LPL 2024: 6,6,6,6,6,6: ದಾಖಲೆಯ ಶತಕ ಸಿಡಿಸಿದ ಟಿಮ್ ಸೀಫರ್ಟ್

|

Updated on: Jul 06, 2024 | 2:03 PM

LPL 2024: ಲಂಕಾ ಪ್ರೀಮಿಯರ್ ಲೀಗ್​ನ 6ನೇ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಸಿಡಿಸಿ ಟಿಮ್ ಸೀಫರ್ಟ್ ಹೊಸ ಇತಿಹಾಸ ಬರೆದಿದ್ದಾರೆ. ಅದು ಸಹ ಸಿಕ್ಸ್-ಫೋರ್​ಗಳ ಅಬ್ಬರದೊಂದಿಗೆ ಎಂಬುದು ವಿಶೇಷ. ಈ ಪಂದ್ಯದಲ್ಲಿ 63 ಎಸೆತಗಳನ್ನು ಎದುರಿಸಿದ ಸೀಫರ್ಟ್ ಅಜೇಯ 104 ರನ್ ಸಿಡಿಸಿದರು. ಈ ಶತಕದೊಂದಿಗೆ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

LPL 2024: 6,6,6,6,6,6: ದಾಖಲೆಯ ಶತಕ ಸಿಡಿಸಿದ ಟಿಮ್ ಸೀಫರ್ಟ್
Tim Seifert
Follow us on

ಶ್ರೀಲಂಕಾದಲ್ಲಿ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ (LPL 2024) ನ್ಯೂಝಿಲೆಂಡ್ ಕ್ರಿಕೆಟಿಗ ಟಿಮ್ ಸೀಫರ್ಟ್ (Tim Seifert) ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ದಂಬುಲ್ಲಾದ ರಂಗಿರಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಗಾಲೆ ಮಾರ್ವೆಲ್ಸ್ ಮತ್ತು ಜಾಫ್ನಾ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಜಾಫ್ನಾ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಗಾಲೆ ಮಾರ್ವೆಲ್ಸ್ ತಂಡವು 45 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಟಿಮ್ ಸೀಫರ್ಟ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದ ಸೀಫರ್ಟ್ ಆ ಬಳಿಕ ಅಬ್ಬರಿಸಲಾರಂಭಿಸಿದರು.

ಪರಿಣಾಮ ಟಿಮ್ ಸೀಫರ್ಟ್ ಬ್ಯಾಟ್​ನಿಂದ 6 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ಗಳು ಮೂಡಿಬಂದವು. ಈ ಮೂಲಕ 63 ಎಸೆತಗಳಲ್ಲಿ ಅಜೇಯ 104 ರನ್ ಬಾರಿಸಿ ಮಿಂಚಿದರು. ಈ ಶತಕದ ನೆರವಿನಿಂದ ಗಾಲೆ ಮಾರ್ವೆಲ್ಸ್ ತಂಡವು 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿತು.

188 ರನ್​ಗಳ ಗುರಿಯನ್ನು ಬೆನ್ನತ್ತಿದ ಜಾಫ್ನಾ ಕಿಂಗ್ಸ್ ತಂಡಕ್ಕೆ ಕುಸಾಲ್ ಮೆಂಡಿಸ್ ಸ್ಪೋಟಕ ಆರಂಭ ಒದಗಿಸಿದರು. ಮೆಂಡಿಸ್ ಕೇವಲ 16 ಎಸೆತಗಳಲ್ಲಿ 30 ರನ್ ಬಾರಿಸಿದರೆ, ಆ ಬಳಿಕ ಬಂದ ರಿಲೀ ರೊಸೊವ್ 42 ಎಸೆತಗಳಲ್ಲಿ 3 ಸಿಕ್ಸ್​ ಹಾಗೂ 8 ಫೋರ್​ಗಳೊಂದಿಗೆ 67 ರನ್ ಚಚ್ಚಿದರು.

ಪರಿಣಾಮ ಪಂದ್ಯವು ರೋಚಕಘಟ್ಟದತ್ತ ಸಾಗಿತು. ಈ ಹಂತದಲ್ಲಿ ಕಣಕ್ಕಿಳಿದ ಅಝ್ಮತುಲ್ಲಾ ಒಮರ್​ಝಾಹಿ ಇಡೀ ಪಂದ್ಯದ ಚಿತ್ರಣ ಬದಲಿಸಿದರು. ಕೇವಲ 13 ಎಸೆತಗಳನ್ನು ಎದುರಿಸಿದ ಅಝ್ಮತುಲ್ಲಾ 2 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 35 ರನ್ ಚಚ್ಚಿದರು. ಈ ಮೂಲಕ 19.4 ಓವರ್​ಗಳಲ್ಲಿ ಜಾಫ್ನಾ ಕಿಂಗ್ಸ್ ತಂಡ ಗುರಿ ಮುಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರು.

ದಾಖಲೆ ಬರೆದ ಸೀಫರ್ಟ್:

ಈ ಪಂದ್ಯದಲ್ಲಿ ಶತಕ ಸಿಡಿಸುವುದರೊಂದಿಗೆ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಸೆಂಚುರಿ ಬಾರಿಸಿದ ಆರಂಭಿಕನಲ್ಲದ ಮೊದಲ ಬ್ಯಾಟರ್ ಎಂಬ ದಾಖಲೆ ಸೀಫರ್ಟ್ ಪಾಲಾಯಿತು.

ಹಾಗೆಯೇ ಲಂಕಾ ಪ್ರೀಮಿಯರ್ ಲೀಗ್​ನ ಇನಿಂಗ್ಸ್​ವೊಂದರಲ್ಲಿ ಬೌಂಡರಿಗಳ ಮೂಲಕ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆ ಕೂಡ ಸೀಫರ್ಟ್ ಹೆಸರಿಗೆ ಸೇರ್ಪಡೆಯಾಗಿದೆ. ಈ ಪಂದ್ಯದಲ್ಲಿ ಸೀಫರ್ಟ್ ಸಿಕ್ಸ್​-ಫೋರ್​ಗಳ ಮೂಲಕವೇ 84 ರನ್ ಕಲೆಹಾಕಿದ್ದರು.

ಇದನ್ನೂ ಓದಿ: Team India: ಟೀಮ್ ಇಂಡಿಯಾದ ಮುಂದಿನ ನಾಯಕ ಯಾರು?

ಇದಕ್ಕೂ ಮುನ್ನ ಕುಸಾಲ್ ಜಾನಿತ್ ಸಿಕ್ಸ್​-ಫೋರ್​ಗಳ ಮೂಲಕ 70 ರನ್ ಕಲೆಹಾಕಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 6 ಭರ್ಜರಿ ಸಿಕ್ಸ್ ಹಾಗೂ 12 ಫೋರ್​ಗಳೊಂದಿಗೆ 84 ರನ್​ ಕಲೆಹಾಕುವ ಮೂಲಕ ಟಿಮ್ ಸೀಫರ್ಟ್ ಲಂಕಾ ಪ್ರೀಮಿಯರ್ ಲೀಗ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.