
ಕರ್ನಾಟಕದ ಐಪಿಎಲ್ ಎಂದೇ ಖ್ಯಾತಿ ಪಡೆದಿರುವ 4ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 (Maharaja Trophy T20 2025) ಪಂದ್ಯಾವಳಿ ಇದೇ ಆಗಸ್ಟ್ 11 ರಿಂದ ಆರಂಭವಾಗಲಿದೆ. ಈ ಬಾರಿಯೂ ಈ ಪಂದ್ಯಾವಳಿಗೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯವಹಿಸುತ್ತಿದೆ. ಅದಕ್ಕೂ ಮುನ್ನ ಈ ಲೀಗ್ನ ಹರಾಜು ಪ್ರಕ್ರಿಯೆ ಜುಲೈ 15ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೀಗಾಗಿ ಹರಾಜಿಗೂ ಮುನ್ನ ಎಲ್ಲಾ ಐದು ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಅದರಲ್ಲಿ ಕಳೆದ ಬಾರಿಯ ಚಾಂಪಿಯನ್ ಮೈಸೂರು ವಾರಿಯರ್ಸ್ (Mysore Warriors) ತಂಡ ಕೂಡ ಮುಂದಿನ ಆವೃತ್ತಿಗೆ ತಂಡದಲ್ಲಿ ನಾಲ್ವರು ಆಟಗಾರರನ್ನು ಉಳಿಸಿಕೊಂಡಿದ್ದು, ಹರಾಜಿನ ಮೂಲಕ ಉಳಿದ 14 ಆಟಗಾರರನ್ನು ಆಯ್ಕೆ ಮಾಡಲಿದೆ. ಇದರ ಜೊತೆಗೆ ಈ ತಿಂಗಳ ಕೊನೆಯಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಾನ್ವೇಷಣಾ ಕಾರ್ಯಕ್ರಮದ ಮೂಲಕ ಇಬ್ಬರು ಹೊಸ ಪ್ರತಿಭೆಗಳಿಗೆ ಅವಕಾಶ ಒದಗಿಸಲಿದೆ.
ಭಾರತದ ಪ್ರಮುಖ ಅಗರಬತ್ತಿ ತಯಾರಕರಾದ ಎನ್ಆರ್ ಗ್ರೂಪ್ ಅಧೀನದ ಮೈಸೂರು ವಾರಿಯರ್ಸ್ ತಂಡವು ನಾಲ್ಕನೇ ಆವೃತ್ತಿಯ ಮಹಾರಾಜ ಟ್ರೋಫಿ 2025 ಟಿ20 ಪಂದ್ಯಾವಳಿಗಾಗಿ ತನ್ನ ನಾಲ್ಕು ಪ್ರಮುಖ ಆಟಗಾರರಾದ ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ, ಕಾರ್ತಿಕ್ ಸಿಎ ಮತ್ತು ಕಾರ್ತಿಕ್ ಎಸ್‌ಯು ಅವರನ್ನು ತಂಡದಲ್ಲಿಯೇ ಉಳಿಸಿಕೊಂಡಿದ್ದು, ಉಳಿದ ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಿದೆ. ಅಚ್ಚರಿಯ ಸಂಗತಿಯೆಂದರೆ ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕನ್ನಡಿಗ ರಾಹುಲ್ ದ್ರಾವಿಡ್ ಅವರ ಮಗ ಸಮಿತ್ ದ್ರಾವಿಡ್ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಕಳೆದ ಆವೃತ್ತಿಯಲ್ಲಿ ಈ ತಂಡ ಸೇರಿಕೊಂಡಿದ್ದ ಸಮಿತ್ ದ್ರಾವಿಡ್ಗೆ ಹಲವು ಅವಕಾಶಗಳನ್ನು ನೀಡಲಾಯಿತ್ತಾದರೂ, ಅವರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಆದಾಗ್ಯೂ ಸಮಿತ್ ದ್ರಾವಿಡ್ ಅವರನ್ನು ಹರಾಜಿನಲ್ಲಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶ ಮೈಸೂರು ತಂಡಕ್ಕಿದೆ.
ಕರುಣ್ ನಾಯರ್: ಪ್ರಸ್ತುತ ಭಾರತ ಟೆಸ್ಟ್ ತಂಡದಲ್ಲಿ ಆಡುತ್ತಿರುವ ಕರುಣ್ ನಾಯರ್, ಕಳೆದ ಬಾರಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿರುವ ಕರುಣ್, ಹಲವು ವರ್ಷಗಳ ಕಾಲ ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ಕೂಡ ನೀಡಿದ್ದಾರೆ. ಹೀಗಾಗಿ ತಂಡದ ಬ್ಯಾಟಿಂಗ್ ಬೆನ್ನೇಲುಬಾಗಿ ಕರುಣ್ರನ್ನು ತಂಡದಿಂದ ಉಳಿಸಿಕೊಳ್ಳಲಾಗಿದೆ.
ಪ್ರಸಿದ್ಧ್ ಕೃಷ್ಣ: ಕರುಣ್ ನಾಯರ್ ಅವರಂತೆ ಭಾರತ ಟೆಸ್ಟ್ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸದಲ್ಲಿರುವ ಪ್ರಸಿದ್ಧ್ ಕೃಷ್ಣ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ಪರ ಆಡಿದ್ದ ಪ್ರಸಿದ್ಧ್ ಅತ್ಯಧಿಕ 25 ವಿಕೆಟ್ ಉರುಳಿಸಿ ಪರ್ಪಲ್ ಕ್ಯಾಪ್ ಕೂಡ ಗೆದ್ದರು.
ಕಾರ್ತಿಕ್ ಸಿಎ: ಭರವಸೆಯ ಬಲಗೈ ವೇಗದ ಬೌಲರ್ ಮತ್ತು ಬಲಗೈ ಬ್ಯಾಟ್ಸ್ ಮನ್ ಆಗಿರುವ ಕಾರ್ತಿಕ್ ತಮ್ಮ ಚುರುಕಾದ ಲೈನ್ ಮತ್ತು ಕರಾರುವಾಕ್ಕಾದ ವೇಗದ ದಾಳಿಗೆ ಹೆಸರುವಾಸಿಯಾಗಿದ್ದಾರೆ.
ಕಾರ್ತಿಕ್ ಎಸ್‌ಯು: ಮಹಾರಾಜ ಟ್ರೋಫಿಯಲ್ಲಿ ಮೈಸೂರು ವಾರಿಯರ್ಸ್ ಪರವಾಗಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಕಾರ್ತಿಕ್, ತಮ್ಮ ಸ್ಫೋಟಕ ಬ್ಯಾಟಿಂಗ್ ಮತ್ತು ಒತ್ತಡದ ಸಂದರ್ಭವನ್ನು ನಿಭಾಯಿಸುವ ಶಾಂತ ಗುಣದ ಮೂಲಕ 2024ರ ಫೈನಲ್ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸೇರಿದಂತೆ ಹಲವು ಮನ್ನಣೆಗಳನ್ನು ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Mon, 14 July 25