ಯುವಿಗಿಂತ ಮೊದಲು ಧೋನಿ… ವಿಶ್ವಕಪ್ ಗೆಲುವಿನಲ್ಲಿ ಸಚಿನ್ ‘ಮೈಂಡ್ ಗೇಮ್’
ODI World Cup 2011: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 274 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 48.2 ಓವರ್ಗಳಲ್ಲಿ 277 ರನ್ ಬಾರಿಸಿ ವಿಶ್ವ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದರು.

ಟೀಮ್ ಇಂಡಿಯಾ ಏಕದಿನ ವಿಶ್ವಕಪ್ ಗೆದ್ದು ಬರೋಬ್ಬರಿ 14 ವರ್ಷಗಳು ಕಳೆದಿವೆ. 2011, ಏಪ್ರಿಲ್ 2 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿತು. ಈ ವಿಶ್ವಕಪ್ ಗೆಲುವು ಹಲವು ಕಾರಣಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತದೆ. ಇದೀಗ ಈ ಗೆಲುವಿನ ಹಿಂದಿರುವ ಮಾಸ್ಟರ್ ಮೈಂಡ್ ಯಾರದ್ದು ಎಂಬುದರ ಮಾಹಿತಿಯೊಂದು ಹೊರಬಿದ್ದಿದೆ.
ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ 2011 ರ ವಿಶ್ವಕಪ್ ಫೈನಲ್‌ನಲ್ಲಿ ಯುವರಾಜ್ ಸಿಂಗ್‌ಗಿಂತ ಮೊದಲು ಮಹೇಂದ್ರ ಸಿಂಗ್ ಧೋನಿ ಅವರನ್ನು ಬ್ಯಾಟಿಂಗ್ ಮಾಡಲು ಸಚಿನ್ ತೆಂಡೂಲ್ಕರ್ ಕಾರಣ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದರು.
ಈ ಬಗ್ಗೆ ಅಭಿಮಾನಿಯೊಬ್ಬರು ರೆಡ್ಡಿಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನ ಕೇಳಿದ್ದಾರೆ. ಅಲ್ಲದೆ ಇದು ನಿಜವೇ? ಇದರ ಹಿಂದೆ ನೀವು ಯಾವ ತಂತ್ರವನ್ನು ಯೋಚಿಸಿದ್ದೀರಿ ಎಂಬುದು ನನಗೆ ತಿಳಿಯಬೇಕು ಎಂದು ಆಗ್ರಹಿಸಿದ್ದಾರೆ.
ಅಭಿಮಾನಿಯ ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿನ್ ತೆಂಡೂಲ್ಕರ್, ಇದರ ಹಿಂದೆ ಎರಡು ಪ್ರಮುಖ ಕಾರಣಗಳಿದ್ದವು. ಮೊದಲನೆಯದು ಎಡ-ಬಲ ಬ್ಯಾಟಿಂಗ್ ಸಂಯೋಜನೆ. ಏಕೆಂದರೆ ಶ್ರೀಲಂಕಾ ತಂಡದಲ್ಲಿದ್ದ ಆಫ್-ಸ್ಪಿನ್ನರ್ ತೊಂದರೆ ಉಂಟುಮಾಡಬಹುದು. ಹೀಗಾಗಿ ಲೆಫ್ಟ್ ಅ್ಯಂಡ್ ರೈಟ್ ಕಾಂಬಿನೇಷನ್ ಮುಂದುವರೆಸಲು ನಿರ್ಧರಿಸಿದ್ದೆ.
ಇನ್ನು ಎರಡನೆಯ ಕಾರಣ, ಮುತ್ತಯ್ಯ ಮುರಳೀಧರನ್ 2008 ರಿಂದ 2010 ರವರೆಗೆ ಮೂರು ವರ್ಷಗಳ ಕಾಲ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಹಾಗಾಗಿ, ಎಂಎಸ್ ಧೋನಿ ನೆಟ್ಸ್‌ನಲ್ಲಿಯೂ ಮುರಳೀಧರನ್ ಅವರನ್ನು ಎದುರಿಸಿದ್ದಾರೆ. ಅಲ್ಲದೆ, ಮುರಳೀಧರನ್ ಅವರ ಬೌಲಿಂಗ್ನಲ್ಲಿ 3 ವರ್ಷ ಆಡಿದ ಅನುಭವ ಧೋನಿಗೆ ಇತ್ತು. ಹೀಗಾಗಿ ಯುವರಾಜ್ ಸಿಂಗ್ ಅವರಿಗಿಂತ ಮುಂಚಿತವಾಗಿ ಧೋನಿಯನ್ನು ಬ್ಯಾಟಿಂಗ್ಗೆ ಕಳುಹಿಸಲು ಸೂಚಿಸಿದ್ದೆ ಎಂಬುದನ್ನು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.
ಸಚಿನ್ ತೆಂಡೂಲ್ಕರ್ ಅವರ ಈ ಮೈಂಡ್ ಗೇಮ್ ಟೀಮ್ ಇಂಡಿಯಾ ಪಾಲಿಗೆ ಪ್ಲಸ್ ಪಾಯಿಂಟ್ ಆಗಿದ್ದು ಸುಳ್ಳಲ್ಲ. ಏಕೆಂದರೆ ವಿರಾಟ್ ಕೊಹ್ಲಿ ಔಟಾದ ಬಳಿಕ ಬಲಗೈ ದಾಂಡಿಗನಾಗಿ ಕ್ರೀಸ್ಗೆ ಆಗಮಿಸಿದ ಮಹೇಂದ್ರ ಸಿಂಗ್ ಧೋನಿ, ಗೌತಮ್ ಗಂಭೀರ್ ಜೊತೆಗೂಡಿ 4ನೇ ವಿಕೆಟ್ಗೆ ಶತಕದ ಜೊತೆಯಾಟವಾಡಿದರು.
ಇದನ್ನೂ ಓದಿ: IPL 2026: ಐಪಿಎಲ್ ನಿಯಮ… RCB ಈ ಇಬ್ಬರನ್ನು ಬಿಡುಗಡೆ ಮಾಡಲೇಬೇಕು!
ಅಲ್ಲದೆ 79 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 91 ರನ್ ಬಾರಿಸಿ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಈ ಮೂಲಕ ಭಾರತ ತಂಡವು 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಯಿತು.
