Sachin Tendulkar
ದಶಕಗಳ ಕಾಲ ಕ್ರಿಕೆಟ್ ಲೋಕವನ್ನು ಅಕ್ಷರಶಃ ಆಳಿದ ಕ್ರೆಡಿಟ್ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಅವರಿಗೆ ಸಲ್ಲುತ್ತದೆ. ವಿಶ್ವ ಕ್ರಿಕೆಟ್‌ನಲ್ಲಿ ಕ್ರಿಕೆಟ್ ದೇವರು ಎಂದು ಚಿರಪರಿಚಿತರಾಗಿರುವ ಸಚಿನ್ ತೆಂಡೂಲ್ಕರ್ ನಿರ್ಮಿಸಿದ ದಾಖಲೆಗಳಿಗೆ ಲೆಕ್ಕವಿಲ್ಲ. ತಮ್ಮ 16ನೇ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಅಂಗಳಕ್ಕೆ ಕಾಲಿಟ್ಟು ಇತಿಹಾಸ ಬರೆದ ಸಚಿನ್ ಈಗಲೂ ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಆರಾಧ್ಯ ದೈವ. 24 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಲಿಟ್ಲ್ ಮಾಸ್ಟರ್ ಹಲವಾರು ಅವಿಸ್ಮರಣೀಯ ಸನ್ನಿವೇಷಗಳಿಗೆ ಸಾಕ್ಷಿಯಾಗಿದ್ದಾರೆ. ಇದರ ಜೊತಗೆ ಅಪರೂಪದ ದಾಖಲೆಗಳನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 1989ರಲ್ಲಿ ಪಾಕಿಸ್ತಾನ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಚಿನ್ ತೆಂಡೂಲ್ಕರ್ 2013ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದಾಗ ಬರೋಬ್ಬರಿ 34,357 ರನ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದರು. ಅಂತರರಾಷ್ಟ್ರೀಯ ಏಕದಿನ ಪಂದ್ಯಾಗಳಲ್ಲಿ ಅಜೇಯ 200 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ 2010ರಲ್ಲೇ ಸಚಿನ್ ಅವರು ಪಾತ್ರರಾಗಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 463 ಪಂದ್ಯಗಳನ್ನು ಆಡಿರುವ ಇವರು 18,426 ರನ್ ಕಲೆಹಾಕಿದ್ದಾರೆ. 49 ಶತಕ ಹಾಗೂ 96 ಅರ್ಧಶತಕ ಸಿಡಿಸಿದ್ದಾರೆ. ಬೌಲಿಂಗ್ನಲ್ಲೂ 154 ವಿಕೆಟ್ ಪಡೆದುಕೊಂಡಿದ್ದಾರೆ. ಟೆಸ್ಟ್‌ನಲ್ಲಿ 200 ಪಂದ್ಯಗಳನ್ನಾಡಿದ್ದು, 15,921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕ ಹಾಗೂ 68 ಅರ್ಧಶತಕ ಬಾರಿಸಿದ್ದಾರೆ.