MLC 2023: ಯುಎಸ್ಎನಲ್ಲಿ ಜುಲೈ 14 ರಿಂದ ಶುರುವಾಗಲಿರುವ ಹೊಸ ಟಿ20 ಲೀಗ್ ಮೇಜರ್ ಲೀಗ್ ಕ್ರಿಕೆಟ್ನಲ್ಲಿ (Major League Cricket 2023 ) ಲಾಸ್ ಏಂಜಲೀಸ್ ನೈಟ್ ರೈಡರ್ಸ್ (LA KR) ತಂಡವನ್ನು ಸುನಿಲ್ ನರೈನ್ (Sunil Narine) ಮುನ್ನಡೆಸಲಿದ್ದಾರೆ. ಈ ಮೂಲಕ ವಿಂಡೀಸ್ನ ಸ್ಪಿನ್ ಆಲ್ರೌಂಡರ್ ಲೀಗ್ ಕ್ರಿಕೆಟ್ನಲ್ಲಿ ನಾಯಕರಾಗಿ ಪಾದರ್ಪಣೆ ಮಾಡಲಿರುವುದು ವಿಶೇಷ.
ನೈಟ್ ರೈಡರ್ಸ್ ಫ್ರಾಂಚೈಸಿಯ ಎಲ್ಲಾ ತಂಡಗಳನ್ನು ಪ್ರತಿನಿಧಿಸುವ ಬಯಕೆ ನನಗಿತ್ತು. ನಾವು ಯುನೈಟೆಡ್ ಸ್ಟೇಟ್ಸ್‌ಗೆ ಬರುವ ಮುಂಚೆಯೇ ಈ ಬಗ್ಗೆ ದೀರ್ಘಕಾಲ ಚರ್ಚಿಸಿದ್ದೇವೆ. ಇದೀಗ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವುದು ಖುಷಿಯ ವಿಷಯ. ಈ ತಂಡದಲ್ಲಿ ಸಾಕಷ್ಟು ಅನುಭವಿ ಆಟಗಾರರಿದ್ದಾರೆ. ಹೀಗಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಬಲ್ಲೆ ಎಂಬ ವಿಶ್ವಾಸವಿದೆ ಎಂದು ಸುನಿಲ್ ನರೈನ್ ತಿಳಿಸಿದ್ದಾರೆ.
ಹಾಗೆಯೇ ಲಾಸ್ ಏಂಜಲೀಸ್ ತಂಡದ ಮುಖ್ಯ ಕೋಚ್ ಆಗಿ ಫಿಲ್ ಸಿಮನ್ಸ್ ಆಯ್ಕೆಯಾಗಿದ್ದು, ಸಹಾಯಕ ಕೋಚ್ ರಿಯಾನ್ ಟೆನ್ ಡೋಸ್ಕೇಟ್ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ತಂಡದ ಜೊತೆಗಿರಲಿದ್ದಾರೆ. ಭರತ್ ಅರುಣ್ ಅವರು ಈ ಹಿಂದೆ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
ಇನ್ನು ಸ್ಟಾರ್ ಆಟಗಾರರಾಗಿ ವೆಸ್ಟ್ ಇಂಡೀಸ್ನ ಸುನಿಲ್ ನರೈನ್, ಆಂಡ್ರೆ ರಸೆಲ್, ಆ್ಯಡಂ ಝಂಪಾ (ಆಸ್ಟ್ರೇಲಿಯಾ), ಜೇಸನ್ ರಾಯ್ (ಇಂಗ್ಲೆಂಡ್), ಲಾಕಿ ಫರ್ಗುಸನ್ (ನ್ಯೂಝಿಲೆಂಡ್), ಮಾರ್ಟಿನ್ ಗಪ್ಟಿಲ್ (ನ್ಯೂಝಿಲೆಂಡ್), ರಿಲೀ ರೊಸೊವ್ (ಸೌತ್ ಆಫ್ರಿಕಾ) ತಂಡದಲ್ಲಿದ್ದಾರೆ.
ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯು ಜುಲೈ 14 ರಿಂದ ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಹಾಗೂ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.
ಇದನ್ನೂ ಓದಿ: MLC 2023: ಅಮೆರಿಕನ್ ಟಿ20 ಲೀಗ್ನಲ್ಲಿ ಕನ್ನಡಿಗ..!
ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡ ಹೀಗಿದೆ: ಸುನಿಲ್ ನರೈನ್, ಆಂಡ್ರೆ ರಸೆಲ್, ಆಡಮ್ ಝಂಪಾ, ಜೇಸನ್ ರಾಯ್, ಲಾಕಿ ಫರ್ಗುಸನ್, ಮಾರ್ಟಿನ್ ಗಪ್ಟಿಲ್, ರಿಲೀ ರೊಸೊವ್, ಅಲಿ ಖಾನ್, ಅಲಿ ಶೇಖ್, ಭಾಸ್ಕರ್ ಯದ್ರಾಮ್, ಕಾರ್ನೆ ಡ್ರೈ, ಜಸ್ಕರನ್ ಮಲ್ಹೋತ್ರಾ, ನಿತೀಶ್ ಕುಮಾರ್, ಸೈಫ್ ಬದರ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಉನ್ಮುಕ್ತ್ ಚಂದ್.