ತಾಜ್ ಮಹಲ್, ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಲು ಪಾಕ್ ಸಚಿವರಿಗೆ ಅನುಮತಿ ನಿರಾಕರಣೆ
ಈ ವಾರ ದೆಹಲಿಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ಸಭೆಯಲ್ಲಿ ಭಾಗವಹಿಸುತ್ತಿರುವ ಪಾಕಿಸ್ತಾನದ ಹವಾಮಾನ ಸಚಿವ ಮುಸಾದಿಕ್ ಮಲಿಕ್ ರಾಜಕೀಯ ವಾಗ್ವಾದದ ಕೇಂದ್ರಬಿಂದುವಾಗಿದ್ದಾರೆ. ಇಂದಿನಿಂದ ನವೆಂಬರ್ 22ರವರೆಗೆ ರಾಷ್ಟ್ರ ರಾಜಧಾನಿ ದೆಹಲಿಯ ಕಿಲ್ಲಾದಲ್ಲಿ ಮೊದಲ ಶಾಂಘೈ ಸಹಕಾರ ಸಂಘಟನೆಯ (ಎಸ್ಸಿಒ) ನಾಗರಿಕ ಸಂವಾದ ವೇದಿಕೆಯನ್ನು ಆಯೋಜಿಸಲಾಗಿದೆ. ಭಾರತ ಪ್ರವಾಸದ ಸಮಯದಲ್ಲಿ ಮಲಿಕ್ ಅವರು ಹಲವು ಸ್ಥಳಗಳಿಗೆ ಭೇಟಿ ನೀಡಲು ಯೋಜಿಸಿದ್ದರು. ಆದರೆ, ತಾಜ್ ಮಹಲ್, ನಿಜಾಮುದ್ದೀನ್ ದರ್ಗಾಕ್ಕೆ ಅವರಿಗೆ ಭೇಟಿ ನೀಡಲು ಅನುಮತಿ ಸಿಕ್ಕಿಲ್ಲ.

ನವದೆಹಲಿ, ನವೆಂಬರ್ 20: ಎಸ್ಸಿಒ ‘ನಾಗರಿಕ ಸಂವಾದ ವೇದಿಕೆ’ ಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನದ ಹವಾಮಾನ ಬದಲಾವಣೆ ಸಚಿವ ಮುಸಾದಿಕ್ ಮಲಿಕ್ ಅವರಿಗೆ ಆಗ್ರಾದ ತಾಜ್ ಮಹಲ್ ಮತ್ತು ದೆಹಲಿಯ ನಿಜಾಮುದ್ದೀನ್ ದರ್ಗಾ ಸೇರಿದಂತೆ ಇತರ ಸ್ಥಳಗಳಿಗೆ ಭೇಟಿ ನೀಡಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಅವರಿಗೆ ನೀಡಿರುವ ವೀಸಾ ಕೇವಲ ನವದೆಹಲಿಯಲ್ಲಿ ನಡೆಯುತ್ತಿರುವ ಎಸ್ಸಿಒ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಇಂದಿನಿಂದ ನವೆಂಬರ್ 22ರವರೆಗೆ ನವದೆಹಲಿಯ ಪುರಾಣ ಕಿಲ್ಲಾದಲ್ಲಿ ನಡೆಯುತ್ತಿರುವ ಮೊದಲ ‘ಎಸ್ಸಿಒ ನಾಗರಿಕ ಸಂವಾದ ವೇದಿಕೆ’ಯಲ್ಲಿ ಪಾಲ್ಗೊಳ್ಳಲು ಮುಸಾದಿಕ್ ಮಲಿಕ್ ಇಂದು ಭಾರತಕ್ಕೆ ಆಗಮಿಸಿದ್ದಾರೆ.
ಪಾಕಿಸ್ತಾನದ ಸಚಿವರು ಆಗ್ರಾದ ತಾಜ್ ಮಹಲ್ ಮತ್ತು ರಾಜಧಾನಿಯ ನಿಜಾಮುದ್ದೀನ್ ದರ್ಗಾಕ್ಕೆ ಭೇಟಿ ನೀಡಲು ಅನುಮತಿ ಕೋರಿದ್ದರು. ಆದರೆ, ಎಸ್ಸಿಒ ಸಭೆಯ ಹೊರತಾಗಿ ಬೇರೆ ಯಾವುದೇ ಕಾರ್ಯಕ್ರಮಗಳಿಗೆ ಭಾರತ ಸರ್ಕಾರ ಅನುಮತಿ ನಿರಾಕರಿಸಿದೆ. ಭಾರತ ಭೇಟಿಯ ಸಮಯದಲ್ಲಿ ಎಸ್ಸಿಒ ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ ಮತ್ತು ಬೇರೆ ಯಾವುದೇ ಸ್ಥಳಕ್ಕೆ ಭೇಟಿ ನೀಡುವಂತಿಲ್ಲ ಎಂದು ಅವರಿಗೆ ತಿಳಿಸಲಾಗಿದೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್ ಬಳಿಕ ಮೊದಲ ಪಾಕ್ ಸಚಿವರ ಭೇಟಿ, ದೆಹಲಿಗೆ ಬಂದಿಳಿದ ಮುಸಾದಿಕ್ ಮಲಿಕ್
ಆಪರೇಷನ್ ಸಿಂಧೂರ್ ಬಳಿಕ ಮೊದಲ ಭೇಟಿ:
2023ರಲ್ಲಿ ಗೋವಾದಲ್ಲಿ ನಡೆದ ಎಸ್ಸಿಒ ಸಭೆಯಲ್ಲಿ ಬಿಲಾವಲ್ ಭುಟ್ಟೋ ಜರ್ದಾರಿ ಭಾಗವಹಿಸಿದ ನಂತರ ಪಾಕಿಸ್ತಾನದ ಫೆಡರಲ್ ಸಚಿವರೊಬ್ಬರು ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. ಅಲ್ಲದೆ, 2025ರ ಮೇ ತಿಂಗಳಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ‘ಆಪರೇಷನ್ ಸಿಂಧೂರ್’ ಸೇನಾ ಕಾರ್ಯಾಚರಣೆಯ ನಂತರ ಪಾಕಿಸ್ತಾನದ ನಾಯಕರೊಬ್ಬರು ಭಾರತಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.
ಪಾಕಿಸ್ತಾನ ಸೇರಿದಂತೆ ಎಲ್ಲಾ ಎಸ್ಸಿಒ ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಲಾಗಿದೆ ಎಂದು ಭಾರತ ಅಕ್ಟೋಬರ್ 28ರಂದು ಘೋಷಿಸಿತ್ತು. ನಂತರ ಪಾಕಿಸ್ತಾನ ಸರ್ಕಾರವು ಮುಸಾದಿಕ್ ಮಲಿಕ್ ಅವರ ಭಾಗವಹಿಸುವಿಕೆಯನ್ನು ದೃಢಪಡಿಸಿತ್ತು. “ಪರಸ್ಪರ ಗೌರವದ ಮನೋಭಾವದೊಂದಿಗೆ ಎಸ್ಸಿಒ ಚೌಕಟ್ಟಿನೊಳಗೆ ನಾಗರಿಕತೆಗಳ ನಡುವೆ ಸಂವಾದವನ್ನು ಉತ್ತೇಜಿಸಲು ಮತ್ತು ಜನರ ನಡುವಿನ ಸಂಪರ್ಕವನ್ನು ಬೆಳೆಸಲು ಪಾಕಿಸ್ತಾನ ಸರ್ಕಾರ ಬದ್ಧವಾಗಿದೆ” ಎಂದು ಪಾಕಿಸ್ತಾನ ಸರ್ಕಾರದ ಹೇಳಿಕೆ ತಿಳಿಸಿತ್ತು.
ಇದನ್ನೂ ಓದಿ: ಪಾಕಿಸ್ತಾನ ಭಯೋತ್ಪಾದನೆ ನಿಲ್ಲಿಸಿದರೆ ಮಾತುಕತೆಗೆ ಸಿದ್ಧ: ಚಿಕಾಗೋದಲ್ಲಿ ರಾಹುಲ್ ಗಾಂಧಿ
ಯಾವುದೇ ದ್ವಿಪಕ್ಷೀಯ ಮಾತುಕತೆ ಇಲ್ಲ:
ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜತಾಂತ್ರಿಕ ಸಂಬಂಧಗಳು ಹಳಸಿರುವ ಹಿನ್ನೆಲೆಯಲ್ಲಿ, ಈ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ಯಾವುದೇ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆಗಳು ನಡೆಯುತ್ತಿಲ್ಲ. ಎಸ್ಸಿಒ ಸದಸ್ಯ ರಾಷ್ಟ್ರವಾಗಿರುವ ಕಾರಣ ಶಿಷ್ಟಾಚಾರದಂತೆ ಎಲ್ಲಾ ಸದಸ್ಯ ದೇಶಗಳೊಂದಿಗೆ ಪಾಕಿಸ್ತಾನಕ್ಕೂ ಆಹ್ವಾನ ನೀಡಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




