AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಲೈದುಬೈ ವಿಮಾನದಲ್ಲಿ ಮಚ್ಚಾರ್ ಮೇಲೆ ನಡೆದ ದಾಳಿ ರೀತಿಯೇ ಮತ್ತೊಂದು ದಾಳಿ ಸಾಧ್ಯತೆ! ಅಮೆರಿಕದ ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆ

ಫ್ಲೈದುಬೈ ವಿಮಾನದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ನಡೆದಿದ್ದ ದಾಳಿಯ ರೀತಿಯಲ್ಲೇ ಮತ್ತೊಂದು ದಾಳಿ ನಡೆಸುವಂತೆ ಅಲ್ ಖೈದಾ ಬೆಂಬಲಿಗರು ಪ್ರಚೋದಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಎಫ್‌ಬಿಐ, ಡಿಹೆಚ್​ಎಸ್ ಮತ್ತು ಟಿಎಸ್​ಎ ಜಂಟಿ ಸೂಚನೆ ಹೊರಡಿಸಿದ್ದು, ವಿಮಾನ ನಿಲ್ದಾಣಗಳ ಭದ್ರತೆ ಬಲಪಡಿಸುವಂತೆ ಹಾಗೂ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇಡುವಂತೆ ತಿಳಿಸಿವೆ.

ಫ್ಲೈದುಬೈ ವಿಮಾನದಲ್ಲಿ ಮಚ್ಚಾರ್ ಮೇಲೆ ನಡೆದ ದಾಳಿ ರೀತಿಯೇ ಮತ್ತೊಂದು ದಾಳಿ ಸಾಧ್ಯತೆ! ಅಮೆರಿಕದ ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆ
ಸಾಂದರ್ಭಿಕ ಚಿತ್ರ
ಗಣಪತಿ ಶರ್ಮಾ
|

Updated on: Nov 21, 2026 | 11:02 AM

Share

ಮುಖ್ಯಾಂಶಗಳು

  • ಫ್ಲೈದುಬೈ ವಿಮಾನದ ದಾಳಿಯ ರೀತಿಯಲ್ಲಿ ಕೃತ್ಯಕ್ಕೆ ಅಲ್ ಖೈದಾ ಪ್ರಚೋದನೆ
  • ಅಮೆರಿಕದ ವಿಮಾನಯಾನ ಸಂಸ್ಥೆಗಳಿಗೆ ಭದ್ರತಾ ಸಂಸ್ಥೆಗಳ ಎಚ್ಚರಿಕೆ
  • ಥ್ಯಾಂಕ್ಸ್‌ಗಿವಿಂಗ್ ಪ್ರಯಾಣದ ವೇಳೆ ಕಟ್ಟೆಚ್ಚರಕ್ಕೆ ಸೂಚನೆ

ವಾಷಿಂಗ್ಟನ್, ನವೆಂಬರ್ 21: ಫ್ಲೈದುಬೈ ವಿಮಾನದಲ್ಲಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಮೇಲೆ ನಡೆದಿದ್ದ ದಾಳಿಯ ರೀತಿಯಲ್ಲೇ ಮತ್ತೊಂದು ದಾಳಿ ನಡೆಯುವ ಸಾಧ್ಯತೆಯ ಬಗ್ಗೆ ಅಲ್ ಖೈದಾ ಬೆಂಬಲಿಗರು ಬೆದರಿಕೆ ಸಂದೇಶ ಕಳುಹಿಸಿರುವ ಬೆನ್ನಲ್ಲೇ ಅಮೆರಿಕ ಸರ್ಕಾರ ಎಚ್ಚೆತ್ತುಕೊಂಡಿದೆ. ಅಮೆರಿಕದ ಫೆಡರಲ್ ಭದ್ರತಾ ಸಂಸ್ಥೆಗಳು ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಮತ್ತು ಏರ್ ಕಾರ್ಗೋ ನಿರ್ವಾಹಕರಿಗೆ ಎಚ್ಚರಿಕೆ ಸಂದೇಶ ನೀಡಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಎಫ್‌ಬಿಐ, ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಮತ್ತು ಸಾರಿಗೆ ಭದ್ರತಾ ಆಡಳಿತ ಜಂಟಿಯಾಗಿ ಈ ಎಚ್ಚರಿಕೆ ಸಂದೇಶ ಮತ್ತು ಸಲಹಾ ಸೂಚನೆ ಹೊರಡಿಸಿವೆ ಎಂದು ‘ಸಿಎನ್‌ಎನ್’ ವರದಿ ಮಾಡಿದೆ.

‘ಸೆಪ್ಟೆಂಬರ್‌ನಲ್ಲಿ ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದಿದ್ದ ಘಟನೆಗೆ ಅಲ್ ಖೈದಾ ಬೆಂಬಲಿತ ನಾಯಕರು ಮತ್ತು ಮಾಧ್ಯಮಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲದೆ, ಅದೇ ರೀತಿಯ ದಾಳಿಗಳನ್ನು ನಡೆಸುವಂತೆ ತಮ್ಮ ಬೆಂಬಲಿಗರನ್ನು ಪ್ರಚೋದಿಸುವ ಸಂದೇಶಗಳನ್ನೂ ಹರಡಿವೆ’ ಎಂದು ಭದ್ರತಾ ಸಂಸ್ಥೆಗಳ ಜಂಟಿ ಸಲಹಾ ಸೂಚನೆಯಲ್ಲಿ ತಿಳಿಸಲಾಗಿದೆ.

ಈ ಹಿಂದೆ ಫ್ಲೈದುಬೈ ವಿಮಾನದಲ್ಲಿ ನಡೆದ ಘಟನೆಯಲ್ಲಿ ವಿಮಾನದ ಕಾಕ್‌ಪಿಟ್‌ನೊಳಗೆ ಒಬ್ಬ ಪೈಲಟ್ ಮತ್ತೊಬ್ಬ ಪೈಲಟ್ ಮೇಲೆ ದಾಳಿ ನಡೆಸಿದ್ದ. ಗಾಯಗೊಂಡ ಭಾರತೀಯ ಮೂಲದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಪ್ರತಿದಾಳಿ ನಡೆಸಿದ್ದು, ಸಂಭವಿಸಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದರು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದರು. ಈ ಘಟನೆಯನ್ನು ಅಮೆರಿಕದ 9/11 ದಾಳಿಯಂತಹ ಭೀಕರ ದುರಂತಕ್ಕೆ ಕಾರಣವಾಗಬಹುದಾಗಿದ್ದ ಪ್ರಯತ್ನ ಎಂದು ಅವರು ಬಣ್ಣಿಸಿದ್ದರು.

ದಾಳಿ ನಡೆಸಿದ್ದ ವ್ಯಕ್ತಿಯನ್ನು ಹಮಾಮ್ ಅಲ್-ಹಮ್ಮಾಮಿ ಎಂದು ಗುರುತಿಸಲಾಗಿತ್ತು. ಆತನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಚಿತ್ರಗಳು ಪತ್ತೆಯಾಗಿದ್ದವು.

ಅಮೆರಿಕದ ಹಿತಾಸಕ್ತಿಗಳ ಮೇಲೆ ದಾಳಿಗೆ ಪ್ರಚೋದನೆ

ಫ್ಲೈದುಬೈ ವಿಮಾನದ ಘಟನೆಯನ್ನು ವಿಮಾನ ನಿಲ್ದಾಣಗಳ ಭದ್ರತಾ ವ್ಯವಸ್ಥೆಯನ್ನು ಹೇಗೆ ಮೀರಬಹುದು ಎಂಬುದಕ್ಕೆ ಉದಾಹರಣೆಯಾಗಿ ಅಲ್ ಖೈದಾ ಬೆಂಬಲಿತ ನಾಯಕರು ಮತ್ತು ಮಾಧ್ಯಮಗಳು ಬಿಂಬಿಸಿವೆ ಎನ್ನಲಾಗಿದೆ. ಇಂತಹ ಕೃತ್ಯಗಳನ್ನು ಪುನರಾವರ್ತಿಸುವಂತೆ ಹಾಗೂ ಅಮೆರಿಕ, ಇಸ್ರೇಲ್ ಮತ್ತು ಯಹೂದಿ ಹಿತಾಸಕ್ತಿಗಳನ್ನು ಗುರಿಯಾಗಿಸುವಂತೆ ಸಂದೇಶಗಳಲ್ಲಿ ಪ್ರಚೋದಿಸಲಾಗಿದೆ ಎಂದು ಭದ್ರತಾ ಸಂಸ್ಥೆಗಳು ಎಚ್ಚರಿಸಿವೆ.

ವಿಮಾನಯಾನ ವ್ಯವಸ್ಥೆಗೆ ಪ್ರವೇಶ ಪಡೆಯುವುದು, ಭದ್ರತಾ ತಪಾಸಣೆಗಳನ್ನು ತಪ್ಪಿಸುವುದು ಮತ್ತು ವಾಣಿಜ್ಯ ವಿಮಾನಗಳನ್ನು ದಾಳಿಗೆ ಬಳಸಿಕೊಳ್ಳುವಂತೆ ಪ್ರಚೋದಿಸುವ ಹಳೆಯ ಭಯೋತ್ಪಾದಕ ನಿರೂಪಣೆಗಳನ್ನೇ ಈ ಸಂದೇಶಗಳು ಪುನರಾವರ್ತಿಸಿವೆ ಎಂದು ವರದಿಯಾಗಿದೆ.

ಆದರೆ, ಸದ್ಯದ ಮಟ್ಟಿಗೆ ಅಮೆರಿಕದಲ್ಲಿ ಯಾವುದೇ ನಿರ್ದಿಷ್ಟ ಅಥವಾ ಖಚಿತವಾದ ದಾಳಿಯ ಬೆದರಿಕೆ ಪತ್ತೆಯಾಗಿಲ್ಲ ಎಂದು ಕಾನೂನು ಜಾರಿ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ಸಿಎನ್‌ಎನ್‌’ ವರದಿ ಮಾಡಿದೆ. ಭದ್ರತಾ ಸಂಸ್ಥೆಗಳು ಆತಂಕಕಾರಿ ಮಾಹಿತಿಯನ್ನು ಖಾಸಗಿ ವಿಮಾನಯಾನ ಉದ್ಯಮದೊಂದಿಗೆ ಹಂಚಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದು ಅವರು ಹೇಳಿದ್ದಾರೆ.

ಥ್ಯಾಂಕ್ಸ್‌ಗಿವಿಂಗ್ ಪ್ರಯಾಣದ ಅವಧಿಗೂ ಮುನ್ನ ಎಚ್ಚರಿಕೆ

ಅಮೆರಿಕದಲ್ಲಿ ಥ್ಯಾಂಕ್ಸ್‌ಗಿವಿಂಗ್ ರಜೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ಮಹತ್ವ ಪಡೆದುಕೊಂಡಿದೆ. ನವೆಂಬರ್ 24ರಿಂದ 30ರವರೆಗೆ ಸುಮಾರು 60 ಲಕ್ಷ ಜನರು ದೇಶೀಯ ವಿಮಾನಗಳಲ್ಲಿ ಪ್ರಯಾಣಿಸಲಿದ್ದಾರೆ ಎಂದು ಅಮೆರಿಕನ್ ಆಟೋಮೊಬೈಲ್ ಅಸೋಸಿಯೇಷನ್ (AAA) ಅಂದಾಜಿಸಿದೆ. ವರ್ಷದ ಅತ್ಯಂತ ಜನನಿಬಿಡ ವಿಮಾನ ಪ್ರಯಾಣದ ಅವಧಿಗಳಲ್ಲಿ ಇದೂ ಒಂದಾಗಿದೆ.

ಈ ಸಂದರ್ಭದಲ್ಲಿ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಮತ್ತು ಸರಕು ಸಾಗಣೆ ವಿಭಾಗದ ಸಿಬ್ಬಂದಿ ಹೆಚ್ಚು ಜಾಗರೂಕರಾಗಿರಬೇಕು ಎಂದು ಭದ್ರತಾ ಸಂಸ್ಥೆಗಳು ಸೂಚಿಸಿವೆ. ಭದ್ರತಾ ತಪಾಸಣೆಗಳನ್ನು ತಪ್ಪಿಸಲು ಪ್ರಯತ್ನಿಸುವವರು, ವಿಮಾನ ಕಾರ್ಯಾಚರಣೆ ಅಥವಾ ಭದ್ರತಾ ವ್ಯವಸ್ಥೆಗಳ ಬಗ್ಗೆ ಅನಗತ್ಯವಾಗಿ ವಿವರ ಸಂಗ್ರಹಿಸುವವರು ಹಾಗೂ ನಿರ್ದಿಷ್ಟ ಲಗೇಜ್‌ಗಳನ್ನು ತಾವೇ ನಿರ್ವಹಿಸಲು ಪಟ್ಟು ಹಿಡಿಯುವವರ ಚಲನವಲನಗಳ ಮೇಲೆ ನಿಗಾ ಇಡುವಂತೆ ಸೂಚಿಸಲಾಗಿದೆ.

ಇದರ ಜೊತೆಗೆ ವಿಮಾನಯಾನ ರೇಡಿಯೋಗಳು, ವಿಮಾನ ನಿಲ್ದಾಣ ಪ್ರವೇಶ ಬ್ಯಾಡ್ಜ್‌ಗಳು ಮತ್ತು ಸಿಬ್ಬಂದಿಯ ಸಮವಸ್ತ್ರಗಳು ಯಾವುದೇ ವಿವರಣೆಯಿಲ್ಲದೆ ಕಾಣೆಯಾಗುವುದನ್ನೂ ಸಂಭಾವ್ಯ ಎಚ್ಚರಿಕೆಯ ಸಂಕೇತಗಳೆಂದು ಪರಿಗಣಿಸುವಂತೆ ತಿಳಿಸಲಾಗಿದೆ. ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣವೇ ಕಾನೂನು ಜಾರಿ ಸಂಸ್ಥೆಗಳಿಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸಕ್ಕೆ ಶುಭಾಂಶು ಶುಕ್ಲಾ ಮೆಚ್ಚುಗೆ; ವಿದ್ಯಾರ್ಥಿಗಳಿಗೆ ಮಹತ್ವದ ಸಲಹೆ

ಮಧ್ಯಪ್ರಾಚ್ಯದಲ್ಲಿ ಮುಂದುವರಿದಿರುವ ಸಂಘರ್ಷಗಳು ಅಮೆರಿಕ ವಿರೋಧಿ ಭಾವನೆಗಳನ್ನು ಹೆಚ್ಚಿಸಿ, ಭಯೋತ್ಪಾದಕ ಸಂಘಟನೆಗಳ ಬೆಂಬಲಿಗರನ್ನು ಕೃತ್ಯಗಳಿಗೆ ಪ್ರಚೋದಿಸುವ ಸಾಧ್ಯತೆಯಿದೆ ಎಂದೂ ಸಂಸ್ಥೆಗಳು ಎಚ್ಚರಿಸಿವೆ. ಸದ್ಯ ಯಾವುದೇ ನಿರ್ದಿಷ್ಟ ವಿಮಾನ ಅಥವಾ ವಿಮಾನ ನಿಲ್ದಾಣವನ್ನು ದಾಳಿಯ ಗುರಿಯಾಗಿ ಗುರುತಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್