AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌತ್ ಆಫ್ರಿಕಾ ತಂಡಕ್ಕೆ 329 ರನ್​ಗಳ ವಿಶ್ವ ದಾಖಲೆಯ ವಿಜಯ

South Africa Record: ಸೌತ್ ಆಫ್ರಿಕಾ ತಂಡದ ಈ ಅಮೋಘ ಗೆಲುವು ಅಂಡರ್-19 ವಿಶ್ವಕಪ್​ನಲ್ಲಿ ಮೂಡಿಬಂದ 2ನೇ ದಾಖಲೆಯ ವಿಜಯ. ಅಂದರೆ ಕಿರಿಯರ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ಗಳ ಅಂತರದಿಂದ ಗೆದ್ದ 2ನೇ ತಂಡವೆಂಬ ಹೆಗ್ಗಳಿಕೆಯನ್ನು ಸೌತ್ ಆಫ್ರಿಕಾ ತಂಡ ತನ್ನದಾಗಿಸಿಕೊಂಡಿದೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಆಸ್ಟ್ರೇಲಿಯಾ.

ಸೌತ್ ಆಫ್ರಿಕಾ ತಂಡಕ್ಕೆ 329 ರನ್​ಗಳ ವಿಶ್ವ ದಾಖಲೆಯ ವಿಜಯ
South Africa
ಝಾಹಿರ್ ಯೂಸುಫ್
|

Updated on: Jan 20, 2026 | 11:53 AM

Share

ಅಂಡರ್-19 ವಿಶ್ವಕಪ್​ನ 14ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಅಮೋಘ ಜಯ ಸಾಧಿಸಿದೆ. ಅದು ಕೂಡ ಬರೋಬ್ಬರಿ 329 ರನ್​ಗಳ ಅಂತರದಿಂದ ಎಂಬುದು ವಿಶೇಷ. ನಮೀಬಿಯಾದ ಹೈ ಫರ್ಫಾಮೆನ್ಸ್ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಹಾಗೂ ತಂಝನಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಟಾಸ್ ಗೆದ್ದ ತಂಝನಿಯಾ ತಂಡದ ನಾಯಕ ಲಕ್ಷ್ ಬಕ್ರಾನಿಯಾ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ತಂಡಕ್ಕೆ ಜೋರಿಚ್ ವ್ಯಾನ್ (47) ಹಾಗೂ ಅದ್ನಾನ್ (32) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಮುಹಮ್ಮದ್ ಬುಲ್ಬುಲಿಯಾ 108 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 108 ರನ್ ಬಾರಿಸಿದರು.

ಹಾಗೆಯೇ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೇಸನ್ ರೌಲ್ಸ್​ 5 ಭರ್ಜರಿ ಸಿಕ್ಸ್ ಹಾಗೂ 10 ಫೋರ್​ಗಳನ್ನು ಒಳಗೊಂಡಂತೆ 101 ಎಸೆತಗಳಲ್ಲಿ 125 ರನ್​ ಸಿಡಿಸಿದರು. ಇನ್ನು ಅಂತಿಮ ಹಂತದಲ್ಲಿ ಬ್ಯಾಟ್ ಬೀಸಿದ ಪೌಲ್ ಜೇಮ್ಸ್ 18 ಎಸೆತಗಳಲ್ಲಿ 46 ರನ್ ಚಚ್ಚಿದರು. ಈ ಮೂಲಕ ಸೌತ್ ಆಫ್ರಿಕಾ ತಂಡವು 50 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಬರೋಬ್ಬರಿ 397 ರನ್​ ಕಲೆಹಾಕಿತು.

398 ರನ್​ಗಳ ಕಠಿಣ ಗುರಿ:

300 ಎಸೆತಗಳಲ್ಲಿ 398 ರನ್​ಗಳ ಗುರಿ ಪಡೆದ ತಂಝನಿಯಾ ತಂಡವು ಕೇವಲ 13 ರನ್​ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತು. ಅಲ್ಲದೆ 20 ಓವರ್​ ಪೂರ್ಣಗೊಳ್ಳುವ ಮೂಲಕ ತಂಝನಿಯಾದ 6 ಬ್ಯಾಟರ್​ಗಳು ಪೆವಿಲಿಯನ್​​ಗೆ ಮರಳಿದ್ದರು.

ಇದಾದ ಬಳಿಕ 9 ರನ್​ಗಳಿಸುಷ್ಟರಲ್ಲಿ ಉಳಿದ 4 ಬ್ಯಾಟರ್​ಗಳು ಕೂಡ ಔಟಾದರು. ಪರಿಣಾಮ ತಂಝನಿಯಾ ತಂಡವು ಕೇವಲ 68 ರನ್​ಗಳಿಗೆ ಸರ್ವಪತನ ಕಂಡಿತು.  ಈ ಮೂಲಕ ಸೌತ್ ಆಫ್ರಿಕಾ ತಂಡ 329 ರನ್​ಗಳ ಅಮೋಘ ಜಯ ಸಾಧಿಸಿದೆ.

ವಿಶ್ವ ದಾಖಲೆ:

ಸೌತ್ ಆಫ್ರಿಕಾ ತಂಡದ ಈ ಅಮೋಘ ಗೆಲುವು ಅಂಡರ್-19 ವಿಶ್ವಕಪ್​ನಲ್ಲಿ ಮೂಡಿಬಂದ 2ನೇ ದಾಖಲೆಯ ವಿಜಯ. ಅಂದರೆ ಕಿರಿಯರ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ಗಳ ಅಂತರದಿಂದ ಗೆದ್ದ 2ನೇ ತಂಡವೆಂಬ ಹೆಗ್ಗಳಿಕೆಯನ್ನು ಸೌತ್ ಆಫ್ರಿಕಾ ತಂಡ ತನ್ನದಾಗಿಸಿಕೊಂಡಿದೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಆಸ್ಟ್ರೇಲಿಯಾ ತಂಡ. 2002ರ ಅಂಡರ್-19 ವಿಶ್ವಕಪ್​ನಲ್ಲಿ ಫಿಜಿ ವಿರುದ್ಧ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 50 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 480 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಫಿಜಿ ತಂಡ ಕೇವಲ 50 ರನ್​ಗಳಿಗೆ ಆಲೌಟ್ ಆಗಿದ್ದರು.

ಇದನ್ನೂ ಓದಿ: ಟಿ೨೦ ವಿಶ್ವಕಪ್‌ನ ಮೊದಲ ಪಂದ್ಯದಿಂದ ಆಸ್ಟ್ರೇಲಿಯಾ ಸ್ಟಾರ್ ಆಟಗಾರ ಔಟ್

ಈ ಮೂಲಕ ಅಂಡರ್-19 ವಿಶ್ವಕಪ್​ನಲ್ಲಿ 430 ರನ್​ಗಳ ಅಂತರದ ಗೆಲುವು ದಾಖಲಿಸಿ ಆಸ್ಟ್ರೇಲಿಯಾ ತಂಡ ಹೊಸ ಇತಿಹಾಸ ಬರೆದಿದ್ದರು. ಇದೀಗ ಸೌತ್ ಆಫ್ರಿಕಾ ತಂಡ 329 ರನ್​ಗಳ ಗೆಲುವಿನೊಂದಿಗೆ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಅಲಂಕರಿಸಿದೆ.