797 ನಿಮಿಷ, 847 ಎಸೆತಗಳನ್ನು ಎದುರಿಸಿದ್ದ ಲಿಯೊನಾರ್ಡ್ ಹಟ್ಟನ್
Leonard Hutton: ಲಿಯೊನಾರ್ಡ್ ಹಟ್ಟನ್ ಇಂಗ್ಲೆಂಡ್ ತಂಡದ ಮಾಜಿ ಆರಂಭಿಕ ದಾಂಡಿಗ. 1937 ರಿಂದ 1955 ರವರೆಗೆ ಇಂಗ್ಲೆಂಡ್ ಪರ ಕಣಕ್ಕಿಳಿದಿದ್ದ ಲಿಯೊನಾರ್ಡ್ 138 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದು, ಈ ವೇಳೆ 19 ಸೆಂಚುರಿ ಸಿಡಿಸಿದ್ದಾರೆ. ಅಲ್ಲದೆ 33 ಅರ್ಧಶತಕಗಳೊಂದಿಗೆ ಒಟ್ಟು 6971 ರನ್ ಕಲೆಹಾಕಿದ್ದಾರೆ.

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇನಿಂಗ್ಸ್ವೊಂದರಲ್ಲಿ ಅತ್ಯಧಿಕ ಎಸೆತಗಳನ್ನು ಎದುರಿಸಿದ ಬ್ಯಾಟ್ಸ್ಮನ್ ಯಾರೆಂಬ ಪ್ರಶ್ನೆಗೆ ಉತ್ತರ ಲಿಯೊನಾರ್ಡ್ ಹಟ್ಟನ್. ಇಂಗ್ಲೆಂಡ್ನ ಲಿಯೊನಾರ್ಡ್ ಹಟ್ಟನ್ ಬರೋಬ್ಬರಿ 797 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ್ದರು ಎಂದರೆ ನಂಬಲೇಬೇಕು. ಇದರ ನಡುವೆ ಎದುರಿಸಿದ್ದು ಬರೋಬ್ಬರಿ 847 ಎಸೆತಗಳು ಎಂಬುದೇ ಅಚ್ಚರಿ.
ಲಿಯೊನಾರ್ಡ್ ಹಟ್ಟನ್ ಇಂತಹದೊಂದು ವಿಶ್ವ ದಾಖಲೆ ನಿರ್ಮಿಸಿದ್ದು 1938 ರಲ್ಲಿ. 87 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ದಾಖಲೆಯನ್ನು ಈವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ ಎಂಬುದು ವಿಶೇಷ.
1938, ಆಗಸ್ಟ್ 20 ರಂದು ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಂಗ್ಲ ಪಡೆಯ ನಾಯಕ ವ್ಯಾಲಿ ಹ್ಯಾಮಂಡ್ ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇಂಗ್ಲೆಂಡ್ ಪರ ಇನಿಂಗ್ಸ್ ಆರಂಭಿಸಿದ್ದು ಲಿಯೊನಾರ್ಡ್ ಹಟ್ಟನ್ ಹಾಗೂ ಬಿಲ್ ಎಡ್ರಿಚ್. ಆದರೆ ತಂಡದ ಮೊತ್ತ 29 ರನ್ ಆಗುವಷ್ಟರಲ್ಲಿ ಎಡ್ರಿಚ್ (12) ವಿಕೆಟ್ ಒಪ್ಪಿಸಿದ್ದರು. ಈ ಹಂತದಲ್ಲಿ ಹಟ್ಟನ್ಗೆ ಸಾಥ್ ನೀಡಿದ್ದು ಮೌರಿಸ್ ಲೇಲ್ಯಾಂಡ್.
ಆಸ್ಟ್ರೇಲಿಯಾ ವೇಗಿಗಳ ಮಾರಕ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದ ಈ ಜೋಡಿಯುವ 2ನೇ ವಿಕೆಟ್ಗೆ 382 ರನ್ಗಳ ಜೊತೆಯಾಟವಾಡಿದರು. ಇದರ ನಡುವೆ 438 ಎಸೆತಗಳನ್ನು ಎದುರಿಸಿದ ಮೌರಿಸ್ ಲೇಲ್ಯಾಂಡ್ 187 ರನ್ಗಳಿಸಿ ಔಟಾದರು.
ಆದರೆ ಮತ್ತೊಂದೆಡೆ ಬಂಡೆಯಂತೆ ನಿಂತಿದ್ದ ಲಿಯೊನಾರ್ಡ್ ಹಟ್ಟನ್ ಅವರ ವಿಕೆಟ್ ಪಡೆಯಲು ಆಸೀಸ್ ಬೌಲರ್ಗಳು ಹರಸಾಹಸಪಟ್ಟರು.
797 ನಿಮಿಷಗಳ ಕಾಲ ಕ್ರೀಸ್ ಕಚ್ಚಿ ನಿಂತ ಹಟ್ಟನ್ ಆಸ್ಟ್ರೇಲಿಯಾ ಬೌಲರ್ಗಳ ಬೆವರಿಳಿಸಿ 35 ಫೋರ್ಗಳನ್ನು ಬಾರಿಸಿದರು. ಅಲ್ಲದೆ 847 ಎಸೆತಗಳಲ್ಲಿ 364 ರನ್ ಗಳಿಸಿದರು. ಈ ಮೂಲಕ ಟೆಸ್ಟ್ ಪಂದ್ಯವೊಂದರ ಇನಿಂಗ್ಸ್ನಲ್ಲಿ ಅತೀ ಹೆಚ್ಚು ಎಸೆತಗಳನ್ನು ಎದುರಿಸಿ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡರು.

ಲಿಯೊನಾರ್ಡ್ ಹಟ್ಟನ್
ಕುತೂಹಲಕಾರಿ ವಿಷಯ ಎಂದರೆ ಲಿಯೊನಾರ್ಡ್ ಹಟ್ಟನ್ ಅಂದು ಬಾರಿಸಿದ್ದ 364 ರನ್ಗಳು ಅವರ ವೃತ್ತಿಜೀವನದ ಗರಿಷ್ಠ ವೈಯುಕ್ತಿಕ ಸ್ಕೋರ್ ಆಗಿಯೇ ಉಳಿಯಿತು. ಅಂದರೆ ಇಂಗ್ಲೆಂಡ್ ಪರ 79 ಟೆಸ್ಟ್ ಪಂದ್ಯಗಳನ್ನಾಡಿದ್ದ ಹಟ್ಟನ್ 19 ಶತಕಗಳನ್ನು ಬಾರಿಸಿದ್ದಾರೆ. ಇದಾಗ್ಯೂ ಅವರಿಗೆ ಮತ್ತೊಮ್ಮೆ 364 ರನ್ಗಳ ಗರಿಷ್ಠ ಸ್ಕೋರ್ ಮುಟ್ಟಲು ಸಾಧ್ಯವಾಗಿರಲಿಲ್ಲ.
ಇನ್ನು 1972 ರಲ್ಲಿ ನ್ಯೂಝಿಲೆಂಡ್ನ ಗ್ಲೆನ್ ಟರ್ನರ್, ಲಿಯೊನಾರ್ಡ್ ಹಟ್ಟನ್ ಬರೆದ 847 ಎಸೆತಗಳ ದಾಖಲೆಯ ಸನಿಹಕ್ಕೆ ತಲುಪಿದ್ದರು. ಟರ್ನರ್ ಆಸ್ಟ್ರೇಲಿಯಾ ವಿರುದ್ಧ 759 ಎಸೆತಗಳನ್ನು ಎದುರಿಸಿದ್ದರು. ಹಾಗೆಯೇ 1999 ರಲ್ಲಿ ಸೌತ್ ಆಫ್ರಿಕಾದ ಗ್ಯಾರಿ ಕಸ್ಟರ್ನ್ ಇಂಗ್ಲೆಂಡ್ ವಿರುದ್ಧ 642 ಎಸೆತಗಳನ್ನು ಎದುರಿಸಿ 275 ರನ್ ಬಾರಿಸಿದ್ದರು.
ಇದನ್ನೂ ಓದಿ: IPL 2026: ಐಪಿಎಲ್ ನಿಯಮ… RCB ಈ ಇಬ್ಬರನ್ನು ಬಿಡುಗಡೆ ಮಾಡಲೇಬೇಕು!
ಇದಾದ ಬಳಿಕ ಟೆಸ್ಟ್ ಇನಿಂಗ್ಸ್ವೊಂದರಲ್ಲಿ ಯಾವುದೇ ಬ್ಯಾಟರ್ಗೂ 600 ಎಸೆತಗಳನ್ನು ಎದುರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಲಿಯೊನಾರ್ಡ್ ಹಟ್ಟನ್ ಹೆಸರಿನಲ್ಲಿರುವ 847 ಎಸೆತಗಳ ವಿಶ್ವ ದಾಖಲೆ ಇಂದಿಗೂ ಎಂದಿಗೂ ವಿಶ್ವ ದಾಖಲೆಯಾಗಿಯೇ ಉಳಿಯಲಿದೆ ಎನ್ನಬಹುದು.
Published On - 1:04 pm, Tue, 26 August 25
