Team India: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಮೂವರು ಕನ್ನಡಿಗರು ಕಣಕ್ಕಿಳಿದಿದ್ದರು. ಬ್ಯಾಟರ್ಗಳಾಗಿ ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಕಾಣಿಸಿಕೊಂಡರೆ, ಬೌಲರ್ ಆಗಿ ಪ್ರಸಿದ್ಧ್ ಕೃಷ್ಣ ಕಣಕ್ಕಿಳಿದಿದ್ದರು. ಇದೀಗ ಅಕ್ಟೋಬರ್ 2 ರಿಂದ ಶುರುವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಮತ್ತೋರ್ವ ಕನ್ನಡಿಗ ಆಯ್ಕೆಯಾಗುವ ನಿರೀಕ್ಷೆಯಿದೆ.
ಏಷ್ಯಾಕಪ್ (Asia Cup 2025) ಟಿ20 ಟೂರ್ನಿಯ ಮುಕ್ತಾಯದ ಬೆನ್ನಲ್ಲೇ ಭಾರತ ತಂಡವು ಟೆಸ್ಟ್ ಸರಣಿಗಾಗಿ ಸಜ್ಜಾಗಲಿದೆ. ತವರಿನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಈ ಸರಣಿಗಾಗಿ ಇದೇ ವಾರ ಭಾರತ ತಂಡವನ್ನು ಪ್ರಕಟಿಸಲಾಗುತ್ತದೆ. ಈ ತಂಡದಲ್ಲಿ ಇಬ್ಬರು ಕನ್ನಡಿಗರು ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಆದರೆ ಓರ್ವ ಕನ್ನಡಿಗ ತಂಡದಿಂದ ಹೊರಬೀಳಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ.
1 / 5
ಪ್ರಸ್ತುತ ಮಾಹಿತಿ ಪ್ರಕಾರ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಕನ್ನಡಿಗ ಕರುಣ್ ನಾಯರ್ ಆಯ್ಕೆಯಾಗುವ ಸಾಧ್ಯತೆಯಿಲ್ಲ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ನೀರಸ ಪ್ರದರ್ಶನ ನೀಡಿದ ಕಾರಣ ಕರುಣ್ ಅವರನ್ನು ಭಾರತ ಟೆಸ್ಟ್ ತಂಡದಿಂದ ಕೈ ಬಿಡಲಿದ್ದಾರೆ ಎಂದು ವರದಿಯಾಗಿದೆ.
2 / 5
ಕರುಣ್ ನಾಯರ್ ಬದಲಿಗೆ ಕರ್ನಾಟಕದ ಯುವ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಆಯ್ಕೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಆಸ್ಟ್ರೇಲಿಯಾ ಎ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಎ ಪರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ 150 ರನ್ ಬಾರಿಸಿ ಮಿಂಚಿದ್ದರು.
3 / 5
ಈ ಭರ್ಜರಿ ಪ್ರದರ್ಶನದ ಫಲವಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಮಧ್ಯಮ ಕ್ರಮಾಂಕದ ದಾಂಡಿಗನಾಗಿ ದೇವದತ್ ಪಡಿಕ್ಕಲ್ ಅವರನ್ನು ಆಯ್ಕೆ ಮಾಡಲು ಆಯ್ಕೆಗಾರರು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಹೀಗಾಗಿ ವಿಂಡೀಸ್ ವಿರುದ್ಧದ ಸರಣಿಯಲ್ಲಿ ಪಡಿಕ್ಕಲ್ ಕಾಣಿಸಿಕೊಳ್ಳುವು ಸಾಧ್ಯತೆ ಹೆಚ್ಚಿದೆ.
4 / 5
ಇದಕ್ಕೂ ಮುನ್ನ ದೇವದತ್ ಪಡಿಕ್ಕಲ್ ಟೀಮ್ ಇಂಡಿಯಾ ಪರ 2 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 3 ಇನಿಂಗ್ಸ್ ಆಡಿರುವ ಅವರು ಒಂದು ಅರ್ಧಶತಕದೊಂದಿಗೆ ಒಟ್ಟು 90 ರನ್ ಕಲೆಹಾಕಿದ್ದಾರೆ. ಇದೀಗ ಭಾರತ ಎ ಪರ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಪಡಿಕ್ಕಲ್ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.