797 ನಿಮಿಷ, 847 ಎಸೆತಗಳನ್ನು ಎದುರಿಸಿದ್ದ ಲಿಯೊನಾರ್ಡ್ ಹಟ್ಟನ್

Leonard Hutton: ಲಿಯೊನಾರ್ಡ್ ಹಟ್ಟನ್ ಇಂಗ್ಲೆಂಡ್ ತಂಡದ ಮಾಜಿ ಆರಂಭಿಕ ದಾಂಡಿಗ. 1937 ರಿಂದ 1955 ರವರೆಗೆ ಇಂಗ್ಲೆಂಡ್ ಪರ ಕಣಕ್ಕಿಳಿದಿದ್ದ ಲಿಯೊನಾರ್ಡ್ 138 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದು, ಈ ವೇಳೆ 19 ಸೆಂಚುರಿ ಸಿಡಿಸಿದ್ದಾರೆ. ಅಲ್ಲದೆ  33 ಅರ್ಧಶತಕಗಳೊಂದಿಗೆ ಒಟ್ಟು 6971 ರನ್ ಕಲೆಹಾಕಿದ್ದಾರೆ. 

797 ನಿಮಿಷ, 847 ಎಸೆತಗಳನ್ನು ಎದುರಿಸಿದ್ದ ಲಿಯೊನಾರ್ಡ್ ಹಟ್ಟನ್
ಸಾಂದರ್ಭಿಕ ಚಿತ್ರ

Updated on: Aug 26, 2025 | 1:05 PM

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇನಿಂಗ್ಸ್​ವೊಂದರಲ್ಲಿ ಅತ್ಯಧಿಕ ಎಸೆತಗಳನ್ನು ಎದುರಿಸಿದ ಬ್ಯಾಟ್ಸ್​ಮನ್ ಯಾರೆಂಬ ಪ್ರಶ್ನೆಗೆ ಉತ್ತರ ಲಿಯೊನಾರ್ಡ್ ಹಟ್ಟನ್. ಇಂಗ್ಲೆಂಡ್​ನ ಲಿಯೊನಾರ್ಡ್ ಹಟ್ಟನ್ ಬರೋಬ್ಬರಿ 797 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ್ದರು ಎಂದರೆ ನಂಬಲೇಬೇಕು. ಇದರ ನಡುವೆ ಎದುರಿಸಿದ್ದು ಬರೋಬ್ಬರಿ 847 ಎಸೆತಗಳು ಎಂಬುದೇ ಅಚ್ಚರಿ.

ಲಿಯೊನಾರ್ಡ್ ಹಟ್ಟನ್ ಇಂತಹದೊಂದು ವಿಶ್ವ ದಾಖಲೆ ನಿರ್ಮಿಸಿದ್ದು 1938 ರಲ್ಲಿ. 87 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ದಾಖಲೆಯನ್ನು ಈವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.

1938, ಆಗಸ್ಟ್ 20 ರಂದು ಲಂಡನ್​ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಂಗ್ಲ ಪಡೆಯ ನಾಯಕ ವ್ಯಾಲಿ ಹ್ಯಾಮಂಡ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇಂಗ್ಲೆಂಡ್ ಪರ ಇನಿಂಗ್ಸ್ ಆರಂಭಿಸಿದ್ದು ಲಿಯೊನಾರ್ಡ್ ಹಟ್ಟನ್ ಹಾಗೂ ಬಿಲ್ ಎಡ್ರಿಚ್. ಆದರೆ ತಂಡದ ಮೊತ್ತ 29 ರನ್​ ಆಗುವಷ್ಟರಲ್ಲಿ ಎಡ್ರಿಚ್ (12) ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಹಟ್ಟನ್​ಗೆ ಸಾಥ್ ನೀಡಿದ್ದು ಮೌರಿಸ್ ಲೇಲ್ಯಾಂಡ್.

ಆಸ್ಟ್ರೇಲಿಯಾ ವೇಗಿಗಳ ಮಾರಕ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿಯುವ 2ನೇ ವಿಕೆಟ್​ಗೆ 382 ರನ್​ಗಳ ಜೊತೆಯಾಟವಾಡಿದರು. ಇದರ ನಡುವೆ 438 ಎಸೆತಗಳನ್ನು ಎದುರಿಸಿದ ಮೌರಿಸ್ ಲೇಲ್ಯಾಂಡ್ 187 ರನ್​ಗಳಿಸಿ ಔಟಾದರು.

ಆದರೆ ಮತ್ತೊಂದೆಡೆ ಬಂಡೆಯಂತೆ ನಿಂತಿದ್ದ ಲಿಯೊನಾರ್ಡ್ ಹಟ್ಟನ್ ಅವರ ವಿಕೆಟ್ ಪಡೆಯಲು ಆಸೀಸ್ ಬೌಲರ್​ಗಳು ಹರಸಾಹಸಪಟ್ಟರು.

797 ನಿಮಿಷಗಳ ಕಾಲ ಕ್ರೀಸ್ ಕಚ್ಚಿ ನಿಂತ ಹಟ್ಟನ್ ಆಸ್ಟ್ರೇಲಿಯಾ ಬೌಲರ್​ಗಳ ಬೆವರಿಳಿಸಿ 35 ಫೋರ್​ಗಳನ್ನು ಬಾರಿಸಿದರು. ಅಲ್ಲದೆ 847 ಎಸೆತಗಳಲ್ಲಿ 364 ರನ್​ ಗಳಿಸಿದರು. ಈ ಮೂಲಕ ಟೆಸ್ಟ್ ಪಂದ್ಯವೊಂದರ ಇನಿಂಗ್ಸ್​ನಲ್ಲಿ ಅತೀ ಹೆಚ್ಚು ಎಸೆತಗಳನ್ನು ಎದುರಿಸಿ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಲಿಯೊನಾರ್ಡ್ ಹಟ್ಟನ್

ಕುತೂಹಲಕಾರಿ ವಿಷಯ ಎಂದರೆ ಲಿಯೊನಾರ್ಡ್ ಹಟ್ಟನ್ ಅಂದು ಬಾರಿಸಿದ್ದ 364 ರನ್​ಗಳು ಅವರ ವೃತ್ತಿಜೀವನದ ಗರಿಷ್ಠ ವೈಯುಕ್ತಿಕ ಸ್ಕೋರ್​ ಆಗಿಯೇ ಉಳಿಯಿತು. ಅಂದರೆ ಇಂಗ್ಲೆಂಡ್ ಪರ 79 ಟೆಸ್ಟ್ ಪಂದ್ಯಗಳನ್ನಾಡಿದ್ದ ಹಟ್ಟನ್ 19 ಶತಕಗಳನ್ನು ಬಾರಿಸಿದ್ದಾರೆ. ಇದಾಗ್ಯೂ ಅವರಿಗೆ ಮತ್ತೊಮ್ಮೆ 364 ರನ್​ಗಳ ಗರಿಷ್ಠ ಸ್ಕೋರ್​ ಮುಟ್ಟಲು ಸಾಧ್ಯವಾಗಿರಲಿಲ್ಲ.

ಇನ್ನು 1972 ರಲ್ಲಿ ನ್ಯೂಝಿಲೆಂಡ್​ನ ಗ್ಲೆನ್ ಟರ್ನರ್​, ಲಿಯೊನಾರ್ಡ್ ಹಟ್ಟನ್ ಬರೆದ 847 ಎಸೆತಗಳ ದಾಖಲೆಯ ಸನಿಹಕ್ಕೆ ತಲುಪಿದ್ದರು. ಟರ್ನರ್ ಆಸ್ಟ್ರೇಲಿಯಾ ವಿರುದ್ಧ 759 ಎಸೆತಗಳನ್ನು ಎದುರಿಸಿದ್ದರು. ಹಾಗೆಯೇ 1999 ರಲ್ಲಿ ಸೌತ್ ಆಫ್ರಿಕಾದ ಗ್ಯಾರಿ ಕಸ್ಟರ್ನ್​ ಇಂಗ್ಲೆಂಡ್ ವಿರುದ್ಧ 642 ಎಸೆತಗಳನ್ನು ಎದುರಿಸಿ 275 ರನ್ ಬಾರಿಸಿದ್ದರು.

ಇದನ್ನೂ ಓದಿ: IPL 2026: ಐಪಿಎಲ್ ನಿಯಮ… RCB ಈ ಇಬ್ಬರನ್ನು ಬಿಡುಗಡೆ ಮಾಡಲೇಬೇಕು!

ಇದಾದ ಬಳಿಕ ಟೆಸ್ಟ್ ಇನಿಂಗ್ಸ್​ವೊಂದರಲ್ಲಿ ಯಾವುದೇ ಬ್ಯಾಟರ್​ಗೂ 600 ಎಸೆತಗಳನ್ನು ಎದುರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಲಿಯೊನಾರ್ಡ್ ಹಟ್ಟನ್ ಹೆಸರಿನಲ್ಲಿರುವ 847 ಎಸೆತಗಳ ವಿಶ್ವ ದಾಖಲೆ ಇಂದಿಗೂ ಎಂದಿಗೂ ವಿಶ್ವ ದಾಖಲೆಯಾಗಿಯೇ ಉಳಿಯಲಿದೆ ಎನ್ನಬಹುದು.

 

 

Published On - 1:04 pm, Tue, 26 August 25