2 ಪಂದ್ಯದಲ್ಲೂ ನಾವೇ ಗೆಲ್ತೀವಿ: ಟೀಮ್ ಇಂಡಿಯಾಗೆ ಹ್ಯಾರಿಸ್ ರೌಫ್ ಎಚ್ಚರಿಕೆ
Asia Cup 2025: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಏಷ್ಯಾಕಪ್ನಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳಲ್ಲಿ ಭಾರತ, ಪಾಕಿಸ್ತಾನ್, ಒಮಾನ್ ಮತ್ತು ಯುಎಇ ಗ್ರೂಪ್ ಎ ನಲ್ಲಿದ್ದರೆ, ಬಾಂಗ್ಲಾದೇಶ್, ಅಫ್ಘಾನಿಸ್ತಾನ್, ಹಾಂಗ್ ಕಾಂಗ್ ಹಾಗೂ ಶ್ರೀಲಂಕಾ ಬಿ ಗ್ರೂಪ್ನಲ್ಲಿದೆ. ಹೀಗಾಗಿ ಮೊದಲ ಸುತ್ತಿನಲ್ಲೇ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡಬಹುದು.

ಬಹುನಿರೀಕ್ಷಿತ ಏಷ್ಯಾಕಪ್ ಟಿ20 ಟೂರ್ನಿಗೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 9 ರಿಂದ ಆರಂಭವಾಗಲಿರುವ ಈ ಟೂರ್ನಿಯ 6ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದು ಪಾಕಿಸ್ತಾನ್ ತಂಡದ ವೇಗಿ ಹ್ಯಾರಿಸ್ ರೌಫ್ ಹೇಳಿದ್ದಾರೆ.
ಹ್ಯಾರಿಸ್ ರೌಫ್ ಅಭ್ಯಾಸ ಮಾಡುತ್ತಿದ್ದ ವೇಳೆ ಅಭಿಮಾನಿಯೊಬ್ಬರು ಏಷ್ಯಾಕಪ್ ಹಾಗೂ ಭಾರತದ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ರೌಫ್, ಇನ್ಷಾ ಅಲ್ಲಾಹ್, ಈ ಸಲ ಎರಡೂ ಮ್ಯಾಚ್ಗಳಲ್ಲೂ ನಾವೇ ಗೆಲ್ತೀವಿ ಎಂದಿದ್ದಾರೆ.
ಈ ಬಾರಿಯ ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಒಂದೇ ಗುಂಪಿನಲ್ಲಿದೆ. ಅದರಂತೆ ಮೊದಲ ಸುತ್ತಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಒಂದು ಬಾರಿ ಮುಖಾಮುಖಿಯಾಗಲಿದೆ. ಈ ಪಂದ್ಯವು ಸೆಪ್ಟೆಂಬರ್ 14 ರಂದು ದುಬೈನಲ್ಲಿ ನಡೆಯಲಿದೆ.
ಇನ್ನು ಉಭಯ ತಂಡಗಳು ಮೊದಲ ಸುತ್ತಿನ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದರೆ ಸೂಪರ್-4 ಹಂತಕ್ಕೇರಲಿದೆ. ಈ ಸುತ್ತಿನಲ್ಲೂ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಮುಖಾಮುಖಿಯನ್ನು ಎದುರು ನೋಡಬಹುದು. ಇದನ್ನೇ ಪ್ರಸ್ತಾಪಿಸಿ ಹ್ಯಾರಿಸ್ ರೌಫ್ ಈ ಬಾರಿ ನಾವು ಟೀಮ್ ಇಂಡಿಯಾ ವಿರುದ್ಧ ಎರಡೂ ಮ್ಯಾಚ್ಗಳಲ್ಲೂ ಗೆಲ್ಲಲಿದ್ದೇವೆ ಎಂದು ತಿಳಿಸಿದ್ದಾರೆ.
ಇದೀಗ ಟೀಮ್ ಇಂಡಿಯಾಗೆ ಹ್ಯಾರಿಸ್ ರೌಫ್ ನೀಡಿರುವ ಪರೋಕ್ಷ ಎಚ್ಚರಿಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳು ಉಭಯ ತಂಡಗಳ ಮುಖಾಮುಖಿಯನ್ನು ಎದುರು ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಈ ಕಾತುರತೆಯನ್ನು ಹೆಚ್ಚಿಸುವಂತೆ ಇದೀಗ ಏಷ್ಯಾಕಪ್ಗೆ ಭಾರತ ಮತ್ತು ಪಾಕಿಸ್ತಾನ್ ತಂಡಗಳ ಘೋಷಣೆಯಾಗಿದೆ. ಅದರಂತೆ ಈ ಬಾರಿ ಕಣಕ್ಕಿಳಿಯಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
ಭಾರತ ತಂಡ: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ರಿಂಕು ಸಿಂಗ್.
ಇದನ್ನೂ ಓದಿ: ಯಾರಿಂದಲೂ ಸಾಧ್ಯವಾಗದ ಹೊಸ ವಿಶ್ವ ದಾಖಲೆ ಬರೆದ ಶಾಕಿಬ್ ಅಲ್ ಹಸನ್..!
ಪಾಕಿಸ್ತಾನ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್ಝಾದ್ ಫರ್ಹಾನ್, ಶಾಹೀನ್ ಅಫ್ರಿದಿ, ಸಲ್ಮಾನ್ ಮಿರ್ಝಾ, ಸೈಮ್ ಅಯ್ಯೂಬ್ ಮತ್ತು ಸುಫಿಯಾನ್ ಮುಖಿಮ್.
Published On - 11:54 am, Mon, 25 August 25
