
ಇಂಗ್ಲೆಂಡ್ ಪುರುಷರ ಟೆಸ್ಟ್ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗುವಂತೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ECB) ನೀಡಿದ್ದ ಬಿಗ್ ಆಫರ್ ಅನ್ನು ಆಸ್ಟ್ರೇಲಿಯಾದ ಮಾಜಿ ಆಟಗಾರ ಮೈಕಲ್ ಹಸ್ಸಿ ಅಧಿಕೃತವಾಗಿ ತಿರಸ್ಕರಿಸಿದ್ದಾರೆ. ಈ ಪೂರ್ಣಾವಧಿ ಹುದ್ದೆಯನ್ನು ಬೇಡವೆಂದಿರುವ ಅವರು, ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ 2027ರ ಆ್ಯಶಸ್ ಸರಣಿಗಾಗಿ ಅಲ್ಪಾವಧಿಯ ಕನ್ಸಲ್ಟೆಂಟ್ (ಸಲಹೆಗಾರ) ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಇತ್ತೀಚೆಗಷ್ಟೇ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ತರಬೇತುದಾರರಾಗಿ ನೇಮಕಗೊಂಡಿರುವ ನ್ಯೂಝಿಲೆಂಡ್‌ನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್, ಮೈಕಲ್ ಹಸ್ಸಿ ಅವರಿಗೆ ಬ್ಯಾಟಿಂಗ್ ಕೋಚ್ ಹುದ್ದೆಯ ಆಫರ್ ನೀಡಿದ್ದರು. ಇದಕ್ಕೆ ಮುಖ್ಯ ಕಾರಣ ಇಬ್ಬರ ನಡುವಣ ಒಡನಾಟ.
ಐಪಿಎಲ್‌ನಲ್ಲಿ ಸ್ಟೀಫನ್ ಫ್ಲೆಮಿಂಗ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿದ್ದ ವೇಳೆ ಮೈಕಲ್ ಹಸ್ಸಿ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಿಸಲಾಗಿತ್ತು. ಈ ಮೂಲಕ ಇಬ್ಬರು ದೀರ್ಘಕಾಲದಿಂದ ಒಟ್ಟಿಗೆ ಕೆಲಸ ಮಾಡಿದ್ದಾರೆ. ಸಿಎಸ್‌ಕೆ ಫ್ರಾಂಚೈಸಿಯಲ್ಲಿನ ಈ ಸುದೀರ್ಘ ಒಡನಾಟ ಮತ್ತು ಪರಸ್ಪರ ಆತ್ಮೀಯತೆಯ ಕಾರಣದಿಂದಲೇ, ಫ್ಲೆಮಿಂಗ್ ಅವರು ಇಂಗ್ಲೆಂಡ್ ಟೆಸ್ಟ್ ತಂಡದ ಬ್ಯಾಟಿಂಗ್ ಜವಾಬ್ದಾರಿಯನ್ನೂ ಹಸ್ಸಿ ಹೆಗಲಿಗೇರಿಸಲು ಉತ್ಸುಕರಾಗಿದ್ದರು.
51 ವರ್ಷದ ಮೈಕಲ್ ಹಸ್ಸಿ ಸದ್ಯ ವಿಶ್ವದಾದ್ಯಂತ ಹಲವು ಕ್ರಿಕೆಟ್ ಜವಾಬ್ದಾರಿಗಳನ್ನು ಹೊಂದಿದ್ದಾರೆ. ಇಂಗ್ಲೆಂಡ್‌ನ ಪೂರ್ಣಾವಧಿ ಕೋಚ್ ಹುದ್ದೆ ಒಪ್ಪಿಕೊಂಡರೆ ಅವರ ಉಳಿದ ಒಪ್ಪಂದಗಳಿಗೆ ತೊಂದರೆಯಾಗುತ್ತಿತ್ತು. ಹೀಗಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಇದನ್ನೂ ಓದಿ: ರೋಹಿತ್ ಶರ್ಮಾ ಹೆಗಲಿಗೆ ಮುಂಬೈ ಇಂಡಿಯನ್ಸ್ ‘ನಾಯಕ’ನ ಆಯ್ಕೆ!
ಮೈಕಲ್ ಹಸ್ಸಿ ಈ ಆಫರ್ ಅನ್ನು ತಿರಸ್ಕರಿಸಿದ ಬೆನ್ನಲ್ಲೇ, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್, ಮಾಜಿ ಆರಂಭಿಕ ಆಟಗಾರ ಮಾರ್ಕಸ್ ಟ್ರೆಸ್ಕೋಥಿಕ್ ಅವರನ್ನು ಸಂಪರ್ಕಿಸಿದ್ದಾರೆ. ಸದ್ಯ ಇಂಗ್ಲೆಂಡ್ ತಂಡದ ಹಂಗಾಮಿ ಕೋಚ್ ಆಗಿ ಜವಾಬ್ದಾರಿ ನಿಭಾಯಿಸುತ್ತಿರುವ ಟ್ರೆಸ್ಕೋಥಿಕ್ ಅವರನ್ನೇ ಸ್ಟೀಫನ್ ಫ್ಲೆಮಿಂಗ್ ಅವರ ಅಡಿಯಲ್ಲಿ ಪೂರ್ಣಾವಧಿ ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲು ಇಸಿಬಿ ಒಲವು ತೋರಿದೆ ಎಂದು ವರದಿಯಾಗಿದೆ.