SRH vs LSG, IPL 2022: ಹೈದರಾಬಾದ್​ಗೆ ಎರಡನೇ ಸೋಲು: ರಾಹುಲ್ ಬಳಗಕ್ಕೆ ಎರಡನೇ ಗೆಲುವು

| Updated By: Vinay Bhat

Updated on: Apr 05, 2022 | 7:31 AM

Lucknow Super Giants vs Sunrisers Hyderabad: ಲಖನೌ ಅಂಕಪಟ್ಟಿಯಲ್ಲಿ ಮೇಲಕ್ಕೇರಿದರೆ ಇತ್ತ ಸನ್​ರೈಸರ್ಸ್​​ ಕೊನೇ ಸ್ಥಾನದಲ್ಲೇ ಮುಂದುವರೆದಿದೆ. ಆವೇಶ್ ಖಾನ್ ಮಾರಕ ಬೌಲಿಂಗ್ ಹೈದರಾಬಾದ್​​ ಸೋಲಿಗೆ ಪ್ರಮುಖ ಕಾರಣವಾಯಿತು. ಇವರು 4 ಓವರ್​​ಗೆ ಕೇವಲ 24 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು.

SRH vs LSG, IPL 2022: ಹೈದರಾಬಾದ್​ಗೆ ಎರಡನೇ ಸೋಲು: ರಾಹುಲ್ ಬಳಗಕ್ಕೆ ಎರಡನೇ ಗೆಲುವು
LSG
Follow us on

ಡಾ. ಡಿವೈ ಪಾಟಿಲ್ ಸ್ಪೋರ್ಟ್ಸ್​ ಅಕಾಡೆಮಿಯಲ್ಲಿ ಸೋಮವಾರ ನಡೆದ ಐಪಿಎಲ್ 2022ರ (IPL 2022) 12ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡದ ವಿರುದ್ಧ ಲಖನೌ ಸೂಪರ್ ಜೇಂಟ್ಸ್ (SRH vs LSG) 12 ರನ್​ಗಳ ರೋಚಕ ಜಯ ಸಾಧಿಸಿದೆ. ಟಿ20 ಕ್ರಿಕೆಟ್​ಗೆ ಹೋಲಿಸಿದರೆ ಇದು ಸಾಧಾರಣ ಟಾರ್ಗೆಟ್ ಆಗಿದ್ದರೂ ಕೆಎಲ್ ರಾಹುಲ್ (KL Rahul) ಪಡೆಯ ಬೊಂಬಾಟ್ ಬೌಲಿಂಗ್ ಪ್ರದರ್ಶನದಿಂದ ವಿಲಿಯಮ್ಸನ್ ಪಡೆ ಸತತ ಎರಡನೇ ಸೋಲು ಕಂಡಿದೆ. ಲಖನೌ ಅಂಕಪಟ್ಟಿಯಲ್ಲಿ ಮೇಲಕ್ಕೇರಿದರೆ ಇತ್ತ ಸನ್​ರೈಸರ್ಸ್​​ ಕೊನೇ ಸ್ಥಾನದಲ್ಲೇ ಮುಂದುವರೆದಿದೆ. ಆವೇಶ್ ಖಾನ್ ಮಾರಕ ಬೌಲಿಂಗ್ ಹೈದರಾಬಾದ್​​ ಸೋಲಿಗೆ ಪ್ರಮುಖ ಕಾರಣವಾಯಿತು. ಇವರು 4 ಓವರ್​​ಗೆ ಕೇವಲ 24 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು.

ಮೊದಲು ಬ್ಯಾಟ್‌ ಮಾಡಿದ ಲಖನೌ ಸೂಪರ್‌ ಜೇಂಟ್ಸ್‌ ತಂಡ ಆರಂಭಿಕ ಆಘಾತ ಕಂಡಿತು. ತಂಡದ ಪರ ಓಪನರ್ ಆಗಿ ಕಣಕ್ಕಿಳಿದ ಕ್ವಿಂಟನ್‌ ಡಿಕಾಕ್‌(1) ಬಹುಬೇಗನೆ ನಿರ್ಗಮಿಸಿದರು. ಪ್ರಮುಖ ಮೂರು ವಿಕೆಟ್‌ಗಳನ್ನು ಲಖನೌ 27 ರನ್‌ಗಳಿಸುವಷ್ಟರಲ್ಲಿ ಕಳೆದುಕೊಂಡಿತ್ತು. ಹೀಗಾಗಿ ಅಲ್ಪ ಮೊತ್ತಕ್ಕೆ ಕುಸಿಯುವ ಬೀತಿಯನ್ನು ಎದುರಿಸಿತ್ತು. ಆದರೆ ನಾಯಕ ರಾಹುಲ್ ಹಾಗೂ ದೀಪಕ್ ಹೂಡಾ ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಿದರು. ಈ ಇಬ್ಬರು ಆಟಗಾರರು ಕೂಡ ತಲಾ ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಕೆಎಲ್ ರಾಹುಲ್ 68 ರನ್‌ಗಳಿಸಿದರೆ, ದೀಪಕ್ ಹೂಡಾ 51 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು.

ಲಖನೌ ಸೂಪರ್ ಜೈಂಟ್ಸ್ ತಂಡದ ಪರವಾಗಿ ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರನಿಂದಲೂ ಉತ್ತಮ ಪ್ರದರ್ಶನ ಬರಲಿಲ್ಲ. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್ ವಾಶಿಂಗ್ಟನ್ ಸುಂದರ್ ಆರಂಭದಲ್ಲಿಯೇ ಎರಡು ವಿಕೆಟ್ ಪಡೆಯುವ ಮೂಲಕ ಎದುರಾಳಿಗೆ ಆಘಾತ ನೀಡಿದರು. ರೊಮಾರಿಯೋ ಶೆಫರ್ಡ್ ಹಾಗೂ ಟಿ ನಟರಾಜನ್ ಕೂಡ ಎರಡು ವಿಕೆಟ್ ಕಬಳಿಸಿ ಮಿಂಚಿದರು. ಲಖನೌ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 169 ರನ್‌ಗಳಿಸಿತು.

ಲಖನೌ ನೀಡಿದ 170 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಅಭಿಷೇಕ್ ಶರ್ಮಾ (13), ನಾಯಕ ಕೇನ್ ವಿಲಿಯಮ್ಸನ್‌ (16) ತಂಡದ ಮೊತ್ತ 38 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. ಮೂರನೇ ವಿಕೆಟ್‌ಗೆ ಜೊತೆಯಾದ ರಾಹುಲ್ ತ್ರಿಪಾಠಿ (44) ಮತ್ತು ಏಡನ್ ಮರ್ಕರಂ (12) ಜೋಡಿ 44 ರನ್‌ ಸೇರಿಸಿ ಭರವಸೆ ಮೂಡಿಸಿತು. ಆದರೆ, 13 ರನ್ ಅಂತರದಲ್ಲಿ ಈ ಇಬ್ಬರೂ ಔಟಾದರು. ಈ ಹಂತದಲ್ಲಿ ರೈಸರ್ಸ್ ಪಡೆ 95 ರನ್‌ ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಗೆಲ್ಲಲು 41 ಎಸೆತಗಳಲ್ಲಿ 75 ರನ್‌ ಗಳಿಸಬೇಕಿದ್ದಾಗ ಜೊತೆಯಾದ ವೆಸ್ಟ್‌ ಇಂಡೀಸ್ ಬ್ಯಾಟರ್‌ ನಿಕೋಲಸ್ ಪೂರನ್‌ ಮತ್ತು ಆಲ್ರೌಂಡರ್ ವಾಷಿಂಗ್ಟನ್ ಸುಂದರ್‌ ಜೋಡಿ ರೈಸರ್ಸ್‌ ತಂಡದ ಜಯದ ಆಸೆ ಚಿಗುರಿಸಿತು. ಇವರಿಬ್ಬರು 48 ರನ್ ಕಲೆಹಾಕಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಆದರೆ, 18ನೇ ಓವರ್‌ನಲ್ಲಿ ದಾಳಿಗಿಳಿದ ಆವೇಶ್‌ ಖಾನ್ ಪಂದ್ಯಕ್ಕೆ ತಿರುವು ನೀಡಿದರು. ಸತತ ಎರಡು ಎಸೆತಗಳಲ್ಲಿ ನಿಕೋಲಸ್ ಪೂರನ್‌ (34) ಮತ್ತು ಅಬ್ದುಲ್ ಸಮದ್ (0) ವಿಕೆಟ್ ಕಬಳಿಸಿದ ಆವೇಶ್, ಪಂದ್ಯವನ್ನು ರೈಸರ್ಸ್‌ ಕೈಯಿಂದ ಕಸಿದುಕೊಂಡರು.

ಕೊನೇ ಓವರ್‌ನಲ್ಲಿ 16 ರನ್‌ ಬೇಕಿದ್ದಾಗ ಸುಂದರ್‌ (18) ಕೂಡ ಔಟಾದಾಗ ಹೈದರಾಬಾದ್ ಗೆಲುವಿನ ಆಸೆ ನುಚ್ಚುನೂರಾಯಿತು. ಅಂತಿಮವಾಗಿ ಕೇನ್‌ ಪಡೆ 9 ವಿಕೆಟ್‌ಗಳನ್ನು ಕಳೆದುಕೊಂಡು 157 ರನ್‌ ಗಳಿಸಲಷ್ಟೇ ಶಕ್ತವಾಯಿತು. ಲಖನೌ ಪರ ಆವೇಶ್ ಖಾನ್ 4 ಓವರ್‌ಗಳಲ್ಲಿ 24 ರನ್ ಬಿಟ್ಟುಕೊಟ್ಟು 4 ವಿಕೆಟ್ ಉರುಳಿಸಿದರು. ಜೇಸನ್ ಹೋಲ್ಡರ್ ಮೂರು ಮತ್ತು ಕ್ರುನಾಲ್ ಪಾಂಡ್ಯ 2 ವಿಕೆಟ್ ಕಿತ್ತು ಮಿಂಚಿದರು.

KL Rahul: ಟಿ20 ಕ್ರಿಕೆಟ್​ನಲ್ಲಿ ಮತ್ತೊಂದು ಸಾಧನೆ ಮಾಡಿದ ಕೆಎಲ್ ರಾಹುಲ್