ದಿನೇಶ್ ಕಾರ್ತಿಕ್ CSK ತಂಡಕ್ಕೆ ಬರಲಿ: ಮಾಜಿ ಆಟಗಾರನ ಸೂಪರ್ ಪ್ಲ್ಯಾನ್!
ಸ್ಟೀಫನ್ ಫ್ಲೆಮಿಂಗ್ ಅವರ 18 ವರ್ಷಗಳ ಸುದೀರ್ಘ ಪಯಣ ಮುಕ್ತಾಯದೊಂದಿಗೆ ಸಿಎಸ್‌ಕೆ ತಂಡದಲ್ಲಿ ಈಗ ಹೊಸ ಯುಗ ಆರಂಭವಾಗುತ್ತಿದೆ. 'ಮುಂದಿನ ಕೋಚ್ ಯಾರು?' ಎಂಬ ಪ್ರಶ್ನೆಗೆ, ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಅವರು ದಿನೇಶ್ ಕಾರ್ತಿಕ್ ಅವರ ಹೆಸರನ್ನು ಮುಂಚೂಣಿಗೆ ತಂದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ದೀರ್ಘಕಾಲದ ಯಶಸ್ಸಿನ ರೂವಾರಿ ಸ್ಟೀಫನ್ ಫ್ಲೆಮಿಂಗ್ ಅವರು ಇತ್ತೀಚೆಗಷ್ಟೇ ಇಂಗ್ಲೆಂಡ್ ಟೆಸ್ಟ್ ತಂಡದ ಮುಖ್ಯ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡು ತಂಡದಿಂದ ನಿರ್ಗಮಿಸಿದ್ದಾರೆ. ಇದರಿಂದಾಗಿ ತೆರವಾಗಿರುವ ಸಿಎಸ್‌ಕೆ ಮುಖ್ಯ ಕೋಚ್ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎಂಬ ಚರ್ಚೆ ಐಪಿಎಲ್ ವಲಯದಲ್ಲಿ ಜೋರಾಗಿ ನಡೆಯುತ್ತಿದೆ. ಈ ಬೆನ್ನಲ್ಲೇ ಸಿಎಸ್‌ಕೆ ತಂಡದ ಮಾಜಿ ಆಟಗಾರ ಹಾಗೂ ಆಸ್ಟ್ರೇಲಿಯಾದ ದಂತಕಥೆ ಮ್ಯಾಥ್ಯೂ ಹೇಡನ್ ಅವರು ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಅವರ ಹೆಸರನ್ನು ಬಲವಾಗಿ ಶಿಫಾರಸು ಮಾಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಮ್ಯಾಥ್ಯೂ ಹೇಡನ್, 2027ರ ಐಪಿಎಲ್ ಆವೃತ್ತಿಯಿಂದ ಸಿಎಸ್‌ಕೆ ತಂಡವನ್ನು ಮುನ್ನಡೆಸಲು ದಿನೇಶ್ ಕಾರ್ತಿಕ್ ಅವರೇ ‘ಪರ್ಫೆಕ್ಟ್’ ಅಭ್ಯರ್ಥಿ ಎಂದಿದ್ದಾರೆ. ಇದಕ್ಕೆ ಸೂಕ್ತ ಕಾರಣಗಳನ್ನು ಕೂಡ ಮುಂದಿಟ್ಟಿದ್ದಾರೆ. ಆ ಕಾರಣಗಳೆಂದರೆ…
ಸ್ಥಳೀಯ ಕನೆಕ್ಷನ್: ಚೆನ್ನೈ ಸೂಪರ್ ಕಿಂಗ್ಸ್‌ನಂತಹ ಬೃಹತ್ ಫ್ರಾಂಚೈಸಿಗೆ ತಮಿಳುನಾಡು ಮತ್ತು ಚೆನ್ನೈನ ಕ್ರಿಕೆಟ್ ಸಂಸ್ಕೃತಿಯನ್ನು ಹತ್ತಿರದಿಂದ ಬಲ್ಲ ಸ್ಥಳೀಯ ಕೋಚ್ ಅಗತ್ಯವಿದೆ ಎಂದು ಹೇಡನ್ ನಂಬಿದ್ದಾರೆ. ಕಾರ್ತಿಕ್ ಅವರು ಚೆನ್ನೈನವರೇ ಆಗಿದ್ದು, ತಮಿಳುನಾಡು ದೇಶೀಯ ಕ್ರಿಕೆಟ್ ತಂಡವನ್ನು ದೀರ್ಘಕಾಲ ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಡಿಕೆ ಸೂಕ್ತ ಆಯ್ಕೆ ಎಂದಿದ್ದಾರೆ.
ಅದ್ಭುತ ಯಶಸ್ಸು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ದಿನೇಶ್ ಕಾರ್ತಿಕ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಆರ್‌ಸಿಬಿ ತಂಡವು 2025 ಮತ್ತು 2026ರ ಸೀಸನ್‌ಗಳಲ್ಲಿ ಸತತವಾಗಿ ಐಪಿಎಲ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವುದು ಅವರ ಕೋಚಿಂಗ್ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಒತ್ತಡ ನಿರ್ವಹಣೆಯ ಕಲೆ: ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಸಿಎಸ್‌ಕೆಯನ್ನು ಕೋಚ್ ಮಾಡುವುದು ಸಾಮಾನ್ಯ ವಿಷಯವಲ್ಲ. ಅಲ್ಲಿನ ಒತ್ತಡ ಮತ್ತು ಅಭಿಮಾನಿಗಳ ನಿರೀಕ್ಷೆಯನ್ನು ನಿಭಾಯಿಸುವ ಸೂಕ್ತ ತಂತ್ರಗಾರಿಕೆ ಕಾರ್ತಿಕ್ ಅವರಲ್ಲಿದೆ ಎಂದು ಹೇಡನ್ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: 3,300 ಕೋಟಿ ರೂ.ಗೆ CSK ತಂಡದಲ್ಲಿ ಪಾಲು ಕೇಳಿದರೇ ಎಂಎಸ್ ಧೋನಿ?
ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಮುಂದಿನ ನಡೆ ಏನು?
ಸ್ಟೀಫನ್ ಫ್ಲೆಮಿಂಗ್ ನಿರ್ಗಮನದ ನಂತರ ಸಿಎಸ್‌ಕೆ ಕೋಚ್ ಸ್ಥಾನಕ್ಕೆ ಎಂ.ಎಸ್. ಧೋನಿ, ಮೈಕಲ್ ಹಸ್ಸಿ ಮತ್ತು ಇಯಾನ್ ಮಾರ್ಗನ್ ಅವರಂತಹ ದೊಡ್ಡ ಹೆಸರುಗಳು ಕೇಳಿಬರುತ್ತಿವೆ. ಸದ್ಯಕ್ಕೆ ಮ್ಯಾಥ್ಯೂ ಹೇಡನ್ ಅವರ ಹೇಳಿಕೆಯು ವೈಯಕ್ತಿಕ ಅಭಿಪ್ರಾಯವಾಗಿದ್ದು, ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಸೆಪ್ಟೆಂಬರ್ ಮಧ್ಯಭಾಗದೊಳಗೆ ತನ್ನ ಅಧಿಕೃತ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಯಿದೆ. ಒಂದು ವೇಳೆ ದಿನೇಶ್ ಕಾರ್ತಿಕ್ ಚೆನ್ನೈ ತಂಡದ ಕೋಚ್ ಆಗಿ ಆಯ್ಕೆಯಾದರೆ, ಅದು ಐಪಿಎಲ್ ಇತಿಹಾಸದ ಮತ್ತೊಂದು ರೋಚಕ ಅಧ್ಯಾಯವಾಗುವುದರಲ್ಲಿ ಸಂಶಯವಿಲ್ಲ.
ಸ್ಟೀಫನ್ ಫ್ಲೆಮಿಂಗ್ ಅವರ 18 ವರ್ಷಗಳ ಸುದೀರ್ಘ ಪಯಣ ಮುಕ್ತಾಯದೊಂದಿಗೆ ಸಿಎಸ್‌ಕೆ ತಂಡದಲ್ಲಿ ಈಗ ಹೊಸ ಯುಗ ಆರಂಭವಾಗುತ್ತಿದೆ. ‘ಮುಂದಿನ ಕೋಚ್ ಯಾರು?’ ಎಂಬ ಪ್ರಶ್ನೆಗೆ, ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಅವರು ದಿನೇಶ್ ಕಾರ್ತಿಕ್ ಅವರ ಹೆಸರನ್ನು ಮುಂಚೂಣಿಗೆ ತಂದಿದ್ದಾರೆ.




