AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತಿನಲ್ಲಿ ಮೂರನೇ ಯುದ್ಧ ಆರಂಭ; ಇರಾನ್ ಮೇಲೆ ನಾವೇ ದಾಳಿ ನಡೆಸಿದ್ದೆಂದು ಘೋಷಿಸಿದ ಅಮೆರಿಕ

US- Israel Attack on Iran: ಇಸ್ರೇಲ್ ಮತ್ತು ಇರಾನ್ ನಡುವಿನ ಕಲಹ ಇಂದು-ನಿನ್ನೆಯದಲ್ಲ. ಈ ಎರಡೂ ದೇಶಗಳ ನಡುವಿನ ಸಂಘರ್ಷವನ್ನು ಬಗೆಹರಿಸಲು ಅಮೆರಿಕ ಮಧ್ಯಸ್ಥಿಕೆ ವಹಿಸಲು ಒಪ್ಪಿತ್ತು. ಇಂದು ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದೆ. ಆದರೆ, ಇದೀಗ ಡೊನಾಲ್ಡ್​ ಟ್ರಂಪ್ ಇರಾನ್ ಮೇಲೆ ನಾವೇ ದಾಳಿ ನಡೆಸಿದ್ದು ಎಂದು ಘೋಷಿಸಿಕೊಂಡಿದ್ದಾರೆ. ಅಲ್ಲಿಗೆ ಜಗತ್ತಿನಲ್ಲಿ ಅಧಿಕೃತವಾಗಿ 3ನೇ ಯುದ್ಧ ಆರಂಭವಾಗಿದೆ. ಈಗಾಗಲೇ ರಷ್ಯಾ-ಉಕ್ರೇನ್, ಪಾಕಿಸ್ತಾನ- ಅಫ್ಘಾನಿಸ್ತಾನದ ನಡುವೆ ಯುದ್ಧ ನಡೆದಿರುವ ಬೆನ್ನಲ್ಲೇ ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಸಮರ ಸಾರಿವೆ.

ಜಗತ್ತಿನಲ್ಲಿ ಮೂರನೇ ಯುದ್ಧ ಆರಂಭ; ಇರಾನ್ ಮೇಲೆ ನಾವೇ ದಾಳಿ ನಡೆಸಿದ್ದೆಂದು ಘೋಷಿಸಿದ ಅಮೆರಿಕ
Iran Under Attack
ಸುಷ್ಮಾ ಚಕ್ರೆ
|

Updated on:Feb 28, 2026 | 3:38 PM

Share

ನವದೆಹಲಿ, ಫೆಬ್ರವರಿ 28: ಇರಾನ್ ಮೇಲೆ ಯುದ್ಧ (Iran War) ಆರಂಭವಾಗಿದೆ. ಇಸ್ರೇಲ್ ರಕ್ಷಣಾ ಸಚಿವರು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಇರಾನ್ ಮೇಲೆ ದಾಳಿ ಆರಂಭಿಸಿದ್ದೇವೆ ಎಂದು ಘೋಷಿಸಿದ್ದಾರೆ. ಇಷ್ಟು ದಿನ ಇಸ್ರೇಲ್​ಗೆ ಬಾಹ್ಯ ಬೆಂಬಲ ನೀಡುತ್ತಿದ್ದ ಅಮೆರಿಕ ಇದೀಗ ನೇರವಾಗಿಯೇ ಅಖಾಡಕ್ಕಿಳಿದಿದೆ. ಹೀಗಾಗಿ, ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್​ನ ಯುದ್ಧ ಆರಂಭವಾಗಿದೆ. ಇದು ಜಗತ್ತಿನಲ್ಲಿ ನಡೆಯುತ್ತಿರುವ ಮೂರನೇ ಯುದ್ಧವಾಗಿದೆ. ರಷ್ಯಾ ಮತ್ತು ಉಕ್ರೇನ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಯುದ್ಧ ನಡೆಯುತ್ತಿರುವಾಗಲೇ ಇರಾನ್ ಮೇಲಿನ ಯುದ್ಧ ಕೂಡ ಆರಂಭವಾಗಿದೆ.

ವಿಶೇಷವೆಂದರೆ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಭಾರತ ರಷ್ಯಾದ ಪರವಾಗಿದ್ದರೆ ಅಮೆರಿಕ ಉಕ್ರೇನ್ ಪರವಾಗಿದೆ. ಹಾಗೆಂದು ಭಾರತವೇನೂ ತಾನು ಉಕ್ರೇನ್ ವಿರುದ್ಧವೆಂದು ಹೇಳಿಕೊಂಡಿಲ್ಲ. ಭಾರತ ಕೂಡ ಉಕ್ರೇನ್ ಜೊತೆಗೆ ಉತ್ತಮ ಸಂಬಂಧ ಹೊಂದಿದೆ, ಶಾಂತಿಯುತವಾದ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಕರೆ ನೀಡುತ್ತಲೇ ಇದೆ. ಆದರೂ ಉಕ್ರೇನ್​ಗೆ ಹೋಲಿಸಿದರೆ ರಷ್ಯಾದ ನಾಯಕ ಪುಟಿನ್ ಜೊತೆ ಮೋದಿ ಹೆಚ್ಚು ಆಪ್ತ ಸಂಬಂಧ ಹೊಂದಿದ್ದಾರೆ. ಇದೇ ಕಾರಣದಿಂದಾಗಿ ಭಾರತ ಅಮೆರಿಕದ ಕೆಂಗಣ್ಣಿಗೆ ತುತ್ತಾಗಿತ್ತು.

ಇದನ್ನೂ ಓದಿ: ನನ್ನನ್ನು ಕೊಲೆ ಮಾಡಿದ್ರೆ, ಇರಾನ್​ ಅನ್ನು ವಿಶ್ವದ ಭೂಪಟದಿಂದಲೇ ಅಮೆರಿಕ ಅಳಿಸಿ ಹಾಕುತ್ತೆ: ಟ್ರಂಪ್

ಇನ್ನು, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಯುದ್ಧದಲ್ಲೂ ಭಾರತ ಅಫ್ಘಾನಿಸ್ತಾನದ ಪರವಾಗಿದೆ. ಅಮೆರಿಕ ಪಾಕಿಸ್ತಾನದ ಪರವಾಗಿದೆ. ಇದನ್ನೂ ಕೂಡ ಭಾರತ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೂ ಅಫ್ಘಾನಿಸ್ತಾನದ ನಾಯಕರ ಜೊತೆ ಪ್ರಧಾನಿ ಮೋದಿ ಉತ್ತಮ ಸಂಬಂಧ ಹೊಂದಿದ್ದಾರೆ, ಟ್ರಂಪ್ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದ್ದಾರೆ. ಈ ಎರಡೂ ಯುದ್ಧಗಳಲ್ಲಿ ಭಾರತ ವಿಶ್ವದ ದೊಡ್ಡಣ್ಣನಾದ ಅಮೆರಿಕದ ವಿರುದ್ಧ ನಿಂತಿದೆ. ಆದರೆ, ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದಲ್ಲಿ ಭಾರತ ಮತ್ತು ಅಮೆರಿಕವೆರಡೂ ಒಟ್ಟಾಗಿ ಇಸ್ರೇಲ್​ಗೆ ಬೆಂಬಲ ನೀಡುತ್ತಿವೆ. ಇರಾನ್​ ಪರವಾಗಿರುವ ದೇಶಗಳ ಸಂಖ್ಯೆ ಬಹಳ ಕಡಿಮೆಯಿದೆ.

ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದೆ ಎಂದು ಘೋಷಿಸಲಾಗಿತ್ತು. ಆದರೆ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ನಾವು ಇರಾನ್ ಮೇಲೆ ಯುದ್ಧ ಸಾರಿದ್ದೇವೆ. ಅಮೆರಿಕನ್ನರನ್ನು ರಕ್ಷಿಸುವುದು ನಮ್ಮ ಉದ್ದೇಶ. ಹೀಗಾಗಿ ಇರಾನ್‌ನಲ್ಲಿ ಅಮೆರಿಕ ಪ್ರಮುಖ ಯುದ್ಧ ಕಾರ್ಯಾಚರಣೆಗಳನ್ನು ನಡೆಸಿದೆ’ ಎಂದು ದೃಢಪಡಿಸಿದ್ದಾರೆ. ಹೀಗಾಗಿ, ಇರಾನ್ ಅಮೆರಿಕ ಮತ್ತು ಇಸ್ರೇಲ್ ಎರಡೂ ದೇಶಗಳ ದಾಳಿಯನ್ನು ಎದುರಿಸಬೇಕಾದ ಇಕ್ಕಟ್ಟಿಗೆ ಸಿಲುಕಿದೆ.

ಇದನ್ನೂ ಓದಿ: ಹತ್ತು ದಿನ ಟೈಂ ಕೊಡ್ತೀನಿ, ಹೇಳಿದ್ದು ಕೇಳದೆ ಇದ್ರೆ ಯುದ್ಧ ಗ್ಯಾರಂಟಿ, ಇರಾನ್​ಗೆ ಗಡುವು ಕೊಟ್ಟ ಟ್ರಂಪ್

“ಸ್ವಲ್ಪ ಸಮಯದ ಹಿಂದೆ, ಯುನೈಟೆಡ್ ಸ್ಟೇಟ್ಸ್ ಸೈನ್ಯವು ಇರಾನ್‌ನಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿತು. ಇರಾನ್ ಆಡಳಿತದ ಬೆದರಿಕೆಗಳನ್ನು ತೆಗೆದುಹಾಕುವ ಮೂಲಕ ಅಮೆರಿಕದ ಜನರನ್ನು ರಕ್ಷಿಸುವುದು ನಮ್ಮ ಉದ್ದೇಶವಾಗಿದೆ. ಇದಲ್ಲದೆ, ಅಮೆರಿಕದ ಹಿತಾಸಕ್ತಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ದಶಕಗಳಿಂದ ನಡೆಸುತ್ತಿರುವ ಅಭಿಯಾನವನ್ನು ಟೆಹ್ರಾನ್ ನಡೆಸುತ್ತಿದೆ. ನಾವು ಇನ್ನು ಮುಂದೆ ಅದನ್ನು ಸಹಿಸುವುದಿಲ್ಲ” ಎಂದು ಟ್ರಂಪ್ ಹೇಳಿದ್ದಾರೆ.

ಅತ್ತ ಪಾಕಿಸ್ತಾನ ಮತ್ತು ಅಮೆರಿಕದ ನಡುವೆಯೂ ಯುದ್ಧ ಜೋರಾಗಿದೆ. ಹೀಗಾಗಿ, ವಿವಿಧ ದೇಶಗಳ ನಾಯಕರು ಮಧ್ಯಸ್ಥಿಕೆ ವಹಿಸಲು ಮುಂದೆ ಬಂದಿದ್ದು, ಯುದ್ಧವನ್ನು ನಿಲ್ಲಿಸಲು ಮನವಿ ಮಾಡಿದ್ದಾರೆ. ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರು ಸಂಘರ್ಷವನ್ನು ಕೊನೆಗೊಳಿಸಲು ಮಾತುಕತೆಗೆ ಮುಕ್ತವಾಗಿದ್ದೇವೆ ಎಂದು ಹೇಳಿದ್ದಾರೆ. ಆದರೆ ಪಾಕಿಸ್ತಾನ ಇದೀಗ ತಾವು ಯಾವುದೇ ಮಾತುಕತೆಗೆ ಸಿದ್ಧವಿಲ್ಲ. ಅಫ್ಘಾನಿಸ್ತಾನ ಭಯೋತ್ಪಾದನೆಯನ್ನು ಆಶ್ರಯಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ. “ತಾಲಿಬಾನ್ ಜೊತೆ ಯಾವುದೇ ಮಾತುಕತೆ ಇಲ್ಲ. ಅಫ್ಘಾನಿಸ್ತಾನದಿಂದ ಭಯೋತ್ಪಾದನೆ ಕೊನೆಗೊಳ್ಳಬೇಕು. ಪಾಕಿಸ್ತಾನದ ನಾಗರಿಕರು ಮತ್ತು ಪ್ರದೇಶವನ್ನು ರಕ್ಷಿಸುವುದು ಪಾಕಿಸ್ತಾನದ ಜವಾಬ್ದಾರಿಯಾಗಿದೆ” ಎಂದು ಪಾಕಿಸ್ತಾನ ಪ್ರಧಾನಿಯವರ ವಿದೇಶಿ ಮಾಧ್ಯಮ ವಕ್ತಾರ ಹೇಳಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:09 pm, Sat, 28 February 26

Follow Us