AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾನಿಕಾರಕ… ಭಾರತದ ಗೆಲುವಿನ ಬೆನ್ನಲ್ಲೇ ಕ್ಯಾತೆ ತೆಗೆದ ಮೈಕಲ್ ವಾನ್

T20 World Cup 2026 IND vs NZ: ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು ಬಗ್ಗು ಬಡಿದು ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಆದರೆ ಐಸಿಸಿ ಟೂರ್ನಿಯ ಫೈನಲ್​ ಪಂದ್ಯವು ಏಕಪಕ್ಷೀಯವಾಗಿ ಮುಗಿದಿರುವುದರಿಂದ ಕೆಲ ಮಾಜಿ ಆಟಗಾರರು ಪಿಚ್ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ.

ಹಾನಿಕಾರಕ... ಭಾರತದ ಗೆಲುವಿನ ಬೆನ್ನಲ್ಲೇ ಕ್ಯಾತೆ ತೆಗೆದ ಮೈಕಲ್ ವಾನ್
Michael Vaughan
ಝಾಹಿರ್ ಯೂಸುಫ್
|

Updated on:Mar 09, 2026 | 12:32 PM

Share

T20 World Cup 2026: ಟಿ20 ವಿಶ್ವಕಪ್​ನ 10ನೇ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಕಲೆಹಾಕಿದ್ದು ಬರೋಬ್ಬರಿ 255 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ನ್ಯೂಝಿಲೆಂಡ್ ತಂಡವು ಕೇವಲ 159 ರನ್​ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 96 ರನ್​ಗಳ ಗೆಲುವಿನೊಂದಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಭಾರತ ತಂಡದ ಈ ಚಾಂಪಿಯನ್ ಪಟ್ಟದ ಬೆನ್ನಲ್ಲೇ ಫೈನಲ್​ ಮ್ಯಾಚ್​ಗೆ ಸಿದ್ಧಪಡಿಸಲಾದ ಪಿಚ್​ ಬಗ್ಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ಬ್ಯಾಟರ್​ಗಳಿಗಾಗಿ ನಿರ್ಮಿಸಲಾಗಿರುವ ಇಂತಹ ಪಿಚ್​​ ಕ್ರಿಕೆಟ್ ಆಟಕ್ಕೆ “ಹಾನಿಕಾರಕ” ಎಂದು ಕರೆದಿದ್ದಾರೆ.

ಭಾರತ ತಂಡವು 255 ರನ್​ಗಳ ಬೃಹತ್ ಮೊತ್ತವನ್ನು ಪೇರಿಸುತ್ತಿದ್ದಂತೆ ಅಸಮಾಧಾನ ಹೊರಹಾಕಿದ ಮೈಕಲ್ ವಾನ್,  ಇದು ಕೇವಲ ಬ್ಯಾಟರ್‌ಗಳಿಗೆ ಮಾತ್ರ ಅನುಕೂಲಕರವಾದ ಪಿಚ್ ಎಂದು ದೂರಿದರು. ಬೌಲರ್‌ಗಳಿಗೆ ಯಾವುದೇ ಸಹಾಯವಿಲ್ಲದ ಇಂತಹ ಪಿಚ್‌ಗಳು ಆಟದ ಸಮತೋಲನವನ್ನು ಕೆಡಿಸುತ್ತವೆ.

ಇಂತಹ ಪಿಚ್​ಗಳಿಂದ ಸಮತೋಲಿತ ಆಟವು ಮರೆಯಾಗುತ್ತಿದೆ. ಕೇವಲ ಬ್ಯಾಟರ್​ಗಳಿಗಾಗಿಯೇ ಈ ಪಿಚ್ ನಿರ್ಮಿಸಲಾಗಿದ್ದು, ಹೀಗಾಗಿಯೇ ಟೀಮ್ ಇಂಡಿಯಾ ಇಷ್ಟೊಂದು ದೊಡ್ಡ ಮೊತ್ತು ಪೇರಿಸಲು ಸಾಧ್ಯವಾಗಿದೆ. ಇದರಿಂದಾಗಿ ಸಮತೋಲಿತ ಪೈಪೋಟಿ ಕಂಡು ಬಂದಿಲ್ಲ ಎಂದು ವಾನ್ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೂ ಮುನ್ನ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಆ್ಯಶಸ್ ಸರಣಿಯ ವೇಳೆ ಮೊದಲ ದಿನವೇ 20 ವಿಕೆಟ್‌ಗಳು ಉರುಳಿದಾಗ, ಎಂ.ಸಿ.ಜಿ (MCG) ಪಿಚ್ ಅನ್ನು ಅವರು “ಹಾಸ್ಯಾಸ್ಪದ” ಎಂದು ಕರೆದಿದ್ದರು. ಬ್ಯಾಟರ್‌ಗಳಿಗೆ ಆಡಲು ಅಸಾಧ್ಯವಾದ ಇಂತಹ ಪಿಚ್‌ಗಳು ಟೆಸ್ಟ್ ಕ್ರಿಕೆಟ್‌ನ ಘನತೆಯನ್ನು ಕುಗ್ಗಿಸುತ್ತವೆ ಎಂದು ಅವರು ಒತ್ತಿ ಹೇಳಿದ್ದರು.

ಇದನ್ನೂ ಓದಿ: Shoaib Akhtar: ಭಾರತ ಕ್ರಿಕೆಟ್​ ಅನ್ನೇ ಕೊಂದು ಹಾಕಿದ್ದಾರೆ..!

ಇದೀಗ ಐಸಿಸಿ ಟೂರ್ನಿಯ ಫೈನಲ್ ಪಂದ್ಯಕ್ಕಾಗಿ ಬ್ಯಾಟರ್​ಗಳ ಪಾಲಿಗೆ ಸ್ವರ್ಗದಂತಹ ಪಿಚ್ ನಿರ್ಮಿಸಿರುವುದರ ಬಗ್ಗೆ ಮೈಕಲ್ ವಾನ್ ಪ್ರಶ್ನೆಗಳನ್ನೆತ್ತಿದ್ದಾರೆ. ಇಂತಹ ಪಿಚ್​ಗಳಿಂದಾಗಿ ಬ್ಯಾಟಿಂಗ್ ಮತ್ತು ಬೌಲಿಂಗ್ ನಡುವೆ ಸಮತೋಲನ ಇಲ್ಲದ ಪಂದ್ಯಗಳು ಕಂಡು ಬರುತ್ತವೆ. ಅಲ್ಲದೆ ಈ ರೀತಿಯ ಪಿಚ್​ ಪ್ರೇಕ್ಷಕರ ಆಸಕ್ತಿಯನ್ನು ಕಡಿಮೆ ಮಾಡುತ್ತವೆ ಮತ್ತು ಕ್ರಿಕೆಟ್‌ನ ಭವಿಷ್ಯಕ್ಕೆ ಹಾನಿ ಮಾಡುತ್ತವೆ ಎಂದು ವಾನ್ ಕಳವಳ ವ್ಯಕ್ತಪಡಿಸಿದ್ದಾರೆ.

Published On - 12:31 pm, Mon, 9 March 26

Follow Us