IND vs PAK: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ದೊಡ್ಡ ಎಡವಟ್ಟು ಮಾಡಿದ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Sep 03, 2022 | 3:59 PM

India vs Pakistan: ಟೀಮ್ ಇಂಡಿಯಾದಲ್ಲಿ ಈಗಾಗಲೇ ಇಬ್ಬರು ಆಲ್​ರೌಂಡರ್​ಗಳು ಬೆಂಚ್ ಕಾಯುತ್ತಿದ್ದಾರೆ. ಅಂದರೆ ತಂಡದಲ್ಲಿರುವ ರವಿಚಂದ್ರನ್ ಅಶ್ವಿನ್ ಹಾಗೂ ದೀಪಕ್ ಹೂಡಾಗೆ ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಸಿಕ್ಕಿರಲಿಲ್ಲ.

IND vs PAK: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ದೊಡ್ಡ ಎಡವಟ್ಟು ಮಾಡಿದ ಟೀಮ್ ಇಂಡಿಯಾ
Team India
Follow us on

Asia Cup 2022: ಭಾರತ-ಪಾಕಿಸ್ತಾನ್ (India vs Pakistan) ನಡುವಣ ಹೈವೋಲ್ಟೇಜ್ ಪಂದ್ಯಕ್ಕಾಗಿ ಕ್ಷಣಗಣನೆ ಶುರುವಾಗಿದೆ. ನಾಳೆ (ಸೆ.4) ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಆಲ್​ರೌಂಡರ್ ರವೀಂದ್ರ ಜಡೇಜಾ (Ravindra Jadeja) ಕಣಕ್ಕಿಳಿಯುತ್ತಿಲ್ಲ ಎಂಬುದು ವಿಶೇಷ. ಮೊಣಕಾಲಿನ ಗಾಯದ ಕಾರಣ ಜಡೇಜಾ ಏಷ್ಯಾಕಪ್​ನಿಂದ ಹೊರಗುಳಿದಿದ್ದಾರೆ. ಇತ್ತ ಬದಲಿ ಆಟಗಾರನಾಗಿ ಆಲ್​ರೌಂಡರ್ ಅಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ. ಆದರೆ ಟೀಮ್ ಇಂಡಿಯಾ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿ ದೊಡ್ಡ ಎಡವಟ್ಟೊಂದನ್ನು ಮಾಡಿಕೊಂಡಿದೆ. ಏಕೆಂದರೆ ರವೀಂದ್ರ ಜಡೇಜಾ ತಂಡದಿಂದ ಹೊರಬೀಳುತ್ತಿದ್ದಂತೆ ಟೀಮ್ ಇಂಡಿಯಾ ಮೀಸಲು ಆಟಗಾರರ ಪಟ್ಟಿಯಿಂದ ಅಕ್ಷರ್ ಪಟೇಲ್ ಅವರನ್ನು ಆಯ್ಕೆ ಮಾಡಿಕೊಂಡಿತು. ಆದರೆ ಬದಲಿ ಆಟಗಾರನಾಗಿ ಟೀಮ್ ಇಂಡಿಯಾಗೆ ಬೇಕಿದ್ದದ್ದು ಆಲ್​ರೌಂಡರ್ ಅಲ್ಲ, ಬದಲಾಗಿ ವೇಗಿ ಎಂಬುದು ಮರೆತಂತಿದೆ.

ಏಕೆಂದರೆ ತಂಡದಲ್ಲಿ ಕೇವಲ ಮೂವರು ವೇಗಿಗಳು ಮಾತ್ರ ಇದ್ದಾರೆ. ಅದರಲ್ಲಿ ಭುವನೇಶ್ವರ್ ಕುಮಾರ್ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಅವೇಶ್ ಖಾನ್ ಹಾಗೂ ಅರ್ಷದೀಪ್ ಸಿಂಗ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅದರಲ್ಲೂ ಹಾಂಗ್ ಕಾಂಗ್ ವಿರುದ್ದದ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 4 ಓವರ್​ಗಳಲ್ಲಿ 44 ರನ್ ನೀಡಿದ್ದರೆ, ಅವೇಶ್ ಖಾನ್ 4 ಓವರ್​ಗಳಲ್ಲಿ 53 ರನ್​ ಹೊಡೆಸಿಕೊಂಡಿದ್ದರು. ಇತ್ತ ಟೀಮ್ ಇಂಡಿಯಾದಲ್ಲಿ ವೇಗಿಗಳ ಬದಲಾವಣೆಗೆ ಬೇರೆ ಯಾವುದೇ ಬೌಲರ್​ಗಳ ಆಯ್ಕೆಯಿಲ್ಲ. ಹೀಗಾಗಿ ರವೀಂದ್ರ ಜಡೇಜಾ ಸ್ಥಾನದಲ್ಲಿ ಟೀಮ್ ಇಂಡಿಯಾ ವೇಗಿಯೊಬ್ಬರನ್ನು ಆಯ್ಕೆ ಮಾಡಬೇಕಿತ್ತು. ಮೀಸಲು ಆಟಗಾರರ ಪಟ್ಟಿಯಲ್ಲಿ ವೇಗಿಯಾಗಿ ದೀಪಕ್ ಚಹರ್ ಇದ್ದರೂ, ಟೀಮ್ ಮ್ಯಾನೇಜ್ಮೆಂಟ್ ಅಕ್ಷರ್ ಪಟೇಲ್​ಗೆ ಮಣೆ ಹಾಕಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಟೀಮ್ ಇಂಡಿಯಾದಲ್ಲಿ ಈಗಾಗಲೇ ಇಬ್ಬರು ಆಲ್​ರೌಂಡರ್​ಗಳು ಬೆಂಚ್ ಕಾಯುತ್ತಿದ್ದಾರೆ. ಅಂದರೆ ತಂಡದಲ್ಲಿರುವ ರವಿಚಂದ್ರನ್ ಅಶ್ವಿನ್ ಹಾಗೂ ದೀಪಕ್ ಹೂಡಾಗೆ ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಸಿಕ್ಕಿರಲಿಲ್ಲ. ಅದರಲ್ಲೂ ಜಡೇಜಾ ಸ್ಥಾನದಲ್ಲಿ ಹೂಡಾರನ್ನು ಕಣಕ್ಕಳಿಸುವ ಆಯ್ಕೆ ಟೀಮ್ ಇಂಡಿಯಾ ಮುಂದಿದೆ.
ಹೀಗಾಗಿ ರವೀಂದ್ರ ಜಡೇಜಾ ಬದಲಿಗೆ ವೇಗಿ ದೀಪಕ್ ಚಹರ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿಕೊಳ್ಳುವ ಉತ್ತಮ ಅವಕಾಶವಿತ್ತು. ಈ ಮೂಲಕ ಅವೇಶ್ ಖಾನ್​ರನ್ನು ತಂಡದಿಂದ ಕೈ ಬಿಟ್ಟು ಚಹರ್​ಗೆ ಪ್ಲೇಯಿಂಗ್ ಇಲೆವೆನ್​ನಲ್ಲಿ ಅವಕಾಶ ನೀಡಬಹುದಿತ್ತು.

ಇದನ್ನೂ ಓದಿ
Team India: ಟೀಮ್ ಇಂಡಿಯಾ ಆಟಗಾರರ ಜೊತೆ ಕಾಣಿಸಿಕೊಂಡ ಸ್ಟಾರ್ ಕ್ರಿಕೆಟಿಗನ ಮಗ..!
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್

ಏಕೆಂದರೆ ಪಾಕಿಸ್ತಾನ್ ವಿರುದ್ದದ ಮೊದಲ ಪಂದ್ಯದಲ್ಲಿ ಅವೇಶ್ ಖಾನ್ ದುಬಾರಿಯಾಗಿದ್ದರು. ಕೇವಲ 2 ಓವರ್ ಬೌಲಿಂಗ್ ಮಾಡಿದ್ದ ಯುವ ವೇಗಿ 19 ರನ್​ಗಳನ್ನು ಬಿಟ್ಟುಕೊಟ್ಟಿದ್ದರು. ಇನ್ನು ಹಾಂಗ್ ಕಾಂಗ್ ವಿರುದ್ದ ಕೂಡ 53 ರನ್ ಚಚ್ಚಿಸಿಕೊಂಡಿದ್ದರು. ಹೀಗಾಗಿ ಟೀಮ್ ಇಂಡಿಯಾ ಬದಲಿ ವೇಗಿಯನ್ನು ಕಣಕ್ಕಿಳಿಸುವ ಆಯ್ಕೆಯನ್ನು ಸೃಷ್ಟಿಸಬೇಕಿತ್ತು. ಆದರೆ ರವೀಂದ್ರ ಜಡೇಜಾ ಬದಲು ಅಕ್ಷರ್ ಪಟೇಲ್ ರನ್ನು ಆಯ್ಕೆ ಮಾಡಿ ಟೀಮ್ ಮ್ಯಾನೇಜ್ಮೆಂಟ್ ದೊಡ್ಡ ತಪ್ಪು ಮಾಡಿದೆ.

ಇಲ್ಲಿ ದೀಪಕ್ ಚಹರ್​ಗೆ ಅವಕಾಶ ಕಲ್ಪಿಸುವ ಮೂಲಕ ವೇಗದ ಬೌಲರ್​ಗಳಲ್ಲಿ ಒಬ್ಬರನ್ನು ಬದಲಿಸಿಕೊಳ್ಳುವ ಉತ್ತಮ ಆಯ್ಕೆಯಿತ್ತು. ಆದರೀಗ ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದಿರುವ ಕಾರಣ ಟೀಮ್ ಇಂಡಿಯಾದ ವೇಗದ ಬೌಲಿಂಗ್​ನಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ. ಏಕೆಂದರೆ ಬದಲಿ ವೇಗಿಯಾಗಿ ಟೀಮ್ ಇಂಡಿಯಾದಲ್ಲಿ 4ನೇ ಬೌಲರೇ ಇಲ್ಲ.

ಇತ್ತ ಪಾಕ್ ವಿರುದ್ದದ ಪಂದ್ಯಕ್ಕೂ ಮುನ್ನ ಬೌಲರ್​ ಆಯ್ಕೆಗೆ ಸಿಕ್ಕ ಅವಕಾಶವನ್ನು ಟೀಮ್ ಇಂಡಿಯಾ ಸರಿಯಾಗಿ ಬಳಸಿಕೊಂಡಿಲ್ಲ ಎಂದೇ ಹೇಳಬಹುದು. ಅದರಲ್ಲೂ ದೀಪಕ್ ಚಹರ್ ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯವನ್ನು ಸಹ ಹೊಂದಿದ್ದಾರೆ. ಇದಾಗ್ಯೂ ಅವರನ್ನು ಕೈ ಬಿಟ್ಟು ಟೀಮ್ ಇಂಡಿಯಾ ದೊಡ್ಡ ಎಡವಟ್ಟು ಮಾಡಿಕೊಂಡಿರುವುದು ಸ್ಪಷ್ಟ. ಈ ಒಂದು ಎಡವಟ್ಟು ಟೀಮ್ ಇಂಡಿಯಾ ಪಾಲಿಗೆ ದುಬಾರಿಯಾಗಲಿದೆಯಾ ಎಂಬುದು ಮುಂದಿನ ಪಂದ್ಯಗಳಲ್ಲಿ ಗೊತ್ತಾಗಲಿದೆ.

ಟೀಮ್ ಇಂಡಿಯಾ ಹೀಗಿದೆ:

ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ದಿನೇಶ್‌ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಅವೇಶ್‌ ಖಾನ್‌, ಯುಜ್ವೇಂದ್ರ ಚಹಲ್‌, ಆರ್‌ ಅಶ್ವಿನ್‌, ರವಿ ಬಿಷ್ಣೋಯ್‌.

ಮೀಸಲು ಆಟಗಾರರು: ದೀಪಕ್‌ ಚಹರ್‌ ಮತ್ತು ಶ್ರೇಯಸ್‌ ಅಯ್ಯರ್‌.