ಪ್ರಸ್ತುತ ನಡೆಯುತ್ತಿರುವ ರಣಜಿಯ ಟ್ರೋಫಿಯ ಮೊದಲ ಸುತ್ತಿನಲ್ಲಿ ಕೊನೆಗೂ ಕರ್ನಾಟಕ ತಂಡ ತನ್ನ ಗೆಲುವಿನ ಖಾತೆ ತೆರೆದಿದೆ. ಬಿಹಾರದ ಮೊಯಿನ್-ಉಲ್-ಹಕ್ ಸ್ಟೇಡಿಯಂನಲ್ಲಿ ನಡೆದ ಕರ್ನಾಟಕ ಹಾಗೂ ಬಿಹಾರ ನಡುವಿನ ಸಿ ಗುಂಪಿನ ಪಂದ್ಯದಲ್ಲಿ ಆತಿಥೇಯ ಬಿಹಾರ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದ ಕರ್ನಾಟಕ ತಂಡ ಪ್ರಸಕ್ತ ಸೀಸನ್ನಲ್ಲಿ ಮೊದಲ ಗೆಲುವನ್ನು ದಾಖಲಿಸಿತು. ತಂಡದ ಪರ ಬ್ಯಾಟಿಂಗ್ನಲ್ಲಿ ಮಿಂಚಿದ ಮಯಾಂಕ್ ಅಗರ್ವಾಲ್ ಶತಕದ ಇನ್ನಿಂಗ್ಸ್ ಆಡಿದರೆ, ಬೌಲಿಂಗ್‌ನಲ್ಲಿ ಎರಡೂ ಇನ್ನಿಂಗ್ಸ್ಗಳಲ್ಲಿ ಕಮಾಲ್ ಮಾಡಿದ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಒಟ್ಟು 8 ವಿಕೆಟ್ ಕಬಳಿಸಿದರು. ಈ ಗೆಲುವಿನೊಂದಿಗೆ ಕರ್ನಾಟಕ ತಂಡ ಆಡಿರುವ ಮೂರು ಪಂದ್ಯಗಳಲ್ಲಿ 1 ಗೆಲುವಿನೊಂದಿಗೆ 8 ಅಂಕ ಕಲೆಹಾಕಿ ಸಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಬಿಹಾರ ತಂಡ ಮೊದಲ ಇನ್ನಿಂಗ್ಸ್ನಲ್ಲಿ 143 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ಶರ್ಮನ್ ನಿಗ್ರೋಧ್ ಅತ್ಯಧಿಕ 60 ರನ್ಗಳ ಇನ್ನಿಂಗ್ಸ್ ಆಡಿದರೆ, ಬಿಪಿನ್ ಸೌರಭ್ 31 ರನ್ ಕಲೆಹಾಕಿದರು. ಕರ್ನಾಟಕ ಪರ ಶ್ರೇಯಸ್ ಗೋಪಾಲ್ 4 ವಿಕೆಟ್ ಪಡೆದರೆ, ಮೊಹ್ಸಿನ್ ಖಾನ್ 3 ವಿಕೆಟ್ ಪಡೆದರು.
ಇತ್ತ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ನಾಯಕನ ಶತಕದ ಇನ್ನಿಂಗ್ಸ್ ಪ್ರಬಲ ಮುನ್ನಡೆ ಸಾಧಿಸುವಂತೆ ಮಾಡಿತು. ತಮ್ಮ ಇನ್ನಿಂಗ್ಸ್ನಲ್ಲಿ 131 ಎಸೆತಗಳನ್ನು ಎದುರಿಸಿ ಮಯಾಂಕ್ 12 ಬೌಂಡರಿಗಳ ಸಹಿತ 105 ರನ್ ಗಳಿಸಿ ಔಟಾದರು. ನಾಯಕನಿಗೆ ಸಾಥ್ ನೀಡಿದ ಮನಿಶ್ ಪಾಂಡೆ ಕೂಡ 56 ರನ್ಗಳ ಅರ್ಧಶತಕದ ಇನ್ನಿಂಗ್ಸ್ ಆಡಿದರೆ, ಅಭಿನವ್ ಮನೋಹರ್ 37 ರನ್ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ 287 ರನ್ ಕಲೆಹಾಕಿ, 140 ರನ್ಗಳ ಮುನ್ನಡೆ ಪಡೆದುಕೊಂಡಿತು.
ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬಿಹಾರ ತಂಡ 212 ರನ್‌ಗಳಿಗೆ ತನ್ನ ಎರಡನೇ ಇನ್ನಿಂಗ್ಸ್ ಮುಗಿಸಿ ಕರ್ನಾಟಕದ ಗೆಲುವಿಗೆ 69 ರನ್ಗಳ ಗುರಿ ನೀಡಿತು. ಎರಡನೇ ಇನ್ನಿಂಗ್ಸ್ನಲ್ಲಿ ಸಕೀಬುಲ್ ಗನಿ 130 ರನ್ಗಳ ಶತಕದ ಇನ್ನಿಂಗ್ಸ್ ಆಡಿದರೆ, ಬಾಬುಲ್ ಕುಮಾರ್ 44 ರನ್ಗಳ ಕಾಣಿಕೆ ನೀಡಿದರು. ಇತ್ತ ಕರ್ನಾಟಕದ ಪರ ಶ್ರೇಯಸ್ ಗೋಪಾಲ್ ಮತ್ತೆ 4 ವಿಕೆಟ್ ಪಡೆದರೆ, ವೈಶಾಖ್ ವಿಜಯ್ಕುಮಾರ್ 3 ವಿಕೆಟ್ ಪಡೆದರು. ಅಂತಿಮವಾಗಿ 69 ರನ್ಗಳ ಗುರಿ ಬೆನ್ನಟ್ಟಿದ ಕರ್ನಾಟಕ 2 ವಿಕೆಟ್ ಕಳೆದುಕೊಂಡು ಜಯದ ನಗೆಬೀರಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ