ಭಾರತದ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೇ ನ್ಯೂಝಿಲೆಂಡ್​ಗೆ ಆಘಾತ

India vs New Zealand: India vs New zealand t20 series: ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಟಿ20 ಸರಣಿಯು ಜನವರಿ 21 ರಿಂದ ಶುರುವಾಗಲಿದೆ. ಈ ಸರಣಿಯಲ್ಲಿ ಉಭಯ ತಂಡಗಳು ಒಟ್ಟು 5 ಪಂದ್ಯಗಳನ್ನಾಡಲಿದೆ. ಈ ಸರಣಿಯ ಮುಕ್ತಾಯದ ಬೆನ್ನಲ್ಲೇ ಎರಡೂ ತಂಡಗಳು ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಲಿವೆ.

ಭಾರತದ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೇ ನ್ಯೂಝಿಲೆಂಡ್​ಗೆ ಆಘಾತ
New Zealand

Updated on: Jan 20, 2026 | 2:24 PM

ಭಾರತ ಮತ್ತು ನ್ಯೂಝಿಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯು ನಾಳೆಯಿಂದ (ಜ.21) ಶುರುವಾಗಲಿದೆ. ಈ ಸರಣಿ ಆರಂಭಕ್ಕೂ ಮುನ್ನವೇ ಕಿವೀಸ್ ಪಡೆಗೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಮೈಕೆಲ್​ ಬ್ರೇಸ್​ವೆಲ್ ಇಡೀ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

ಇಂದೋರ್​ನಲ್ಲಿ ನಡೆದ ಭಾರತದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಮೈಕೆಲ್ ಬ್ರೇಸ್​ವೆಲ್ ಕಾಲು ನೋವಿಗೆ ಒಳಗಾಗಿ ಮೈದಾನ ತೊರೆದಿದ್ದರು. ಇದೀಗ ಈ ಗಾಯದ ಕಾರಣ ಸಂಪೂರ್ಣ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಮೈಕೆಲ್ ಬ್ರೇಸ್​​ವೆಲ್ ಅಲಭ್ಯತೆಯು ನ್ಯೂಝಿಲೆಂಡ್ ಪಾಲಿಗೆ ಹಿನ್ನಡೆಯಾಗುವುದರಲ್ಲಿ ಡೌಟೇ ಇಲ್ಲ. ಏಕೆಂದರೆ ಭಾರತದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನಾಯಕನಾಗಿ ಕಣಕ್ಕಿಳಿದಿದ್ದೇ ಬ್ರೇಸ್​ವೆಲ್.

ಭಾರತೀಯ ಬ್ಯಾಟರ್​ಗಳ ವಿರುದ್ಧ ರಣತಂತ್ರ ಹೆಣೆಯುವಲ್ಲಿ ಯಶಸ್ವಿಯಾಗಿದ್ದ ಬ್ರೇಸ್​ವೆಲ್ ಟಿ20 ಸರಣಿಯಲ್ಲಿ ನ್ಯೂಝಿಲೆಂಡ್ ಪಾಲಿಗೆ ಅನಿವಾರ್ಯವಾಗಿತ್ತು. ಆದರೀಗ ಸರಣಿ ಆರಂಭಕ್ಕೆ ದಿನಗಳಿರುವಾಗ ಅವರು ಐದೂ ಮ್ಯಾಚ್​ಗಳಿಂದಲೂ ಹೊರಗುಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಮೈಕೆಲ್ ಬ್ರೇಸ್​ವೆಲ್ ಹೊರಗುಳಿದರೆ ನ್ಯೂಝಿಲೆಂಡ್ ಪರ ಮಧ್ಯಮ ಕ್ರಮಾಂಕದಲ್ಲಿ ಹೇಮ್ಸ್ ನೀಶಮ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಏಕೆಂದರೆ ನೀಶಮ್ ಕೂಡ ಆಲ್​ರೌಂಡರ್ ಆಟಗಾರ. ಅದರಲ್ಲೂ ಅನುಭವಿ ಆಟಗಾರ. ಹೀಗಾಗಿ ಮೊದಲ ಟಿ20 ಪಂದ್ಯದಲ್ಲಿ ಬ್ರೇಸ್​ವೆಲ್ ಬದಲಿಗೆ ಜೇಮ್ಸ್ ನೀಶಮ್​ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ನ್ಯೂಝಿಲೆಂಡ್ ಟಿ20 ತಂಡ: ಮಿಚೆಲ್ ಸ್ಯಾಂಟ್ನರ್ (ನಾಯಕ), ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ (ವಿಕೆಟ್ ಕೀಪರ್), ಜೇಕಬ್ ಡಫಿ, ಝ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಬೆವೊನ್ ಜೇಕಬ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಟಿಮ್ ರಾಬಿನ್ಸನ್, ಇಶ್ ಸೋಧಿ, ಮೈಕೆಲ್ ಬ್ರೇಸ್‌ವೆಲ್ (ಡೌಟ್).

ಇದನ್ನೂ ಓದಿ: ಸೌತ್ ಆಫ್ರಿಕಾ ತಂಡಕ್ಕೆ 329 ರನ್​ಗಳ ವಿಶ್ವ ದಾಖಲೆಯ ವಿಜಯ

ಭಾರತ vs ನ್ಯೂಝಿಲೆಂಡ್ ಟಿ20 ಸರಣಿ ವೇಳಾಪಟ್ಟಿ

  • ಮೊದಲ ಟಿ20 ಪಂದ್ಯ – ಜನವರಿ 21 – ನಾಗ್ಪುರ – ರಾತ್ರಿ 7:00 ಗಂಟೆಗೆ ಶುರು
  • ಎರಡನೇ ಟಿ20 ಪಂದ್ಯ – ಜನವರಿ 23 – ರಾಯ್ಪುರ – ರಾತ್ರಿ 7:00 ಗಂಟೆಗೆ ಶುರು
  • ಮೂರನೇ ಟಿ20 ಪಂದ್ಯ – ಜನವರಿ 25 – ಗುವಾಹಟಿ – ರಾತ್ರಿ 7:00 ಗಂಟೆಗೆ ಶುರು
  • ನಾಲ್ಕನೇ ಟಿ20 ಪಂದ್ಯ – ಜನವರಿ 28 – ವಿಶಾಖಪಟ್ಟಣ – ರಾತ್ರಿ 7:00 ಗಂಟೆಗೆ ಶುರು
  • ಐದನೇ ಟಿ20 ಪಂದ್ಯ – ಜನವರಿ 31 – ತಿರುವನಂತಪುರಂ – ರಾತ್ರಿ 7:00 ಗಂಟೆಗೆ ಶುರು.