸಿರುವ ಟೀಂ ಇಂಡಿಯಾ (Team India) ಮತ್ತೊಮ್ಮೆ ಐದನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿದೆ.

ಎರಡನೇ ಸ್ಥಾನಕ್ಕೇರಿದ ಭಾರತ

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ 2023-25ರ ಆವೃತ್ತಿಯ ಪಾಯಿಂಟ್​ ಪಟ್ಟಿಯಲ್ಲಿ ಇದುವರೆಗೆ 6 ಪಂದ್ಯಗಳನ್ನಾಡಿರುವ ಭಾರತ, 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, 2 ಪಂದ್ಯಗಳಲ್ಲಿ ಸೋಲನುಭವಿಸಿದೆ. ಉಳಿದಂತೆ 1 ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದ್ದು, 38 ಅಂಕಗಳನ್ನು ಸಂಪಾದಿಸಿರುವ ಭಾರತ, 52.77 ಗೆಲುವಿನ ಶೇಕಾಡವಾರುವಿನೊಂದಿಗೆ ಇದೀಗ ಎರಡನೇ ಸ್ಥಾನಕ್ಕೆ ಬಂದು ಕುಳಿತಿದೆ. ಎಂದಿನಂತೆ ಮೊದಲ ಸ್ಥಾನದಲ್ಲಿ ಮುಂದುವರೆದಿರುವ ಆಸ್ಟ್ರೇಲಿಯಾ ತಂಡ 10 ಪಂದ್ಯಗಳಲ್ಲಿ 6 ಗೆಲುವು, 3 ಸೋಲಿನೊಂದಿಗೆ 66 ಪಾಯಿಂಟ್ಸ್ ಕಲೆಹಾಕಿದೆ.

ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿ

ಮೂರು ತಂಡಗಳದ್ದು ಒಂದೇ ಅಂಕ

ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಆಡಿರುವ 2 ಪಂದ್ಯಗಳ ಪೈಕಿ 1 ಗೆಲುವು ಹಾಗೂ 1 ಸೋಲಿನೊಂದಿಗೆ 12 ಅಂಕ ಸಂಪಾಧಿಸಿದೆ. ಆಫ್ರಿಕಾ ತಂಡದಂತೆ ಅಷ್ಟೇ ಸಂಖ್ಯೆಯ ಪಂದ್ಯಗಳನ್ನಾಡಿರುವ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು ತಲಾ 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ 4 ಮತ್ತು 5ನೇ ಸ್ಥಾನವನ್ನು ಪಡೆದುಕೊಂಡಿವೆ.

IND vs ENG: ವಿಶಾಖಪಟ್ಟಣಂನಲ್ಲಿ ಅಜೇಯ ಓಟ ಮುಂದುವರೆಸಿದ ಟೀಂ ಇಂಡಿಯಾ..!

8ನೇ ಸ್ಥಾನದಲ್ಲಿ ಇಂಗ್ಲೆಂಡ್

ಉಳಿದಂತೆ ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಕ್ರಮವಾಗಿ 6 ಮತ್ತು 7ನೇ ಸ್ಥಾನದಲ್ಲಿದ್ದು, ಇದೀಗ ಭಾರತದ ವಿರುದ್ಧ ಸೋಲನುಭವಿಸಿರುವ ಇಂಗ್ಲೆಂಡ್ ತಂಡ ಎಂಟನೇ ಸ್ಥಾನದಲ್ಲಿದೆ. ಆಂಗ್ಲರು ಇದುವರೆಗು 7 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 3 ಗೆಲುವು ಹಾಗೂ 3 ಸೋಲಿನೊಂದಿಗೆ 21 ಅಂಕ ಕಲೆಹಾಕಿದ್ದಾರೆ.

ಪಂದ್ಯ ಹೀಗಿತ್ತು

ಭಾರತ ನೀಡಿದ 399 ರನ್​ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್​ನಲ್ಲಿ 292 ರನ್​ಗಳಿಗೆ ಆಲೌಟ್ ಆಯಿತು. ಈ ಮೂಲಕ 106 ರನ್​ಗಳ ಹೀನಾಯ ಸೋಲು ಅನುಭವಿಸಿತು. ಭಾರತದ ಪರ ಎರಡನೇ ಇನ್ನಿಂಗ್ಸ್​ನಲ್ಲಿ ಮಾರಕ ದಾಳಿ ನಡೆಸಿದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತು ಸ್ಪಿನ್ ಬೌಲರ್ ಆರ್ ಅಶ್ವಿನ್ ತಲಾ 3 ವಿಕೆಟ್ ಪಡೆದರು. ಇದರ ಹೊರತಾಗಿ ಬುಮ್ರಾ ಮೊದಲ ಇನಿಂಗ್ಸ್‌ನಲ್ಲೂ 6 ವಿಕೆಟ್‌ ಪಡೆದಿದ್ದರು. ಇದರಿಂದಾಗಿ ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್ 253 ರನ್‌ಗಳಿಗೆ ಕುಸಿದಿತ್ತು. ಜಸ್ಪ್ರೀತ್ ಬುಮ್ರಾ ಈ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿದ್ದು ಪಂದ್ಯಶ್ರೇಷ್ಠರಾಗಿಯೂ ಆಯ್ಕೆಯಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:03 pm, Mon, 5 February 24