ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಮೊಹಮ್ಮದ್ ಅಮಿರ್ ‘ವಿದೇಶಿ ಆಟಗಾರ’!
Mohammad Amir: ಮೊಹಮ್ಮದ್ ಅಮಿರ್ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಪಾಕಿಸ್ತಾನದ ಪರ ಒಟ್ಟು 159 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಒಟ್ಟು 261 ವಿಕೆಟ್‌ಗಳನ್ನು ಸಹ ಕಬಳಿಸಿದ್ದಾರೆ. ಇದರ ನಡುವೆ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಕರಾಚಿ ಕಿಂಗ್ಸ್, ಕ್ವೆಟ್ಟಾ ಗ್ಲಾಡಿಯೇಟರ್ಸ್ ಹಾಗೂ ರಾವಲ್ಪಿಂಡಿ ಪರ ಸ್ಥಳೀಯ ಆಟಗಾರನಾಗಿ ಕಣಕ್ಕಿಳಿದಿದ್ದಾರೆ. ಆದರೆ ಇನ್ಮುಂದೆ ಪಿಎಸ್ಎಲ್ನಲ್ಲಿ ಅವರು ವಿದೇಶಿ ಆಟಗಾರ!

ಪಾಕಿಸ್ತಾನ್ ಕ್ರಿಕೆಟ್ ತಂಡದ ಮಾಜಿ ವೇಗಿ ಮೊಹಮ್ಮದ್ ಅಮಿರ್ ಮುಂಬರುವ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ವಿದೇಶಿ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ಅಮಿರ್ ಬ್ರಿಟನ್ ಪೌರತ್ವ ಪಡೆದುಕೊಂಡಿರುವುದೇ ಇದಕ್ಕೆ ಕಾರಣ. ಇತ್ತ ಬ್ರಿಟನ್ ಪ್ರಜೆಯಾಗಿರುವ ಮೊಹಮ್ಮದ್ ಅಮಿರ್ ಅವರನ್ನು ಇನ್ಮುಂದೆ ವಿದೇಶಿ ಕೋಟಾದಲ್ಲಿ ಆಡಿಸಬೇಕಾದ ಅನಿವಾರ್ಯತೆ ರಾವಲ್ಪಿಂಡಿ ಫ್ರಾಂಚೈಸಿಗೆ ಎದುರಾಗಿದೆ. ಅಂದರೆ ಕಳೆದ ಬಾರಿ ಅಮಿರ್ ಸ್ಥಳೀಯ ಆಟಗಾರನಾಗಿ ಕಣಕ್ಕಿಳಿದಿದ್ದರು. ಇದೀಗ ಅವರನ್ನು ರಿಟೈನ್ ಮಾಡಿಕೊಂಡರೆ, ವಿದೇಶಿ ಆಟಗಾರನಾಗಿ ಆಡಿಸಬೇಕಾಗುತ್ತದೆ. ಇದುವೇ ಈಗ ಹೊಸ ಗೊಂದಲಕ್ಕೆ ಕಾರಣವಾಗಿದೆ.
ಏನಿದು ಗೊಂದಲ?
ಪಿಎಸ್‌ಎಲ್ ನಿಯಮಗಳ ಪ್ರಕಾರ ಪ್ರತಿ ತಂಡದಲ್ಲಿ ಇಂತಿಷ್ಟೇ ವಿದೇಶಿ ಆಟಗಾರರು ಇರಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ಮೊಹಮ್ಮದ್ ಅಮಿರ್ ಅವರ ಈ ಹೊಸ ಪೌರತ್ವದ ಬದಲಾವಣೆ ಲೀಗ್‌ನಲ್ಲಿ ಮೂರು ಪ್ರಮುಖ ಸಮಸ್ಯೆಗಳನ್ನು ಸೃಷ್ಟಿಸಿದೆ.
- ಒಪ್ಪಂದದ ಗೊಂದಲ: ಪಿಎಸ್‌ಎಲ್ 2026ರ ಹರಾಜಿನಲ್ಲಿ ಅಮಿರ್ ಅವರನ್ನು ರಾವಲ್ಪಿಂಡಿ ಫ್ರಾಂಚೈಸಿ 5.4 ಕೋಟಿ PKR ಮೊತ್ತಕ್ಕೆ ಎರಡು ವರ್ಷಗಳ ಒಪ್ಪಂದದ ಆಧಾರದ ಮೇಲೆ ಖರೀದಿ ಮಾಡಿತ್ತು. ಆಗ ಅವರು ಪಾಕಿಸ್ತಾನದ ಸ್ಥಳೀಯ ಆಟಗಾರನಾಗಿದ್ದರು. ಈಗ ಪೌರತ್ವ ಬದಲಾಗಿರುವುದರಿಂದ ಈ ಹಳೆಯ ಒಪ್ಪಂದ ಮುಂದುವರಿಯುತ್ತದೆಯೇ ಅಥವಾ ರದ್ದಾಗುತ್ತದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.
- ವಿದೇಶಿ ಕೋಟಾದ ನಷ್ಟ: ಒಂದು ವೇಳೆ ರಾವಲ್ಪಿಂಡಿ ತಂಡ ಅಮಿರ್ ಅವರನ್ನೇ ರಿಟೈನ್ ಮಾಡಿಕೊಳ್ಳಲು ನಿರ್ಧರಿಸಿದರೆ, ತಂಡವು ತನ್ನ ಅಮೂಲ್ಯವಾದ ವಿದೇಶಿ ಆಟಗಾರರ ಕೋಟಾದಲ್ಲಿ ಒಂದು ಸ್ಥಾನವನ್ನು ಅಮಿರ್ಗಾಗಿ ತ್ಯಾಗ ಮಾಡಬೇಕಾಗುತ್ತದೆ. ಇದು ತಂಡದ ಒಟ್ಟಾರೆ ಸಮತೋಲನವನ್ನು ಕೆಡಿಸಬಹುದು.
- ಹರಾಜಿಗೆ ಲಭ್ಯತೆ: ಒಂದು ವೇಳೆ ಫ್ರಾಂಚೈಸಿಯು ಅವರನ್ನು ವಿದೇಶಿ ಕೋಟಾದಡಿ ಉಳಿಸಿಕೊಳ್ಳಲು ನಿರಾಕರಿಸಿದರೆ, ಅಮಿರ್ ಕಡ್ಡಾಯವಾಗಿ ಹರಾಜಿನ ಪೂಲ್‌ಗೆ ಮರಳಬೇಕಾಗುತ್ತದೆ. ಅದು ಸಹ ಫಾರಿನ್ ಪ್ಲೇಯರ್ ಆಗಿ ಎಂಬುದು ವಿಶೇಷ.
ಬ್ರಿಟನ್ ಪೌರತ್ವ ಸಿಕ್ಕಿದ್ದು ಹೇಗೆ?
ಮೊಹಮ್ಮದ್ ಅಮಿರ್ ಬ್ರಿಟಿಷ್ ಮೂಲದ ವಕೀಲೆ ನರ್ಜಿಸ್ ಖಾನ್ ಅವರನ್ನು ವಿವಾಹವಾಗಿದ್ದಾರೆ. ಈ ವೈವಾಹಿಕ ಸಂಬಂಧದ ಆಧಾರದ ಮೇಲೆ ಅವರಿಗೆ ಬ್ರಿಟನ್ ಪಾಸ್‌ಪೋರ್ಟ್ ದೊರೆತಿದೆ. ಇದರ ಪರಿಣಾಮವಾಗಿ ಇಂಗ್ಲೆಂಡ್‌ನ ‘ದಿ ಹಂಡ್ರೆಡ್’ ಕ್ರಿಕೆಟ್ ಟೂರ್ನಿಯಲ್ಲಿ ಟ್ರೆಂಟ್ ರಾಕೆಟ್ಸ್ ತಂಡವು ಅಮಿರ್ ಅವರನ್ನು ಸ್ಥಳೀಯ ಆಟಗಾರನನ್ನಾಗಿಯೇ ಪರಿಗಣಿಸಿ ಒಪ್ಪಂದ ಮಾಡಿಕೊಂಡಿದೆ.
ಇದನ್ನೂ ಓದಿ: ಕ್ರಿಕೆಟ್‌ನಿಂದ ಅಖಿಲೇಶ್ ರೆಡ್ಡಿಗೆ 8 ವರ್ಷಗಳ ನಿಷೇಧ!
ಅತ್ತ ಇಂಗ್ಲೆಂಡ್ನಲ್ಲಿ ಸ್ಥಳೀಯ ಆಟಗಾರನಾಗಿ ಕಣಕ್ಕಿಳಿಯುತ್ತಿರುವುದರಿಂದ ಮೊಹಮ್ಮದ್ ಅಮಿರ್ ಪಾಕಿಸ್ತಾನದಲ್ಲಿ ವಿದೇಶಿ ಆಟಗಾರನಾಗಿ ಬದಲಾಗಿದ್ದಾರೆ. ಹೀಗಾಗಿಯೇ ಮುಂಬರುವ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯಲ್ಲಿ ಅವರನ್ನು ವಿದೇಶಿ ಕೋಟಾದಡಿ ಆಡಿಸಬೇಕಾದ ಅನಿವಾರ್ಯತೆ ರಾವಲ್ಪಿಂಡಿ ಫ್ರಾಂಚೈಸಿಗೆ ಎದುರಾಗಿದೆ.




