AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಹುಲ್ ದ್ರಾವಿಡ್ ಮಗನನ್ನು ಔಟ್ ಮಾಡಿದ ಸಚಿನ್ ತೆಂಡೂಲ್ಕರ್ ಪುತ್ರ

Samit Dravid - Arjun Tendulkar: ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ದೇಶೀಯ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದಾರೆ. ಈ ಪಂದ್ಯದಲ್ಲಿ ಸಮಿತ್ ದ್ರಾವಿಡ್ ಅವರ ವಿಕೆಟ್ ಕಬಳಿಸುವಲ್ಲಿ ಅರ್ಜುನ್ ತೆಂಡೂಲ್ಕರ್ ಸಫಲರಾಗಿದ್ದಾರೆ.

ರಾಹುಲ್ ದ್ರಾವಿಡ್ ಮಗನನ್ನು ಔಟ್ ಮಾಡಿದ ಸಚಿನ್ ತೆಂಡೂಲ್ಕರ್ ಪುತ್ರ
Samit Dravid - Arjun Tendulkar
ಝಾಹಿರ್ ಯೂಸುಫ್
|

Updated on:Sep 23, 2025 | 11:32 AM

Share

ಟೀಮ್ ಇಂಡಿಯಾದ ಲೆಜೆಂಡ್ ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡೂಲ್ಕರ್ ಒಟ್ಟಿಗೆ ಆಡುವುದನ್ನು ನೀವು ನೋಡಿರುತ್ತೀರಿ. ಇದೀಗ ಅವರ ಪುತ್ರರು ಪರಸ್ಪರ ಮುಖಾಮುಖಿಯಾಗಿದ್ದಾರೆ. ಮುಖಾಮುಖಿಯಲ್ಲಿ ರಾಹುಲ್ ದ್ರಾವಿಡ್ ಅವರ ಪುತ್ರನ ವಿಕೆಟ್ ಪಡೆಯುವಲ್ಲಿ ಸಚಿನ್ ತೆಂಡೂಲ್ಕರ್ ಅವರ ಮಗ ಯಶಸ್ವಿಯಾಗಿರುವುದು ವಿಶೇಷ.

ಸಮಿತ್ vs ಅರ್ಜುನ್:

ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (KSCA) ಆಯೋಜಿಸಿರುವ ಕೆ. ತಿಮ್ಮಪ್ಪ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೆಎಸ್​ಸಿಎ ಸೆಕ್ರೆಟರಿ ಇಲೆವೆನ್ ಹಾಗೂ ಗೋವಾ ಕ್ರಿಕೆಟ್ ಅಸೋಸಿಯೇಷನ್ ತಂಡಗಳು ಮುಖಾಮುಖಿಯಾಗಿವೆ. ಬೆಂಗಳೂರಿನ ಆಲೂರಿನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಕೆಎಸ್​ಸಿಎ ಸೆಕ್ರೆಟರಿ ಇಲೆವೆನ್ ಪರ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಹಾಗೂ ಗೋವಾ ಕ್ರಿಕೆಟ್ ಅಸೋಸಿಯೇಷನ್ ತಂಡದ ಅರ್ಜುನ್ ತೆಂಡೂಲ್ಕರ್ ಕಣಕ್ಕಿಳಿದಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಗೋವಾ ತಂಡದ ನಾಯಕ ದರ್ಶನ್ ಮಿಶಾಲ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಗೋವಾ ಕ್ರಿಕೆಟ್ ಅಸೋಸಿಯೇಷನ್ ತಂಡ ಪ್ರಥಮ ಇನಿಂಗ್ಸ್​ನಲ್ಲಿ 338 ರನ್​ ಗಳಿಸಿ ಆಲೌಟ್ ಆಗಿದೆ.

ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಶುರು ಮಾಡಿದ ಕೆಎಸ್​ಸಿಎ ಸೆಕ್ರೆಟರಿ ಇಲೆವೆನ್ ಪರ ಆರಂಭಿಕ ದಾಂಡಿಗ ಲೋಚನ್ ಗೌಡ 155 ಎಸೆತಗಳಲ್ಲಿ 88 ರನ್ ಬಾರಿಸಿ ಮಿಂಚಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕರುಣ್ ನಾಯರ್ ಕೇವಲ 3 ರನ್​ಗಳಿಸಿ ವಿ ಕೌಶಿಕ್​ಗೆ ವಿಕೆಟ್ ಒಪ್ಪಿಸಿದ್ದಾರೆ.

ಆ ಬಳಿಕ ಬಂದ ಸಮಿತ್ ದ್ರಾವಿಡ್ 2 ಆಕರ್ಷಕ ಫೋರ್​ಗಳೊಂದಿಗೆ ಇನಿಂಗ್ಸ್ ಕಟ್ಟುವ ವಿಶ್ವಾಸ ಮೂಡಿಸಿದ್ದರು. ಆದರೆ ಈ ಹಂತದಲ್ಲಿ ದಾಳಿಗಿಳಿದ ಅರ್ಜುನ್ ತೆಂಡೂಲ್ಕರ್, ಸಮಿತ್ ದ್ರಾವಿಡ್ (9) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಲ್ಲದೆ ಈ ಪಂದ್ಯದಲ್ಲಿ ಉತ್ತಮ ದಾಳಿ ಸಂಘಟಿಸಿದ ಅರ್ಜುನ್ ತೆಂಡೂಲ್ಜರ್ 21 ಓವರ್​ಗಳಲ್ಲಿ ಕೇವಲ 54 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಈ ಭರ್ಜರಿ ಬೌಲಿಂಗ್ ಪ್ರದರ್ಶನದಿಂದಾಗಿ ಕೆಎಸ್​ಸಿಎ ಸೆಕ್ರೆಟರಿ ಇಲೆವೆನ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 276 ರನ್​ಗಳಿಸಿ ಆಲೌಟ್ ಆಗಿದೆ.

62 ರನ್​ಗಳ ಮುನ್ನಡೆಯಿಂದಿಗೆ ಗೋವಾ ಕ್ರಿಕೆಟ್ ಅಸೋಸಿಯೇಷನ್ ತಂಡ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದು, ಮೂರು ಓವರ್​ಗಳ ಮುಕ್ತಾಯದ ವೇಳೆಗೆ 16 ರನ್ ಕಲೆಹಾಕಿದೆ. 

ಗೋವಾ ಕ್ರಿಕೆಟ್ ಅಸೋಸಿಯೇಷನ್ ಪ್ಲೇಯಿಂಗ್ ಇಲೆವೆನ್: ದರ್ಶನ್ ಮಿಶಾಲ್ (ನಾಯಕ), ಸ್ನೇಹಲ್ ಕೌಠಂಕರ್, ಸಮರ್ ದುಬಾಶಿ (ವಿಕೆಟ್ ಕೀಪರ್), ಅಭಿನವ್ ತೇಜ್ರಾನಾ, ಲಲಿತ್ ಯಾದವ್, ಮಂಥನ್ ಖುತ್ಕರ್, ಕಸಬ್ ಬಾಕ್ಲೆ, ಮೋಹಿತ್ ರೆಡ್ಕರ್, ಕೌಶಿಕ್ ವಿ, ಅರ್ಜುನ್ ತೆಂಡೂಲ್ಕರ್, ಇಶಾನ್ ಗಡೇಕರ್.

ಇದನ್ನೂ ಓದಿ: ಟಿ20 ಇತಿಹಾಸದಲ್ಲೇ ಯಾರೂ ನಿರ್ಮಿಸದ ವಿಶ್ವ ದಾಖಲೆ ಬರೆದ ಕೀರನ್ ಪೊಲಾರ್ಡ್

ಕೆಎಸ್​ಸಿಎ ಸೆಕ್ರೆಟರಿ ಇಲೆವೆನ್: ನಿಕಿನ್ ಜೋಸ್ (ನಾಯಕ), ಲೋಚನ್ ಗೌಡ, ಫೈಝಾನ್ ಖಾನ್, ಕರುಣ್ ನಾಯರ್, ಸಮಿತ್ ದ್ರಾವಿಡ್, ಧ್ರುವ ಪಿ, ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ರಾಜವೀರ್ ವಾಧ್ವಾ, ಮಾಧವ್ ಪಿ ಬಜಾಜ್, ಅಭಿಷೇಕ್ ಅಹ್ಲಾವತ್, ಆದಿತ್ಯ ಗೋಯಲ್.

Published On - 11:31 am, Tue, 23 September 25