ಪಾಕಿಸ್ತಾನದ್ದು ಬರೀ ನಾಟಕ ಅಷ್ಟೇ: ಮೊಹಮ್ಮದ್ ಕೈಫ್

T20 World Cup 2026: ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್ 2026 ರಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿವೆ. ಈ ಟೂರ್ನಿಯಿಂದ ಈಗಾಗಲೇ ಬಾಂಗ್ಲಾದೇಶ್ ತಂಡ ಹೊರಬಿದ್ದಿದ್ದು, ಅವರ ಬದಲಿಗೆ ಸ್ಕಾಟ್ಲೆಂಡ್ ತಂಡಕ್ಕೆ ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ್ ತಂಡ ಕೂಡ ಟೂರ್ನಿಯಿಂದ ಹೊರ ನಡೆಯುವ ಬೆದರಿಕೆಯೊಡ್ಡಿದೆ.

ಪಾಕಿಸ್ತಾನದ್ದು ಬರೀ ನಾಟಕ ಅಷ್ಟೇ: ಮೊಹಮ್ಮದ್ ಕೈಫ್
Pakistan - Kaif

Updated on: Jan 29, 2026 | 10:53 AM

ಟಿ20 ವಿಶ್ವಕಪ್​ನಿಂದ ಪಾಕಿಸ್ತಾನ್ ತಂಡ ಹೊರಗುಳಿಯಲಿದೆಯಾ? ಈ ಕುತೂಹಲಕಾರಿ ಪ್ರಶ್ನೆಗೆ ಇನ್ನೂ ಸಹ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಅಲ್ಲದೆ ಈ ಪ್ರಶ್ನೆಗೆ ಉತ್ತರ ಕೂಡ ಸಿಗುವುದಿಲ್ಲ. ಏಕೆಂದರೆ ಇವೆಲ್ಲವೂ ಪಾಕಿಸ್ತಾನದ ನಾಟಕ ಅಷ್ಟೇ ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮ್ಮದ್ ಕೈಫ್.

ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಟಿ20 ವಿಶ್ವಕಪ್​ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆಯೊಡ್ಡುತ್ತಿದೆ. ಆದರೆ ಅವರು ಹಾಗೆ ಮಾಡುವುದಿಲ್ಲ. ಏಕೆಂದರೆ ಇದೆಲ್ಲಾ ಪಾಕಿಸ್ತಾನದ ನಾಟಕ. ಈ ರೀತಿ ಹೇಳಿಕೆ ನೀಡುವ ಮೂಲಕ ಅವರು ಪ್ರಚಾರಗಿಟ್ಟಿಸಿಕೊಳ್ಳುತ್ತಿದ್ದಾರೆ ಅಷ್ಟೇ. ನೀವೇ ಕಾದು ನೋಡಿ ಪಾಕಿಸ್ತಾನ್ ಟಿ20 ವಿಶ್ವಕಪ್ ಆಡುತ್ತೆ ಎಂದು ಕೈಫ್ ಹೇಳಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡ ಕಣಕ್ಕಿಳಿಯಲಿದೆ. ಈಗ ಅವರು ಸ್ವಲ್ಪ ಸಹಾನುಭೂತಿ ಪಡೆಯಲು ಬಾಂಗ್ಲಾದೇಶವನ್ನು ಬೆಂಬಲಿಸುವ ನಾಟಕ ಮಾಡುತ್ತಿದ್ದಾರೆ. ಬೇರೇನೂ ಅಲ್ಲ. ಇಲ್ಲಿಯವರೆಗೆ, ಅವರು ಹಾಗೆಯೇ ಮಾಡುತ್ತಾ ಬಂದಿದೆ. ಹೀಗಾಗಿ ವಿಶ್ವಕಪ್​ ಅನ್ನು ಬಹಿಷ್ಕರಿಸುತ್ತೇವೆ ಎನ್ನುವುದು ಪಾಕಿಸ್ತಾನದ ಗೊಡ್ಡು ಬೆದರಿಕೆ ಅಷ್ಟೇ. ಅದಕ್ಕೆ ಅಂತಹ ಮಹತ್ವ ನೀಡಬೇಕಿಲ್ಲ ಎಂದು ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ಬಾಂಗ್ಲಾಗೆ ಪಾಕ್ ಬೆಂಬಲ:

ಟಿ20 ವಿಶ್ವಕಪ್​ನಿಂದ ಬಾಂಗ್ಲಾದೇಶ್ ತಂಡವನ್ನು ಕೈ ಬಿಟ್ಟ ಬೆನ್ನಲ್ಲೇ ಪಾಕ್ ತಂಡ ಮುಂದಿನ ಟೂರ್ನಿಯಲ್ಲಿ ಕಣಕ್ಕಿಳಿಯುವುದು ಅನುಮಾನ ಎಂದು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿಕೆ ನೀಡಿದ್ದರು.

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ತಂಡ ಕಣಕ್ಕಿಳಿಯುವ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಪಾಕ್ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸಬೇಕೆ ಬೇಡವೇ ಎಂಬ ನಿರ್ಧಾರ ಪಾಕಿಸ್ತಾನ ಸರ್ಕಾರಕ್ಕೆ ಬಿಟ್ಟದ್ದು. ಹೀಗಾಗಿ ಪಾಕಿಸ್ತಾನ್ ಸರ್ಕಾರ ಏನು ಹೇಳುತ್ತದೆಯೋ ಅದರ ಮೇಲೆ ಪಾಕ್ ತಂಡದ ವಿಶ್ವಕಪ್ ಭವಿಷ್ಯ ನಿಂತಿದೆ ಮೊಹ್ಸಿನ್ ನಖ್ವಿ ಹೇಳಿದ್ದರು.

ಈ ಮೂಲಕ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ಗೆ ಬೆಂಬಲ ಸೂಚಿಸಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಪರೋಕ್ಷವಾಗಿ ಟಿ20 ವಿಶ್ವಕಪ್​ನಿಂದ ಹೊರಗುಳಿಯುವ ಬೆದರಿಕೆಯೊಡ್ಡಿದ್ದಾರೆ.

ಇತ್ತ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ನಿಂದ ಹೊರಗುಳಿದರೆ ಟೂರ್ನಿಯು ಆರ್ಥಿಕ ನಷ್ಟ ಅನುಭವಿಸಲಿದೆ ಎಂಬ ಲೆಕ್ಕಾಚಾರವನ್ನು ಪಿಸಿಬಿ ಹಾಕಿಕೊಂಡಿದೆ. ಅದರಲ್ಲೂ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯದಿದ್ದರೆ ವಿಶ್ವಕಪ್ ಟೂರ್ನಿಯು ಬಹುತೇಕ ವಿಫಲವಾದಂತೆ. ಹೀಗಾಗಿಯೇ ಬಿಸಿಸಿಐ ಹಾಗೂ ಐಸಿಸಿಗೆ ಬಿಗ್ ಶಾಕ್ ನೀಡಲು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತೆರೆ ಮರೆಯ ಪ್ರಯತ್ನಕ್ಕೆ ಕೈ ಹಾಕಿದೆ.

ಐಸಿಸಿ ಎಚ್ಚರಿಕೆ:

ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ಗೆ ಕೈ ಕೊಡುವ ಸೂಚನೆ ನೀಡಿದ ಬೆನ್ನಲ್ಲೇ ಐಸಿಸಿ ಕೂಡ ಎಚ್ಚರಿಕೆಯ ಸಂದೇಶ ರವಾನಿಸಿದೆ. ಅದು ಕೂಡ ಪಾಕಿಸ್ತಾನ್ ತಂಡವನ್ನು ಬ್ಯಾನ್ ಮಾಡುವ ಸೂಚನೆಯೊಂದಿಗೆ ಎಂಬುದು ವಿಶೇಷ.

ಅಂದರೆ ಪಾಕಿಸ್ತಾನ್ ತಂಡ ಟಿ20 ವಿಶ್ವಕಪ್​ನಿಂದ ಹೊರಗುಳಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಕೈ ಬಿಡುವುದಾಗಿ ಐಸಿಸಿ ಎಚ್ಚರಿಸಿದೆ.

ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ತಂಡಗಳೊಂದಿಗೆ ಯಾವುದೇ ದ್ವಿಪಕ್ಷೀಯ ಸರಣಿ ಆಡಲು ಕೂಡ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ.

ಇದರ ಜೊತೆಗೆ ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ ಆಡಲು ವಿದೇಶಿ ಆಟಗಾರರಿಗೆ ಎನ್​ಒಸಿ ನೀಡುವುದಿಲ್ಲ ಎಂಬುದನ್ನು ಸಹ ಸ್ಪಷ್ಟಪಡಿಸಿದೆ.

ಇಷ್ಟೇ ಅಲ್ಲದೆ ಏಷ್ಯಾಕಪ್ ಟೂರ್ನಿಯಿಂದಲೂ ಬ್ಯಾನ್ ಮಾಡುವುದಾಗಿ ಎಚ್ಚರಿಕೆ ರವಾನಿಸಲಾಗಿದೆ. ಅಂದರೆ ಟಿ20 ವಿಶ್ವಕಪ್​ನಿಂದ ಪಾಕಿಸ್ತಾನ್ ತಂಡ ಹೊರಗುಳಿದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನ ಮಾನ್ಯತೆ ರದ್ದಾಗಲಿದೆ.

ಹೀಗಾಗಿ ಪಾಕಿಸ್ತಾನ್ ತಂಡವು ಟಿ20 ವಿಶ್ವಕಪ್​ನಿಂದ ಹೊರಗುಳಿಯುವಂತಹ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ ಎಂಬುದು ಖಚಿತ. ಇದಾಗ್ಯೂ ವಿಶ್ವಕಪ್ ಬಹಿಷ್ಕಾರದ ಹೇಳಿಕೆಗಳು ಮೊಹಮ್ಮದ್ ಕೈಫ್ ಹೇಳಿದಂತೆ ಪ್ರಚಾರ ತಂತ್ರ ಎಂದಷ್ಟೇ ಹೇಳಬಹುದು.