ಐರ್ಲೆಂಡ್ ಗ್ರೂಪ್ ಬದಲಿಸಿ… ಬಾಂಗ್ಲಾದೇಶ್ ತಂಡದ ಹೊಸ ಬೇಡಿಕೆ!
T20 World Cup 2026: ಬಾಂಗ್ಲಾದೇಶ ತಂಡವು ಮುಂಬರುವ ಟಿ20 ವಿಶ್ವಕಪ್ನ ಮೊದಲ ಸುತ್ತಿನಲ್ಲಿ ಒಟ್ಟು 4 ಪಂದ್ಯಗಳನ್ನಾಡಲಿದೆ. ಮೊದಲ ಮೂರು ಪಂದ್ಯಗಳು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಿಗದಿಯಾದರೆ, ಕೊನೆಯ ಪಂದ್ಯವನ್ನು ಮುಂಬೈನಲ್ಲಿ ಆಡಬೇಕಿದೆ. ಆದರೆ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಈ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಗೆ ಐಸಿಸಿಗೆ ಮನವಿ ಮಾಡಿದೆ.

ಟಿ20 ವಿಶ್ವಕಪ್ ಆರಂಭಕ್ಕೆ ಇನ್ನು ಉಳಿದಿರುವುದು ಕೆಲವೇ ದಿನಗಳು ಮಾತ್ರ. ಇದಾಗ್ಯೂ ಬಾಂಗ್ಲಾದೇಶ್ ತಂಡ ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆಯಾ ಎಂಬುದು ಖಚಿತವಾಗಿಲ್ಲ. ಏಕೆಂದರೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ತನ್ನ ಪಂದ್ಯಗಳನ್ನು ಸ್ಥಳಾಂತರ ಮಾಡುವಂತೆ ಐಸಿಸಿಗೆ ಮನವಿ ಮಾಡಿದೆ. ಐಸಿಸಿ ಈ ಮನವಿಯನ್ನು ತಿರಸ್ಕರಿಸಿದರೂ ಬಿಸಿಬಿ ತನ್ನ ನಿಲುವನ್ನು ಬದಲಿಸಿಲ್ಲ. ಇದೀಗ ಐರ್ಲೆಂಡ್ ತಂಡದ ಗ್ರೂಪ್ ಬದಲಿಸಿ ಪಂದ್ಯವಾಡಲು ಅವಕಾಶ ಮಾಡಿಕೊಡುವಂತೆ ಬಾಂಗ್ಲಾದೇಶ್ ಕ್ರಿಕೆಟ್ ಮಂಡಳಿ ಹೊಸ ಬೇಡಿಕೆಯನ್ನಿಟ್ಟಿದೆ.
ಮುಂಬರುವ ಟಿ20 ವಿಶ್ವಕಪ್ನಲ್ಲಿ ಐರ್ಲೆಂಡ್ ತಂಡವು ಗ್ರೂಪ್-2 ನಲ್ಲಿ ಕಾಣಿಸಿಕೊಂಡಿದೆ. ಅತ್ತ ಬಾಂಗ್ಲಾದೇಶ್ ತಂಡವಿರುವುದು ಗ್ರೂಪ್- 3 ನಲ್ಲಿ. ಇದೀಗ ನಮ್ಮನ್ನು ಗ್ರೂಪ್-2 ಕ್ಕೆ ಸೇರಿಸಿ ಐರ್ಲೆಂಡ್ ತಂಡವನ್ನು ಗ್ರೂಪ್-3 ನಲ್ಲಿ ಕಣಕ್ಕಿಳಿಯುವಂತೆ ಮಾಡಬೇಕೆಂದು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಐಸಿಸಿಗೆ ಮನವಿ ಮಾಡಿದೆ.
ಬಾಂಗ್ಲಾದೇಶ್ ಪ್ಲ್ಯಾನ್ ಏನು?
ಭಾರತದಲ್ಲಿನ ತನ್ನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಆಗ್ರಹಿಸುತ್ತಿದೆ. ಇದಾಗ್ಯೂ ಬಾಂಗ್ಲಾ ಬೇಡಿಕೆಗೆ ಐಸಿಸಿ ಸಮ್ಮತಿ ಸೂಚಿಸಿಲ್ಲ. ಇದೀಗ ಗ್ರೂಪ್ ಸ್ವಾಪ್ ಮಾಡುವಂತೆ ಬಿಸಿಬಿ ಹೊಸ ಬೇಡಿಕೆಯನ್ನಿಟ್ಟಿದೆ.
ಈ ಬೇಡಿಕೆಗೆ ಮುಖ್ಯ ಕಾರಣ, ಗ್ರೂಪ್-2 ನಲ್ಲಿರುವ ಐರ್ಲೆಂಡ್ ತಂಡವು ತನ್ನೆಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡುತ್ತಿರುವುದು. ಐರ್ಲೆಂಡ್ ಲೀಗ್ ಹಂತದಲ್ಲಿ ಆಡಲಿರುವ 4 ಪಂದ್ಯಗಳನ್ನೂ ಶ್ರೀಲಂಕಾದ ಆರ್. ಪ್ರೇಮದಾಸ ಹಾಗೂ ಪಲ್ಲೆಕೆಲೆ ಸ್ಟೇಡಿಯಂಗಳಲ್ಲಿ ಆಡಲಿದೆ.
ಇತ್ತ ಗ್ರೂಪ್ ಸ್ವಾಪ್ ಮಾಡುವುದರಿಂದ ಬಾಂಗ್ಲಾದೇಶ್ ತಂಡವು ಲೀಗ್ ಹಂತದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಬಹುದು. ಈ ಮೂಲಕ ಪಂದ್ಯಗಳ ಸ್ಥಳಾಂತರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಇದೇ ಪ್ಲ್ಯಾನಿಂಗ್ನೊಂದಿಗೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ಇದೀಗ ಗ್ರೂಪ್ ಸ್ವಾಪ್ಗಾಗಿ ಬೇಡಿಕೆಯನ್ನಿಟ್ಟಿದೆ. ಅದರಂತೆ ಗ್ರೂಪ್-2 ನಲ್ಲಿರುವ ಐರ್ಲೆಂಡ್ ತಂಡವು ಗ್ರೂಪ್-3 ನಲ್ಲಿ, ಗ್ರೂಪ್-3 ನಲ್ಲಿರುವ ಬಾಂಗ್ಲಾದೇಶ್ ಗ್ರೂಪ್-2 ನಲ್ಲಿ ಕಣಕ್ಕಿಳಿಯಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: ನೇರವಾಗಿ ಫೈನಲ್ಗೇರಲು RCB ಇನ್ನೆಷ್ಟು ಪಂದ್ಯ ಗೆಲ್ಲಬೇಕು?
ಐಸಿಸಿ ಗಡುವು:
ಭಾರತದಿಂದ ತನ್ನ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸಬೇಕೆಂದು ಪಟ್ಟು ಹಿಡಿದಿರುವ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಗೆ ತನ್ನ ಅಂತಿಮ ನಿಲುವು ಸ್ಪಷ್ಟಪಡಿಸುವಂತೆ ಗಡುವು ನೀಡಿದೆ. ಅದರಂತೆ ಜನವರಿ 21 ರೊಳಗೆ ಟಿ20 ವಿಶ್ವಕಪ್ ಆಡುತ್ತೀರಾ ಅಥವಾ ಟೂರ್ನಿಯಿಂದ ಹಿಂದೆ ಸರಿಯುತ್ತೀರಾ ಎಂಬುದನ್ನು ಖಚಿತಪಡಿಸಲು ತಿಳಿಸಲಾಗಿದೆ. ಹೀಗಾಗಿ ಇನ್ನೆರಡು ದಿನಗಳಲ್ಲಿ ಬಾಂಗ್ಲಾದೇಶ್ ತಂಡದ ಟಿ20 ವಿಶ್ವಕಪ್ ಭವಿಷ್ಯ ನಿರ್ಧಾರವಾಗಲಿದೆ.
