Maharaja Trophy 2024: ಸತತ 6ನೇ ಸೋಲಿಗೆ ಕೊರಳೊಡ್ಡಿದ ಶಿವಮೊಗ್ಗ; ಕರುಣ್ ಪಡೆಗೆ ಹ್ಯಾಟ್ರಿಕ್ ಗೆಲುವು

Maharaja Trophy 2024: ಮಹಾರಾಜ ಟ್ರೋಫಿಯಲ್ಲಿ ಇಂದು ನಡೆದ 15ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ತಂಡ ನಮ್ಮ ಶಿವಮೊಗ್ಗ ತಂಡವನ್ನು 28 ರನ್​ಗಳಿಂದ ಮಣಿಸುವುದರೊಂದಿಗೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಇತ್ತ ಈ ಪಂದ್ಯದಲ್ಲಾದರೂ ಗೆಲುವಿನ ಖಾತೆ ತೆರೆಯುವ ಇರಾದೆಯಲ್ಲಿದ್ದ ನಮ್ಮ ಶಿವಮೊಗ್ಗ ತಂಡ ಸತತ 6ನೇ ಪಂದ್ಯದಲ್ಲಿ ಸೋಲಿಗೆ ಕೊರಳೊಡ್ಡಿದೆ.

Maharaja Trophy 2024: ಸತತ 6ನೇ ಸೋಲಿಗೆ ಕೊರಳೊಡ್ಡಿದ ಶಿವಮೊಗ್ಗ; ಕರುಣ್ ಪಡೆಗೆ ಹ್ಯಾಟ್ರಿಕ್ ಗೆಲುವು
ಮೈಸೂರ್- ಶಿವಮೊಗ್ಗ

Updated on: Aug 22, 2024 | 6:58 PM

ಮಹಾರಾಜ ಟ್ರೋಫಿಯಲ್ಲಿ ಇಂದು ನಡೆದ 15ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್​ ತಂಡ ನಮ್ಮ ಶಿವಮೊಗ್ಗ ತಂಡವನ್ನು 28 ರನ್​ಗಳಿಂದ ಮಣಿಸುವುದರೊಂದಿಗೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಇತ್ತ ಈ ಪಂದ್ಯದಲ್ಲಾದರೂ ಗೆಲುವಿನ ಖಾತೆ ತೆರೆಯುವ ಇರಾದೆಯಲ್ಲಿದ್ದ ನಮ್ಮ ಶಿವಮೊಗ್ಗ ತಂಡ ಸತತ 6ನೇ ಪಂದ್ಯದಲ್ಲಿ ಸೋಲಿಗೆ ಕೊರಳೊಡ್ಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 179 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನಮ್ಮ ಶಿವಮೊಗ್ಗ ತಂಡ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ತನ್ನ ಸೋಲಿನ ಸರಣಿಯನ್ನು ಮುಂದುವರೆಸಿತು.

ಮತ್ತೆ ಮಿಂಚಿದ ಕರುಣ್

ಪಂದ್ಯದಲ್ಲಿ ಟಾಸ್ ಗೆದ್ದ ನಮ್ಮ ಶಿವಮೊಗ್ಗ ತಂಡ, ಮೈಸೂರು ತಂಡವನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಮೈಸೂರು ತಂಡಕ್ಕೆ ಮೊದಲ ವಿಕೆಟ್​ಗೆ 21 ರನ್​ಗಳ ಜೊತೆಯಾಟ ಸಿಕ್ಕಿತು. ಆರಂಭಿಕ ಕಾರ್ತಿಕ್ 8 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು. ನಂತರ ಜೊತೆಯಾದ ಅಜಿತ್ ಕಾರ್ತಿಕ್ ಹಾಗೂ ನಾಯಕ ಕರುಣ್ ನಾಯರ್ ತಂಡದ ಮೊತ್ತವನ್ನು 50 ರ ಗಡಿ ದಾಟಿಸಿದರು. ಈ ವೇಳೆ ಅಜಿತ್ ಕಾರ್ತಿಕ್ 30 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಸಮಿತ್ ದ್ರಾವಿಡ್ ಬದಲು ಈ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಹರ್ಷಿಲ್ ಧರ್ಮಾನಿಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ.

ಮನೋಜ್ ಹ್ಯಾಟ್ರಿಕ್ ಸಿಕ್ಸ್

ಎಂದಿನಂತೆ ತಂಡದ ಪರ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ನಾಯಕ ಕರುಣ್ ಈ ಪಂದ್ಯದಲ್ಲೂ 45 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಕರುಣ್ ಅವರ ಈ ಇನ್ನಿಂಗ್ಸ್​ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್​ಗಳೂ ಸೇರಿದ್ದವು. ಕರುಣ್ ನಂತರ ಬಂದ ಸುಮಿರ್ ಕುಮಾರ್ 28 ರನ್​ಗಳ ಕಾಣಿಕೆ ನೀಡಿದರೆ, ಮನೋಜ್ ಭಾಂಡಿಗೆ ಹ್ಯಾಟ್ರಿಕ್​ ಸಿಕ್ಸರ್​ಗಳ ಮಳೆಗರೆದು 23 ರನ್​ ಬಾರಿಸಿ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಸುಚಿತ್ 22 ರನ್ ಬಾರಿಸಿ ತಂಡದ ಮೊತ್ತವನ್ನು 179 ರನ್​ಗಳಿಗೆ ಕೊಂಡೊಯ್ದರು.

ಅಭಿನವ್- ನಿಹಾಲ್ ಹೋರಾಟ ವ್ಯರ್ಥ

ಈ ಗುರಿ ಬೆನ್ನಟ್ಟಿದ ಶಿವಮೊಗ್ಗ ತಂಡದ ಆರಂಭ ವಿಶೇಷವೇನೂ ಆಗಿರಲಿಲ್ಲ. ಎಂದಿನಂತೆ ತಂಡ ಮತ್ತದೇ ಬ್ಯಾಟಿಂಗ್ ವಿಭಾಗದ ವೈಫಲ್ಯಕ್ಕೆ ಸಾಕ್ಷಿಯಾಯಿತು. ಅಗ್ರಕ್ರಮಾಂಕದಲ್ಲಿ ನಿಹಾಲ್ ಉಲ್ಲಾಳ್ 46 ರನ್ ಬಾರಿಸಿದ್ದನ್ನು ಬಿಟ್ಟರೆ ಉಳಿದವರಿಂದ ಅದೇ ಸಪ್ಪೆ ಪ್ರದರ್ಶನ ಮುಂದುವರೆಯಿತು. ಕೆಳಕ್ರಮಾಂಕದಲ್ಲಿ ತಂಡಕ್ಕೆ ಗೆಲುವಿನ ಆಸೆ ಹುಟ್ಟಿಸಿದ್ದ ಅಭಿನವ್ ಮನೋಹರ್ ಮತ್ತೊಂದು ಸ್ಫೋಟಕ ಇನ್ನಿಂಗ್ಸ್ ಆಡಿ ತಂಡವನ್ನು ಗೆಲ್ಲಿಸದೆ 46 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡರು. ಉಳಿದವರು ಕೂಡ ಅಭಿನವ್ ಹಿಂದೆಯೇ ಪೆವಿಲಿಯನ್ ಹಾದಿ ಹಿಡಿದರು. ಹೀಗಾಗಿ ನಿಗದಿತ 20 ಓವರ್​ಗಲ್ಲಿ ತಂಡ 9 ವಿಕೆಟ್ ಕಳೆದುಕೊಂಡು 151 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:33 pm, Thu, 22 August 24