ಈ ಬಾರಿ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದ ತಂಡವೆಂದರೆ ಅದು ಲಕ್ನೋ ಸೂಪರ್ ಜೈಂಟ್ಸ್. ಇದಕ್ಕೆ ಕಾರಣವೂ ಇದ್ದು, ಕನ್ನಡಿಗ ಕೆಎಲ್ ರಾಹುಲ್ ಲಕ್ನೋ ಫ್ರಾಂಚೈಸಿ ತೊರೆಯಲಿದ್ದಾರೆ ಎಂಬ ಸುದ್ದಿ. ಇದೀಗ ಆ ಸುದ್ದಿಗೆ ಸ್ಪಷ್ಟನೆ ಸಿಕ್ಕಿದ್ದು, ಕನ್ನಡಿಗ ಕೆಎಲ್ ರಾಹುಲ್ ನಾಯಕತ್ವದ ಜೊತೆಗೆ ತಂಡವನ್ನೂ ಸಹ ತೊರೆದಿದ್ದಾರೆ. ಇದೀಗ ಹರಾಜಿಗೆ ಕಾಲಿಡುತ್ತಿರುವ ರಾಹುಲ್ರನ್ನು ಯಾವ ತಂಡ ಖರೀದಿಸಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ. ರಾಹುಲ್ರನ್ನು ಖರೀದಿಸುವ ರೇಸ್ನಲ್ಲಿ ಸಾಕಷ್ಟು ತಂಡಗಳಿದ್ದು, ಆ ಪೈಕಿ ಆರ್ಸಿಬಿ, ಸಿಎಸ್ಕೆ, ಡೆಲ್ಲಿ ಕ್ಯಾಪಿಟಲ್ಸ್ ಪ್ರಮುಖ ಫ್ರಾಂಚೈಸಿಗಳಾಗಿವೆ. ಹೀಗಾಗಿ ರಾಹುಲ್ಗೆ ಹರಾಜಿನಲ್ಲಿ ಬೃಹತ್ ಮೊತ್ತ ಸಿಗುವ ಸಾಧ್ಯತೆಗಳಿದ್ದು, ಅಂತಿಮವಾಗಿ ಅವರು ಯಾವ ತಂಡ ಸೇರಿಕೊಳ್ಳಲಿದ್ದಾರೆ ಎಂಬುದು ಮೆಗಾ ಹರಾಜಿನ ನಂತರ ತಿಳಿಯಲಿದೆ. ಇದನ್ನು ಹೊರತುಪಡಿಸಿ ಲಕ್ನೋ ತಂಡ ತನ್ನ ಧಾರಣ ಪಟ್ಟಿಯಲ್ಲಿ ಕೇವಲ 5 ಆಟಗಾರರಿಗೆ ಮಾತ್ರ ಸ್ಥಾನ ನೀಡಿದೆ.
2022 ರ ಐಪಿಎಲ್ನಲ್ಲಿ ಲಕ್ನೋ ತಂಡವನ್ನು ಸೇರಿಕೊಂಡಿದ್ದ ಕೆಎಲ್ ರಾಹುಲ್ ಅಂದಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವವಹಿಸಿಕೊಂಡಿದ್ದರು. ಆದರೆ ಒಮ್ಮೆಯೂ ತಂಡವನ್ನು ಪ್ರಶಸ್ತಿ ಗೆಲ್ಲುವಂತೆ ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ಕಳೆದ ಸೀಸನ್ನಲ್ಲಿ, ಅವರ ನಾಯಕತ್ವದಲ್ಲಿ ಲಕ್ನೋ ತಂಡವು ಆಡಿದ 14 ಪಂದ್ಯಗಳಲ್ಲಿ 7 ರಲ್ಲಿ ಮಾತ್ರ ಗೆದ್ದು 7 ನೇ ಸ್ಥಾನ ಪಡೆದುಕೊಂಡಿತ್ತು. ಅಲ್ಲದೆ ಕಳೆದ ಸೀಸನ್ನಲ್ಲಿ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ, ಕೆಎಲ್ ರಾಹುಲ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಅವರ ನಡುವೆ ಮಾತಿನ ಜಟಾಪಟಿಯೇ ನಡೆದಿತ್ತು. ತಂಡದ ಸೋಲಿನ ಬಳಿಕ ಸಂಜೀವ್ ಗೋಯೆಂಕಾ ರಾಹುಲ್ ಗೆ ಕ್ಲಾಸ್ ತೆಗೆದುಕೊಂಡಿದ್ದರು. ಅಂದಿನಿಂದ ಕೆಎಲ್ ರಾಹುಲ್ ತಂಡ ತೊರೆಯಲಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದು, ಈಗ ಅದೇ ನಡೆದಿದೆ.
ಲಕ್ನೋ ಸೂಪರ್ ಜೈಂಟ್ಸ್ ನಿಕೋಲಸ್ ಪುರನ್, ರವಿ ಬಿಷ್ಣೋಯ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್ ಮತ್ತು ಆಯುಷ್ ಬದೋನಿ ಅವರನ್ನು ಉಳಿಸಿಕೊಳ್ಳಲು ನಿರ್ಧರಿಸಿದೆ. ನಿಕೋಲಸ್ ಪೂರನ್ ತಂಡದ ಅತ್ಯಂತ ದುಬಾರಿ ಧಾರಣೆಯಾಗಿದ್ದು, ಲಕ್ನೋ ಸೂಪರ್ ಜೈಂಟ್ಸ್ ನಿಕೋಲಸ್ ಪೂರನ್ಗಾಗಿ 21 ಕೋಟಿ ರೂ. ಖರ್ಚು ಮಾಡಿದೆ. ಇದಲ್ಲದೆ ರವಿ ಬಿಷ್ಣೋಯ್ ಮತ್ತು ಮಯಾಂಕ್ ಯಾದವ್ ಅವರನ್ನು ತಲಾ 11 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ. ಕಳೆದ ಸೀಸನ್ನಲ್ಲಿ ತಮ್ಮ ಮಾರಕ ಬೌಲಿಂಗ್ ಮೂಲಕ ಮಯಾಂಕ್ ಯಾದವ್ ತಮ್ಮ ಛಾಪು ಮೂಡಿಸಿದ್ದರು. ಇವರಲ್ಲದೆ ಮೊಹ್ಸಿನ್ ಖಾನ್ ಮತ್ತು ಆಯುಷ್ ಬಡೋನಿ ಅನ್‌ಕ್ಯಾಪ್ಡ್ ಆಟಗಾರರಾಗಿ ಉಳಿದುಕೊಂಡಿದ್ದಾರೆ. ಈ ಇಬ್ಬರೂ ಆಟಗಾರರನ್ನು ತಲಾ 4 ಕೋಟಿ ನೀಡಿ ತಂಡದಲ್ಲಿ ಉಳಿಸಿಕೊಳ್ಳಲಾಗಿದೆ.
ಲಕ್ನೋ ತಂಡದಿಂದ ಕೆಎಲ್ ರಾಹುಲ್ ಹೊರತುಪಡಿಸಿ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ದೀಪಕ್ ಹೂಡಾ, ಯುಧ್ವೀರ್ ಸಿಂಗ್ ಚರಕ್, ಅರ್ಷದ್ ಖಾನ್, ನವೀನ್ ಉಲ್ ಹಕ್, ದೇವದತ್ ಪಡಿಕ್ಕಲ್, ಪ್ರೇರಕ್ ಮಂಕಡ್, ಮಣಿಮಾರನ್ ಸಿದ್ಧಾರ್ಥ್, ಕೃಷ್ಣಪ್ಪ ಗೌತಮ್, ಆಶ್ಟನ್ ಟರ್ನರ್, ಅಮಿತ್ ಮಿಶ್ರಾ, ಅರ್ಶಿನ್ ಕೆ. ಕೈಲ್ ಮೇಯರ್ಸ್, ಮ್ಯಾಟ್ ಹೆನ್ರಿ, ಶಮರ್ ಜೋಸೆಫ್ ಮತ್ತು ಯಶ್ ಠಾಕೂರ್ ತಂಡದಿಂದ ಹೊರಬಿದ್ದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:51 pm, Thu, 31 October 24