IND vs NZ: ಕಿವೀಸ್ ಕಿವಿ ಹಿಂಡಿ ದಾಖಲೆಯ ಏಕದಿನ ಶತಕ ಸಿಡಿಸಿದ ಸ್ಮೃತಿ ಮಂಧಾನ
Smriti Mandhana: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಹಾಗೂ ಭಾರತ ಮಹಿಳಾ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ತಮ್ಮ ಏಕದಿನ ವೃತ್ತಿಜೀವನದ 8ನೇ ಶತಕ ಸಿಡಿಸಿ ಮಿಂಚಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಹಾಗೂ ಭಾರತ ಮಹಿಳಾ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ತಮ್ಮ ಏಕದಿನ ವೃತ್ತಿಜೀವನದ 8ನೇ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದ ಮೂಲಕ ಸ್ಮೃತಿ, ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ಅಧಿಕ ಶತಕ ಸಿಡಿಸಿದ ಭಾರತೀಯರ ಪಟ್ಟಿಯಲ್ಲಿ ಹಿಂದಿಕ್ಕಿದ್ದರು. ಹಾಗೆಯೇ ಟೀಂ ಇಂಡಿಯಾ ಪರ ಅತಿ ಹೆಚ್ಚು ಏಕದಿನ ಶತಕ ಬಾರಿಸಿದ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ಸ್ಮೃತಿ ತಡವಾದರೂ ಮತ್ತೆ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ. ಏಕದಿನ ವಿಶ್ವಕಪ್ ದೃಷ್ಟಿಯಿಂದ ಸ್ಮೃತಿ ಮಂದಾನ ಫಾರ್ಮ್ಗೆ ಬಂದಿರುವ ಟೀಂ ಇಂಡಿಯಾಕ್ಕೆ ಶುಭ ಸುದ್ದಿಯಾಗಿದೆ.
ಮೊದಲ ಮಹಿಳಾ ಕ್ರಿಕೆಟರ್ ಮಂಧಾನ
ನ್ಯೂಜಿಲೆಂಡ್ ವಿರುದ್ಧ ಶತಕ ಸಿಡಿಸುವ ಮೂಲಕ ಸ್ಮೃತಿ ಮಂಧಾನ ಮತ್ತೊಂದು ದೊಡ್ಡ ದಾಖಲೆ ಬರೆದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಶತಕ ಸಿಡಿಸಿದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಮಂಧಾನ ಪಾತ್ರರಾಗಿದ್ದಾರೆ. ಮಂಧಾನ ಅವರ ಈ ಶತಕದ ಇನ್ನೊಂದು ವಿಶೇಷತೆ ಏನೆಂದರೆ, ಮಂಧಾನ ಅವರ ಈ ಶತಕದ ಇನ್ನಿಂಗ್ಸ್ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದಿರುವುದಲ್ಲದೆ, ಸರಣಿಯನ್ನು 2-1 ರಿಂದ ಗೆಲ್ಲಲು ಸಹಾಯ ಮಾಡಿದೆ. 73 ಎಸೆತಗಳಲ್ಲಿ 4 ಬೌಂಡರಿ ಸಹಿತ ಅರ್ಧಶತಕ ಪೂರೈಸಿದ್ದ ಮಂಧಾನ, ಅರ್ಧಶತಕ ಪೂರೈಸಿದ ನಂತರ, 121 ಎಸೆತಗಳಲ್ಲಿ 6 ಬೌಂಡರಿ ಸಹಿತ ತಮ್ಮ ಶತಕವನ್ನು ಪೂರ್ಣಗೊಳಿಸಿದರು.
ಶತಕದ ಜೊತೆಯಾಟ
ತಮ್ಮ ಶತಕದ ಇನ್ನಿಂಗ್ಸ್ ಜೊತೆಗೆ ಮಂಧಾನ, ನಾಯಕಿ ಹರ್ಮನ್‌ಪ್ರೀತ್ ಕೌರ್ ಜೊತೆ ಅತ್ಯುತ್ತಮ ಜೊತೆಯಾಟವನ್ನು ಕೂಡ ಮಾಡಿದರು. ಮಂಧಾನ ಮತ್ತು ಹರ್ಮನ್‌ಪ್ರೀತ್ ಕೌರ್ ನಡುವೆ 116 ಎಸೆತಗಳಲ್ಲಿ 118 ರನ್‌ಗಳ ಜೊತೆಯಾಟವಿತ್ತು. ಈ ಜೊತೆಯಾಟದ ಆಧಾರದಲ್ಲಿ ಟೀಂ ಇಂಡಿಯಾ ಈ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತು.
ಪಂದ್ಯ ಹೀಗಿತ್ತು
ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ.. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಪೂರ್ಣ 50 ಓವರ್ಗಳನ್ನು ಆಡದೆ 49.3 ಓವರ್ಗಳಲ್ಲಿ ಆಲೌಟ್ ಆಗುವ ಮೂಲಕ 233 ರನ್ ಕಲೆಹಾಕಿತು. ತಂಡದ ಪರ ಬ್ರೂಕ್ ಹ್ಯಾಲಿಡೇ 86 ರನ್‌ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರೆ, ಜಾರ್ಜಿಯಾ ಪ್ಲಿಮ್ಮರ್ ಕೂಡ 39 ರನ್‌ಗಳ ಕಾಣಿಕೆ ನೀಡಿದರು. ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ದೀಪ್ತಿ ಗರಿಷ್ಠ 3 ವಿಕೆಟ್ ಪಡೆದರೆ, ಪ್ರಿಯಾ ಮಿಶ್ರ 2 ವಿಕೆಟ್ ಪಡೆದರು.
ಈ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಶೆಫಾಲಿ ವರ್ಮಾ ಬೇಗನೇ ಔಟಾದರು. ಇದಾದ ಬಳಿಕ ಮಂಧಾನ, ಯಾಸ್ತಿಕಾ ಭಾಟಿಯಾ ಅವರೊಂದಿಗೆ 104 ಎಸೆತಗಳಲ್ಲಿ 76 ರನ್ ಸೇರಿಸಿದರು. ಭಾಟಿಯಾ ಔಟಾದ ನಂತರ ನಾಯಕಿ ಹರ್ಮನ್‌ಪ್ರೀತ್ ಕೌರ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಪಂದ್ಯವನ್ನು ಸಂಪೂರ್ಣವಾಗಿ ಭಾರತದ ಪರವಾಗಿ ತಿರುಗಿಸಿದರು. ಹರ್ಮನ್‌ಪ್ರೀತ್ ಕೇವಲ 54 ಎಸೆತಗಳಲ್ಲಿ 59 ರನ್ ಗಳಿಸಿ ಅಜೇಯರಾಗಿ ಪೆವಿಲಿಯನ್‌ಗೆ ಮರಳುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:27 pm, Tue, 29 October 24