ಅಮೆರಿಕಯದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ ಕ್ರಿಕೆಟ್ (MLC 2024) ಟೂರ್ನಿಯ 12ನೇ ಪಂದ್ಯದಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡ ಜಯಭೇರಿ ಬಾರಿಸಿದೆ. ಡಲ್ಲಾಸ್ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಎಂಐ ನ್ಯೂಯಾರ್ಕ್ ತಂಡದ ನಾಯಕ ಕೀರನ್ ಪೊಲಾರ್ಡ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಇನಿಂಗ್ಸ್ ಆರಂಭಿಸಿದ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಕ್ಕೆ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಡೆವೊನ್ ಕಾನ್ವೆ ಉತ್ತಮ ಆರಂಭ ಒದಗಿಸಿದ್ದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿ ಮೊದಲ ವಿಕೆಟ್ಗೆ 85 ರನ್ಗಳ ಜೊತೆಯಾಟವಾಡಿದರು. ವಿಶೇಷ ಎಂದರೆ ಈ 85 ರನ್ಗಳಲ್ಲಿ ಕಾನ್ವೆ ಕಲೆಹಾಕಿದ್ದು ಕೇವಲ 14 ರನ್ಗಳು ಮಾತ್ರ.
ಅಂದರೆ 38 ಎಸೆತಗಳನ್ನು ಎದುರಿಸಿದ ಫಾಫ್ ಡುಪ್ಲೆಸಿಸ್ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 61 ರನ್ ಬಾರಿಸಿದ್ದರು. ಇನ್ನು ಡುಪ್ಲೆಸಿಸ್ ಔಟಾದ ಬಳಿಕ ಬಂದ ಆರೋನ್ ಹಾರ್ಡಿ 22 ರನ್ಗಳ ಕೊಡುಗಡೆ ನೀಡಿದರೆ, ಮಾರ್ಕಸ್ ಸ್ಟೋಯಿನಿಸ್ 24 ರನ್ ಬಾರಿಸಿದರು. ಇನ್ನು ಆರಂಭಿಕ ಆಟಗಾರ ಡೆವೊನ್ ಕಾನ್ವೆ 40 ರನ್ ಸಿಡಿಸಿದರು. ಈ ಮೂಲಕ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 176 ರನ್ ಕಲೆಹಾಕಿತು.
177 ರನ್ಗಳ ಗುರಿ ಬೆನ್ನತ್ತಿದ ಎಂಐ ನ್ಯೂಯಾರ್ಕ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ರೂಬೆನ್ ಕ್ಲಿಂಟನ್ (7) ಹಾಗೂ ಸ್ಟೀವನ್ ಟೇಲರ್ (18) ಬೇಗನೆ ನಿರ್ಗಮಿಸಿದರೆ, ಆ ಬಳಿಕ ಬಂದ ನಿಕೋಲಸ್ ಪೂರನ್ 1 ರನ್ಗಳಿಸಿ ಔಟಾದರು.
ಇನ್ನು ನಾಯಕ ಕೀರನ್ ಪೊಲಾರ್ಡ್ 5 ರನ್ಗಳಿಸಲಷ್ಟೇ ಶಕ್ತರಾದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಮೊನಾಂಕ್ ಪಟೇಲ್ 45 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 61 ರನ್ ಬಾರಿಸಿದರು.
ಅಂತಿಮ ಓವರ್ಗಳಲ್ಲಿ ಅಬ್ಬರಿಸಿದ ರಶೀದ್ ಖಾನ್ 23 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 50 ರನ್ ಸಿಡಿಸಿದರು. ಇದಾಗ್ಯೂ ಎಂಐ ನ್ಯೂಯಾರ್ಕ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 167 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡವು 15 ರನ್ಗಳ ಜಯ ಸಾಧಿಸಿತು.
ಟೆಕ್ಸಾಸ್ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ಡೆವೊನ್ ಕಾನ್ವೇ (ವಿಕೆಟ್ ಕೀಪರ್) , ಫಾಫ್ ಡು ಪ್ಲೆಸಿಸ್ (ನಾಯಕ) , ಆರೋನ್ ಹಾರ್ಡಿ , ಜೋಶುವಾ ಟ್ರಾಂಪ್ , ಮಿಲಿಂದ್ ಕುಮಾರ್ , ಮಾರ್ಕಸ್ ಸ್ಟೊಯಿನಿಸ್ , ಕ್ಯಾಲ್ವಿನ್ ಸಾವೇಜ್ , ಡ್ವೇನ್ ಬ್ರಾವೋ , ಮೊಹಮ್ಮದ್ ಮೊಹ್ಸಿನ್ , ನವೀನ್-ಉಲ್-ಹಕ್ , ಜಿಯಾ-ಉಲ್-ಹಕ್.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?
ಎಂಐ ನ್ಯೂಯಾರ್ಕ್ ಪ್ಲೇಯಿಂಗ್ 11: ರೂಬೆನ್ ಕ್ಲಿಂಟನ್ , ಮೊನಾಂಕ್ ಪಟೇಲ್ , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ಟಿಮ್ ಡೇವಿಡ್ , ಕೀರನ್ ಪೊಲಾರ್ಡ್ (ನಾಯಕ) , ಸ್ಟೀವನ್ ಟೇಲರ್ , ರಶೀದ್ ಖಾನ್ , ಟ್ರೆಂಟ್ ಬೌಲ್ಟ್ , ನಸ್ತುಷ್ ಕೆಂಜಿಗೆ, ಇಹ್ಸಾನ್ ಆದಿಲ್, ಕಗಿಸೊ ರಬಾಡ.